ಮೈಸೂರು, ಜು.13(ಪಿಎಂ)- ಮೈಸೂರು ನಗರದ 6 ಕೇಂದ್ರಗಳಲ್ಲಿ ಎಸ್‍ಎಸ್ ಎಲ್‍ಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಸೋಮವಾರ ಆರಂಭವಾಗಿದ್ದು, ಮೊದಲ ದಿನವಾದ ಸೋಮವಾರ ಶೇ.90ರಷ್ಟು ಮೌಲ್ಯಮಾಪ ಕರು ಕರ್ತವ್ಯ ನಿರ್ವಹಿಸಿದರು.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಶೇ.10ರಷ್ಟು ಮೌಲ್ಯಮಾಪಕರು ಮೊದಲ ದಿನ ಮೌಲ್ಯಮಾಪನದಿಂದ ದೂರ ಉಳಿ ದರು. ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಇನ್ನಿತರ ಅನಾರೋಗ್ಯ ಲಕ್ಷಣ ಹೊಂದಿ ರುವವರು ಸ್ವಯಂ ಪ್ರೇರಿತವಾಗಿ ಮೌಲ್ಯ ಮಾಪನ ಕಾರ್ಯದಿಂದ ದೂರ ಉಳಿ ಯಲು ಅವಕಾಶ ಕೋರಿದ ಹಿನ್ನೆಲೆಯಲ್ಲಿ ಅವರಿಗೆ ವಿನಾಯಿತಿ ನೀಡಲಾಯಿತು.
ಮೈಸೂರಿನ ಕುವೆಂಪುನಗರದ ಜ್ಞಾನ ಗಂಗಾ ಪ್ರೌಢಶಾಲೆ, ಜಯಲಕ್ಷ್ಮೀಪುರಂನ ಚಿನ್ಮಯ ಪ್ರೌಢಶಾಲೆ, ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಪ್ರೌಢಶಾಲೆ, ಸರಸ್ವತಿ ಪುರಂನ ವಿಜಯ ವಿಠ್ಠಲ ಪ್ರೌಢಶಾಲೆ, ವಿವಿ ಮೊಹಲ್ಲಾ ನಿರ್ಮಲ ಪ್ರೌಢಶಾಲೆ ಹಾಗೂ ಎನ್‍ಆರ್ ಮೊಹಲ್ಲಾದ ಸೆಂಟ್ ಫಿಲೋ ಮಿನಾ ಪ್ರೌಢಶಾಲೆಯ ಕೇಂದ್ರಗಳಲ್ಲಿ ಮೊದಲ ದಿನವಾದ ಸೋಮವಾರ ಸುಗಮವಾಗಿ ಮೌಲ್ಯಮಾಪನ ಕಾರ್ಯ ನಡೆಯಿತು.
ಕೊರೊನಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮೌಲ್ಯಮಾಪಕರನ್ನೂ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಾಪಮಾನ ತಪಾಸಣೆ ನಡೆಸಿ ಕೇಂದ್ರದ ಕೊಠಡಿಗೆ ಪ್ರವೇಶಿಸಲು ಕ್ರಮ ಕೈಗೊಳ್ಳಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಕೇಂದ್ರದ ಪ್ರತಿ ಕೊಠಡಿಯಲ್ಲಿ 14 ಮಂದಿ ಮೌಲ್ಯಮಾಪಕರು ಮಾತ್ರವೇ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿತ್ತು.
ಶನಿವಾರದೊಳಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪ್ರತಿ ಕೇಂದ್ರದಲ್ಲಿ 300ರಿಂದ 350 ಮೌಲ್ಯ ಮಾಪಕರು ಕರ್ತವ್ಯ ನಿರ್ವಹಿಸಲಿದ್ದು, ಒಟ್ಟಾರೆ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮೂಲ ಗಳು ತಿಳಿಸಿವೆ. ಈ ಬಾರಿ ತಾಲೂಕು ಕೇಂದ್ರದಿಂದ ಆಗಮಿಸುವ ಮೌಲ್ಯ ಮಾಪಕರಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಬರುವ ಮೌಲ್ಯಮಾಪಕರಿಗೆ ಅನುಕೂಲ ಕಲ್ಪಿ ಸಲು ಈ ವ್ಯವಸ್ಥೆ ಮಾಡಲಾಗಿದೆ. ಮೈಸೂರು ನಗರದಿಂದ ಬರುವವರು ಬಹುತೇಕರು ತಮ್ಮ ಸ್ವಂತ ವಾಹನಗಳಲ್ಲಿ ಬಂದು, ಕರ್ತವ್ಯ ನಿರ್ವಹಿಸುತ್ತಿದ್ದಾರೆ.