ಮೈಸೂರು, ಜು. 13(ಆರ್‍ಕೆ)- ಬಳಸಿದ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‍ಮೆಂಟ್) ಕಿಟ್‍ಗಳನ್ನು ಮೈಸೂರಿನ ಪಿಕೆಟಿಬಿ ಆಸ್ಪತ್ರೆ ಕಾಂಪೌಂಡ್ ಮುಂದೆ ಕೆಆರ್‍ಎಸ್ ರಸ್ತೆ ಬದಿ ಸೋಮವಾರ ಮಧ್ಯಾಹ್ನ ಬಿಸಾಡಲಾಗಿತ್ತು. ಇಎಸ್‍ಐ ಆಸ್ಪತ್ರೆ ಮತ್ತು ಪಿಕೆ ಸ್ಯಾನಿಟೋರಿಯಂ ಸರ್ಕಲ್ ನಡುವೆ ಕೆಆರ್‍ಎಸ್ ರಸ್ತೆಬದಿ ಬಳಸಿ ಬಿದ್ದಿದ್ದ ಈ ಒಂದು ಜೊತೆ ಪಿಪಿಇ ಕಿಟ್‍ಗಳ ಕಂಡು ಸಾರ್ವಜನಿಕರು ಆತಂಕಗೊಂಡಿದ್ದರು. ಸಂಜೆಯಾದರೂ ಆ ಬಗ್ಗೆ ಯಾರೂ ಗಮನಹರಿಸದಿದ್ದಾಗ ಬೃಂದಾವನ ಬಡಾವಣೆ ನಿವಾಸಿ ಬಿ.ಕೆ. ನಾಗೇಂದ್ರ, ಪಾಲಿಕೆ ವಲಯ ಕಚೇರಿ 4ರ ವಲಯಾಧಿಕಾರಿ ಪ್ರಿಯದರ್ಶಿನಿ ಹಾಗೂ ಪಾಲಿಕೆ ವಲಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ಅವರಿಗೆ ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕೆ ಬಂದ ಪಾಲಿಕೆ ಹೆಲ್ತ್ ಇನ್ಸ್‍ಪೆಕ್ಟರ್ ಜಯಮಾರುತಿ, ಹೌಸ್‍ಕೀಪಿಂಗ್ ಸೂಪರ್‍ವೈಸರ್ ಬಾಬು ಅವರು ಪಿಪಿಇ ಕಿಟ್ ಧರಿಸಿದ ನೌಕರರೊಬ್ಬರಿಂದ ರಸ್ತೆಬದಿ ಬಿದ್ದಿದ್ದ ಈ ಪಿಪಿಇ ಕಿಟ್‍ಗಳನ್ನು ಕೊಂಡೊಯ್ದು ಅಗತ್ಯ ಸುರಕ್ಷತಾ ಕ್ರಮದೊಂದಿಗೆ ಕೋವಿಡ್ ಮಾರ್ಗಸೂಚಿ ಪ್ರೋಟೊಕಾಲ್ ಅನುಸಾರ ವಿಲೇವಾರಿ ಮಾಡಿಸಿದರು. ಮೈಸೂರಲ್ಲಿ ದಿನೇ ದಿನೆ ಕೊರೊನಾ ಪ್ರಕರಣ ಹಾಗೂ ಸಾವುಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರು ಆತಂಕ ಗೊಂಡಿರುವ ಇಂತಹ ಸಂದರ್ಭದಲ್ಲಿ ಬಳಕೆ ಮಾಡಿದ ಪಿಪಿಇ ಕಿಟ್‍ಗಳನ್ನು ಸಾರ್ವಜನಿ ಕರು ಓಡಾಡುವ ರಸ್ತೆ ಬದಿ ಬಿಸಾಡಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಕೋವಿಡ್ ಆಸ್ಪತ್ರೆ ಆಜುಬಾಜಲ್ಲಿ ಪಿಕೆಟಿಬಿ, ಇಎಸ್‍ಐ, ಜಯದೇವ ಹೃದ್ರೋಗ, ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಮತ್ತು ಸರ್ಕಾರಿ ಆಯುರ್ವೇದ ಆಸ್ಪತ್ರೆಗಳೂ ಇರುವುದರಿಂದ ಬಳಸಿದ ಪಿಪಿಇ ಕಿಟ್‍ಗಳನ್ನು ಎಲ್ಲೆಂದರಲ್ಲಿ ಬಿಸಾಡಿರುವುದರಿಂದ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕೊರೊನಾ ವೈರಸ್ ಹರಡುತ್ತದೆ ಎಂಬುದು ಗೊತ್ತಿದ್ದರೂ ಈ ಕೃತ್ಯ ಎಸಗಿರುವವರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.