ಮೈಸೂರು, ಜು. 12- ಕೊರೊನಾ ಸಾವಿನ ಸಂಖ್ಯೆ ಭಾನುವಾರವೂ ಮುಂದುವರೆದಿದ್ದು, ಇಂದು ಮೈಸೂರಿನಲ್ಲಿ ಮೂವರು, ಹಾಸನ ಮತ್ತು ಕೊಡಗಲ್ಲಿ ತಲಾ ಇಬ್ಬರು ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇ ಗಾಲದ ಓರ್ವರು ಮೃತಪಟ್ಟಿದ್ದಾರೆ.
ಮೈಸೂರಿನಲ್ಲಿ ಭಾನುವಾರ 42 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 815ಕ್ಕೆ ಏರಿಕೆಯಾಗಿದೆ. 43 ಮಂದಿ ಗುಣಮುಖರಾಗಿದ್ದು, ಈವರೆಗೆ 428 ಮಂದಿ ಗುಣಮುಖ ರಾದಂತಾಗಿದೆ. ಇಂದು 68 ವರ್ಷ ವಯಸ್ಸಿನ ಉದಯಗಿರಿ ನಿವಾಸಿ, ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಂಡ್ಯ ಜಿಲ್ಲೆ ಕಿರುಗಾವಲು ಗ್ರಾಮದ 69 ವರ್ಷದ ವ್ಯಕ್ತಿ ಮತ್ತು ತಿ.ನರಸೀಪುರದ 76 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೈಸೂರು ಜಿಲ್ಲೆಯಲ್ಲಿ 31 ಮಂದಿ ಸಾವನ್ನಪ್ಪಿದಂತಾಗಿದೆ.
ಉಳಿದ 356 ಸಕ್ರಿಯ ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 221, ಖಾಸಗಿ ಆಸ್ಪತ್ರೆಯಲ್ಲಿ 35 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ. 100 ಮಂದಿ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಇಂದು ಪತ್ತೆಯಾದ ಸೋಂಕಿತರು ವಾಸಿಸುತ್ತಿದ್ದ ಮೈಸೂರಿನ ವಿದ್ಯಾರಣ್ಯಪುರಂ 7ನೇ ಮುಖ್ಯರಸ್ತೆಯ 4ನೇ ಕ್ರಾಸ್, ರಾಜೀವ್‍ನಗರ 2ನೇ ಹಂತದ ಸಿದ್ದಪ್ಪಾಜಿ ದೇವಸ್ಥಾನದ ಹತ್ತಿರದ ರಸ್ತೆ. ಬನ್ನಿಮಂಟಪದ ಕೆಎಸ್‍ಆರ್‍ಟಿಸಿ ಜಿ ಬ್ಲಾಕ್, ಗೌಸಿಯಾನಗರ 13ನೇ ಕ್ರಾಸ್, ಜ್ಯೋತಿ ನಗರ ಬಿ ಕ್ವಾರ್ಟರ್ಸ್, ಬನ್ನಿಮಂಪಟ 2ನೇ ಮುಖ್ಯ ರಸ್ತೆ, ಜಯಲಕ್ಷ್ಮಿಪುರಂ, ಜೆಸಿ ನಗರ, ಮಹಾಲಕ್ಷಿ ಬಡಾವಣೆಯ 1ನೇ ಮುಖ್ಯ ರಸ್ತೆ 8ನೇ ಕ್ರಾಸ್, ಮಂಡಿಮೊಹಲ್ಲಾ ಕೆ.ಟಿ.ಸ್ಟ್ರೀಟ್‍ನ 4ನೇ ಕ್ರಾಸ್, ಹುಣಸೂರು ತಾಲೂಕು ಹನಗೋಡು ಬಳಿಯ ರಾಮಗೊಂಡನ ಹಳ್ಳಿ ಸೇರಿದಂತೆ 10 ಪ್ರದೇಶಗಳನ್ನು ಮೈಸೂರು ಜಿಲ್ಲಾಡಳಿತ ಹೊಸ ಕಂಟೇನ್ಮೆಂಟ್ ಝೋನ್‍ಗಳಾಗಿ ಜೋಷಿಸಿವೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಮರಾಜನಗರ ಜಿಲ್ಲೆ ಕೊಳ್ಳೇಗಾರದ ಪಟ್ಟಣದ ಹೊಸ ಬೀದಿ, 71 ವರ್ಷದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದು, ಈ ವ್ಯಕ್ತಿಯ ಸಾವಿನ ಸಂಖ್ಯೆಯೂ ಮೈಸೂರು ಜಿಲ್ಲೆಗೆ ಸೇರುತ್ತದೆಯೇ ಅಥವಾ ಚಾಮರಾಜನಗರ ಜಿಲ್ಲೆಗೆ ಸೇರುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಹಾಸನ ಜಿಲ್ಲೆಯಲ್ಲಿ ಭಾನುವಾರ ಕೊರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಹಾಸನನಗರದ 57 ವರ್ಷದ ವ್ಯಕ್ತಿ ಮತ್ತು ಆಲೂರು ತಾಲೂಕಿನ 45 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಈ ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಹಾಸನದಲ್ಲಿ ಇಂದು 19 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 687ಕ್ಕೆ ಏರಿಕೆಯಾಗಿದೆ. ಈವರೆಗೆ 455 ಮಂದಿ ಗುಣಮುಖರಾಗಿದ್ದು, ಉಳಿದ 212 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.