ಮೈಸೂರು, ಸೆ.29(ಪಿಎಂ)-ಅಡುಗೆ ಎಣ್ಣೆ ದರದಲ್ಲಿ 15 ದಿನಗಳ ಹಿಂದೆ ದಿಢೀರ್ ಏರಿಕೆಯಾಗಿತ್ತು. ಈಗ 4 ದಿನಗಳಿಂದ ದರದಲ್ಲಿ ಕೊಂಚ ಇಳಿಕೆಯಾಗಿದ್ದು, ಗ್ರಾಹಕರು ತುಸು ನಿಟ್ಟುಸಿರು ಬಿಡು ವಂತಾಗಿದೆ. 1 ಲೀ. ಸನ್‍ಪ್ಯೂರ್ ಅಡುಗೆ ಎಣ್ಣೆ 4 ದಿನ ಗಳಿಂದ 117 ರೂ.ಗೆ ಇಳಿಕೆಯಾಗಿದೆ. 15 ದಿನಗಳ ಹಿಂದೆ 1 ಲೀ. ಸನ್‍ಪ್ಯೂರ್ ರಿಫೈಂಡ್ ಆಯಿಲ್ ದರ 102 ರೂ.ನಿಂದ 130 ರೂ.ಗೆ ಜಿಗಿದಿತ್ತು. ಗೋಲ್ಡ್ ವಿನ್ನರ್ 103 ರೂ.ನಿಂದ 120 ರೂ.ಗೆ ಹಾಗೂ ಇಮಾಮಿ ಸನ್‍ಫ್ಲವರ್ 103 ರೂ.ರಿಂದ 117 ರೂ.ಗೆ ಏರಿಕೆಯಾಗಿದ್ದವು.
ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮೈಸೂರಿನ ಸಂತೆಪೇಟೆ ಮತ್ತು ಇತರೆ ಪ್ರದೇಶದ ವ್ಯಾಪಾರಸ್ಥರು, 15 ದಿನಗಳ ಹಿಂದೆ ಅಡುಗೆ ಎಣ್ಣೆ ದರದಲ್ಲಿ ಭಾರಿ ಏರಿಕೆಯಾಗಿತ್ತು. ಈಗ 4 ದಿನಗಳ ಹಿಂದೆ ಕೊಂಚ ಇಳಿಕೆಯಾಗಿದೆ. ಆದರೆ ಬೆಲೆ ಹೆಚ್ಚಿದ್ದಾಗ ಖರೀದಿ ಮಾಡಿದ ಎಣ್ಣೆ ದಾಸ್ತಾನು ಈಗಲೂ ಇದ್ದು, ಅವನ್ನು ಈಗಿನ ತಗ್ಗಿದ ಬೆಲೆಗೇ ಮಾರಾಟ ಮಾಡಬೇಕು. ಇದರಿಂದ ನಮಗೆ ನಷ್ಟ ಖಚಿತ ಎಂದು ಬೇಸರ ವ್ಯಕ್ತಪಡಿಸಿದರು.
ಆಕಾಶ್ ಸೇಲ್ಸ್ ಕಾರ್ಪೊರೇಷನ್ ಮಾಲೀಕ ಹಾಗೂ ಸನ್‍ಪ್ಯೂರ್ ಅಡುಗೆ ಎಣ್ಣೆ ವಿತರಕ ಎಸ್.ರಮೇಶ್ ಮಾತನಾಡಿ, ಪ್ರಸ್ತುತ ಎಣ್ಣೆ ಬೆಲೆಯಲ್ಲಿ ಇಳಿಕೆಯಾಗಿದೆ. 10 ಲೀ. ಸನ್‍ಪ್ಯೂರ್ ಅಡುಗೆ ಎಣ್ಣೆ 15 ದಿನಗಳ ಹಿಂದೆ 1,125 ರೂ.ನಿಂದ 1,300 ರೂ.ಗೆ ಹೆಚ್ಚಳವಾಯಿತು(175 ರೂ. ಏರಿಕೆ). ಪೂರೈಕೆ ಕಡಿಮೆಯಾಗಿದ್ದರಿಂದ ಧಾರಣೆಯಲ್ಲಿ ಹೆಚ್ಚಳವಾಗಿತ್ತು. ಪೂರೈಕೆ ಯಥಾಸ್ಥಿತಿಗೆ ಬಂದಿದ್ದರಿಂದ ಈಗ ಧಾರಣೆ ತುಸು ಕಡಿಮೆಯಾಗಿದೆ. ಸದ್ಯಕ್ಕೆ ಏರಿಕೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಿದರು.