ಮೈಸೂರು, ಸೆ.29(ಆರ್‍ಕೆ)- ತ್ವರಿತಗತಿ ಯಲ್ಲಿ ಕೋವಿಡ್-19 ಪರೀಕ್ಷೆ ನಡೆಸಲು ಇನ್ನೂ 25 ಸ್ಕ್ವಾಡ್ ಟೀಂ ನಿಯೋಜಿಸಿಕೊಳ್ಳುವಂತೆ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದು ಕಚೇರಿ ಸಭಾಂಗಣದಲ್ಲಿ ಪ್ರಥಮ ಸಭೆ ನಡೆಸಿದ ಅವರು, ಮೈಸೂರು ನಗರ ಮತ್ತು ಜಿಲ್ಲೆ ಯಾದ್ಯಂತ ಕೋವಿಡ್ ಸೋಂಕಿನ ಸಂಖ್ಯೆ, ಚಿಕಿತ್ಸೆಗೆ ಲಭ್ಯವಿರುವ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‍ಗಳು, ಚಿಕಿತ್ಸೆಗೆ ಬೇಕಾಗುವ ಸೌಲಭ್ಯ, ವೈದ್ಯರು, ಸಿಬ್ಬಂದಿ, ಆಂಬುಲೆನ್ಸ್ ವ್ಯವಸ್ಥೆ ಹಾಗೂ ನಿರ್ವಹಣಾ ಸ್ಥಿತಿಗತಿ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.
ಕೊರೊನಾ ಸೋಂಕಿತರ ಸಾವಿನ ಸಂಖ್ಯೆ, ಗುಣಮುಖರಾಗುತ್ತಿರುವವರು, ಹೋಂ ಕ್ವಾರಂಟೈನ್‍ನಲ್ಲಿರುವವರ ಮೇಲೆ ನಿಗಾ ವಹಿಸುವುದು, ಅಂತ್ಯಕ್ರಿಯೆಗೆ ಇರುವ ವ್ಯವಸ್ಥೆ, ಎದುರಾಗುತ್ತಿರುವ ಸವಾಲುಗಳು, ಪರಿಹಾರೋಪಾಯಗಳ ಬಗ್ಗೆಯೂ ರೋಹಿಣಿ ಸಿಂಧೂರಿ ಚರ್ಚೆ ನಡೆಸಿದರು.
ಪ್ರಸ್ತುತ ಜಿಲ್ಲೆಯಲ್ಲಿ 70 ಸ್ಕ್ವಾಟಿಕ ಮತ್ತು 30 ಸಂಚಾರಿ ತಂಡಗಳು ಕೋವಿಡ್ ಪರೀಕ್ಷಾ ಪ್ರಕ್ರಿಯೆಯಲ್ಲಿ ನಿರತವಾಗಿವೆ. ಸಮು ದಾಯಕ್ಕೆ ಸೋಂಕು ಹರಡಿರುವುದರಿಂದ ಪರೀಕ್ಷೆಯನ್ನು ಮತ್ತಷ್ಟು ತ್ವರಿತಗೊಳಿಸಲು ಹೆಚ್ಚುವರಿ ತಂಡ ನಿಯೋಜಿಸಲು ಅನುಮತಿ ನೀಡಬೇಕೆಂದು ಆರೋಗ್ಯ ಇಲಾಖೆ ಅಧಿ ಕಾರಿಗಳು ಸಭೆಯಲ್ಲಿ ಕೋರಿಕೊಂಡರು.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಈಗಿರುವ 30 ಸಂಚಾರಿ ತಂಡ ಗಳ ಜೊತೆಗೆ ಇನ್ನೂ 25 ತಂಡಗಳನ್ನು ನಿಯೋಜಿಸಿ ಅವುಗಳಿಗೆ ಬೇಕಾದ ಲ್ಯಾಬ್ ಟೆಕ್ನಿಷಿಯನ್ ಮತ್ತು ಡೇಟಾ ಎಂಟ್ರಿ ಅಪ ರೇಟರ್‍ಗಳನ್ನು ನೇಮಿಸಿಕೊಳ್ಳುವಂತೆ ಜಿಲ್ಲಾ ಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಮಾದರಿ ಸಂಗ್ರಹಕ್ಕೆ ಅಗತ್ಯವಿರುವ ಉಪ ಕರಣಗಳನ್ನು ಜಿಲ್ಲಾಡಳಿತದ ಅನುದಾನ ದಲ್ಲೇ ಖರೀದಿಸಿ ಆರೋಗ್ಯ ಇಲಾಖೆಗೆ ನೀಡು ವಂತೆ ಸೂಚಿಸಿದ ಅವರು, ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡುವ ಮೂಲಕ ಕೊರೊನಾ ದಿಂದಾಗುವ ಸಾವಿನ ಸಂಖ್ಯೆ ಕಡಿಮೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇ ಕೆಂದು ಅವರು ಸಲಹೆ ನೀಡಿದರು.
ಅಡಿಷನಲ್ ಡಿಸಿ ಬಿ.ಎಸ್.ಮಂಜುನಾಥ ಸ್ವಾಮಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಜಿಲ್ಲಾ ಆರೋ ಗ್ಯಾಧಿಕಾರಿ ಡಾ.ಆರ್.ವೆಂಕಟೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಪ್ರಸಾದ್, ಕುಟುಂಬ ಕಲ್ಯಾಣಾಧಿಕಾರಿ ಡಾ.ರವಿ ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.