ಮೈಸೂರು, ಜು.12 (ಆರ್‍ಕೆಬಿ)- ಭಾನುವಾರದ ಲಾಕ್ ಡೌನ್ ಮೈಸೂರಿನಲ್ಲಿ ಯಶಸ್ವಿಯಾಗಿದ್ದು, ಜನರು ಮನೆಯಿಂದ ಹೊರ ಬರದೆ ಸ್ವಯಂ ಪ್ರೇರಿತರಾಗಿ ಲಾಕ್‍ಡೌನ್ ಅಳವಡಿಸಿ ಕೊಂಡು, ಜಿಲ್ಲಾಡಳಿತಕ್ಕೆ ಸಹಕಾರ ನೀಡಿದರು. ಅಲ್ಲೊಂದು ಇಲ್ಲೊಂದು ವಾಹನಗಳು ಓಡಾಡುತ್ತಿದ್ದುದು ಬಿಟ್ಟರೆ ಮೈಸೂ ರಿನ ಎಲ್ಲಾ ರಸ್ತೆಗಳು ಖಾಲಿ ಇದ್ದವು.
ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗದಂತಾಗಿರುವ ಕೊರೊನಾ ಸೋಂಕು ಮತ್ತು ಸಾವುಗಳ ಸಂಖ್ಯೆ ಯಿಂದ ಸರ್ಕಾರ ನಗರಗಳಲ್ಲಿ ಭಾನುವಾರದ ಪೂರ್ಣ ಪ್ರಮಾಣದ ಲಾಕ್‍ಡೌನ್ ಘೋಷಿಸಿದೆ. ಮೈಸೂರಿನಲ್ಲಿ ಲಾಕ್‍ಡೌನ್‍ನ 2ನೇ ಭಾನುವಾರ ವಾಗಿದ್ದು, ವ್ಯಾಪಾರ ವಹಿವಾಟು ಪೂರ್ಣ ಬಂದ್ ಆಗಿತ್ತು. ಕೆ.ಆರ್.ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಧನ್ವಂತರಿ ರಸ್ತೆ, ಕೆ.ಟಿ.ಸ್ಟ್ರೀಟ್, ಗಾಂಧಿ ವೃತ್ತ, ಬಿಎನ್ ರಸ್ತೆ ಸೇರಿದಂತೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಸರ್ಕಾರಿ ಸಾರಿಗೆ ಮತ್ತು ಖಾಸಗಿ ಬಸ್‍ಗಳು, ಆಟೋ,
ಟ್ಯಾಕ್ಸಿಗಳು, ಕ್ಯಾಬ್ ಇತರೆ ಯಾವುದೇ ವಾಹನ ಸಂಚಾರ ಇರಲಿಲ್ಲ. ಗ್ರಾಮಾಂತರ, ನಗರ ಬಸ್ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಹೀಗಾಗಿ ಜನರ ಓಡಾಟವೂ ಇಲ್ಲದೆ ಲಾಕ್‍ಡೌನ್ ಯಶಸ್ವಿಯಾಯಿತು. ವೈರಸ್ ಭೀತಿಯಿಂದಾಗಿ
ಜನರು ಸ್ವಯಂಪ್ರೇರಣೆಯಿಂದ ಬಂದ್‍ಗೆ ಉತ್ತಮ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಒತ್ತಡವಿಲ್ಲದೆ ಕರ್ತವ್ಯ ನಿರ್ವಹಿಸಿದರು. ಶ್ರೀರಾಂಪೇಟೆ, ವಿನೋಬಾ ರಸ್ತೆ, ಸಯ್ಯಾಜಿರಾವ್ ರಸ್ತೆ, ದಿವಾನ್ಸ್ ರಸ್ತೆ, ಆಯುರ್ವೇದ ವೃತ್ತ, ಶೇಷಾದ್ರ್ರಿ ರಸ್ತೆ ಸೇರಿ ದಂತೆ ಹಲವು ಪ್ರಮುಖ ರಸ್ತೆ, ವೃತ್ತಗಳಲ್ಲಿ ಬ್ಯಾರಿಕೇಡ್‍ಗಳಿಂದ ರಸ್ತೆಗಳನ್ನು ಬಂದ್ ಮಾಡಿ ಜನರ ಓಡಾಟವನ್ನು ನಿಯಂತ್ರಿಸಲಾಗಿತ್ತು. ಕಲಾಮಂದಿರದ ಎದುರಿನ ಸಿಗ್ನಲ್ ಬಳಿ ಬ್ಯಾರಿ ಕೇಡ್ ಹಾಕಿದ್ದ ಪೊಲೀಸರು ಅನಗತ್ಯವಾಗಿ ಓಡಾಡುವವರನ್ನು ತಡೆದು ಪ್ರಶ್ನಿಸುತ್ತ್ತಿದ್ದರು. ಶನಿವಾರ ಸಂಜೆಯಿಂದ ಸೋಮವಾರ ಮುಂಜಾನೆ 5ರವರೆಗೂ ಲಾಕ್‍ಡೌನ್ ಜಾರಿಯ ಲ್ಲಿರಲಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಬೋಟಿ ಬಜಾರ್‍ನಲ್ಲಿ ಮಾಂಸ ವ್ಯಾಪಾರ ನಡೆಯಿತು. ನಗರದ ಹಲವೆಡೆ ಕುರಿ, ಕೋಳಿ ಮತ್ತು ಮೀನಿನ ಮಾಂಸದ ಅಂಗಡಿಗಳಲ್ಲಿ ಜನರು ಸಾಮಾಜಿಕ ಅಂತರದಡಿ ಕಾಯ್ದುಕೊಂಡು ಖರೀದಿಸಿದರು. ಮೈಸೂರು ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದ್ದು ಪೊಲೀಸರು ನಿಟ್ಟುಸಿರು ಬಿಡುವಂತಾಯಿತು.