ಮೈಸೂರು: ಬೆಳಿಗ್ಗೆ ಸುಮಾರು 9ಕ್ಕೆ ಕೆಲಸ ಸ್ಥಗಿತಗೊಳಿಸಿ ಆಸ್ಪತ್ರೆಯ ಮುಖ್ಯದ್ವಾರದಲ್ಲಿ ಪ್ರತಿಭಟನೆ ಕುಳಿತ ಪೌರಕಾರ್ಮಿಕರಿಗೆ ಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ 10ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ತಮ್ಮ ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುಮಾರು 11.20ರ ವೇಳೆಗೆ ಪ್ರತಿಭಟನಾನಿರತರ ಬಳಿ ಬಂದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿರೂಪಾಕ್ಷ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೂ ಪಟ್ಟು ಬಿಡದೆ ತಮ್ಮ ಪ್ರತಿಭಟನೆ ಮುಂದುವರೆಸಿದರು.
ಈ ವೇಳೆ ಪೌರಕಾರ್ಮಿಕರ ಬೇಡಿಕೆಗಳನ್ನು ಆಲಿಸಿದ ಡಾ.ವಿರೂಪಾಕ್ಷ, ಗುತ್ತಿಗೆದಾರರನ್ನು ದೂರವಾಣ ಮೂಲಕ ಸಂಪರ್ಕಿಸಿದಾಗ, ನಿನ್ನೆ ಸಂಜೆಯೇ ವೇತನವನ್ನು ಕಾರ್ಮಿಕರ ಖಾತೆಗೆ ಸಂದಾಯ ಮಾಡಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಒಮ್ಮೆ ತಮ್ಮ ಖಾತೆಯಲ್ಲಿ ಹಣ ಸಂದಾಯವಾಗಿರುವುದನ್ನು ನೋಡಿ. ಅದಾಗ್ಯೂ ಖಾತೆಗೆ ವೇತನ ಜಮಾ ಆಗದಿದ್ದಲ್ಲಿ ಗುತ್ತಿಗೆದಾರರನ್ನು ಸಂಪರ್ಕಿಸಿ ವೇತನ ಪಾವತಿಗೆ ಕ್ರಮ ವಹಿಸುತ್ತೇನೆ.
ಪಿಎಫ್ ಮತ್ತು ಇಎಸ್‍ಐ ಬಗ್ಗೆ ಗುತ್ತಿಗೆದಾರರಿಂದ ಮಾಹಿತಿ ಪಡೆದು ಪರಿಶೀಲನೆ ಮಾಡುತ್ತೇನೆ. ಸಮವಸ್ತ್ರಕ್ಕೆ ತಲಾ 1500 ರೂ. ವಸೂಲಿ ಸಂಬಂಧವೂ ಗುತ್ತಿಗೆದಾರರನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಇದಕ್ಕಾಗಿ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಸದ್ಯ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಯಿತು.