ಮೈಸೂರು, ಸೆ.29(ಆರ್‍ಕೆಬಿ)- ಪೌರಕಾರ್ಮಿಕರಿಗೆ ನೇರ ವೇತನ ಹಾಗೂ ಬೆಳಗಿನ ಉಪಾಹಾರದ ಭತ್ಯೆ ನೀಡುತ್ತಿರುವ ರೀತಿಯಲ್ಲೇ ನಮಗೂ ನೇರ ವೇತನ, ಭತ್ಯೆ ನೀಡಬೇಕೆಂದು ಆಗ್ರಹಿಸಿ ಮೈಸೂರು ಜಿಲ್ಲೆಯ ಪಾಲಿಕೆ, ನಗರಸಭೆ, ಪುರಸಭೆಗಳ ಹಾಗೂ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರ ಹೊರಗುತ್ತಿಗೆ ಸ್ವಚ್ಛತೆ ವಾಹನ ಚಾಲಕರು ಮೈಸೂರು ಮಹಾನಗರ ಪಾಲಿಕೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಬಳಿಕ ಪಾಲಿಕೆ ಉಪ ಆಯುಕ್ತ ಬಿಳಿಗಿರಿರಂಗಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಪಾಲಿಕೆ ಖಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿ ಕರ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಎನ್.ಮಾರ, ಜಿ.ಮಹದೇವ, ಶ್ರೀನಿವಾಸ್, ಆರ್.ಶಿವಣ್ಣ, ಎಸ್.ಎಂ.ಪಳನಿಸ್ವಾಮಿ, ಎಸ್.ಮುರುಗೇಶ್ ಇನ್ನಿತರರು ನೇತೃತ್ವ ವಹಿಸಿದ್ದರು. 9-10 ವರ್ಷಗಳಿಂದ ಪಾಲಿಕೆಯ ವಾಹನ ವಿಭಾಗದಲ್ಲಿ ಹೊರಗುತ್ತಿಗೆ ಸ್ವಚ್ಛತಾ ವಾಹನ ಮತ್ತು ಭಾರೀ ವಾಹನ ಚಾಲಕರಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ನ್ಯಾಯ ದೊರಕಬೇಕು. ಈಗಾಗಲೇ ಅನೇಕ ಬಾರಿ ಈ ಬಗ್ಗೆ ಹೋರಾಟ ನಡೆಸಿದ್ದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ದೂರಿದರು. ಎಸ್.ಎಂ. ಪಳನಿಸ್ವಾಮಿ, ಎನ್.ಅರುಣ್ ಕುಮಾರ್, ಕುಮಾರಸ್ವಾಮಿ, ಸ್ವಾಮಿ, ಎಂ.ರಾಜೀವ್, ಶೇಷ, ಬಾಬು ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.