ಪಿಕೆಟಿಬಿ ಆಸ್ಪತ್ರೆ ಗುತ್ತಿಗೆ ನೌಕರರ ಪ್ರತಿಭಟನೆ
ಮೈಸೂರು

ಪಿಕೆಟಿಬಿ ಆಸ್ಪತ್ರೆ ಗುತ್ತಿಗೆ ನೌಕರರ ಪ್ರತಿಭಟನೆ

April 27, 2018

ಮೈಸೂರು: ಸಮಯಕ್ಕೆ ಸರಿಯಾಗಿ ವೇತನ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೇ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಆರ್‍ಎಸ್ ರಸ್ತೆಯ ಪಿಕೆಟಿಬಿ ಆಸ್ಪತ್ರೆಯ ಗುತ್ತಿಗೆ ಸ್ವಚ್ಛತಾ ಕೆಲಸಗಾರರು ಹಾಗೂ ಭದ್ರತಾ ಸಿಬ್ಬಂದಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಕರ್ನಾಟಕ ರಾಜ್ಯ ಜಿಲ್ಲಾ ಆಸ್ಪತ್ರೆಗಳ ಗುತ್ತಿಗೆ ಪೌರಕಾರ್ಮಿಕರು ಹಾಗೂ ನೌಕರರ ಸಂಘದ ಆಶ್ರಯದಲ್ಲಿ ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆ ಕೆಲಸ ಸ್ಥಗಿತಗೊಳಿಸಿ ಆಸ್ಪತ್ರೆಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸಮಯಕ್ಕೆ ಸರಿಯಾಗಿ ವೇತನ ನೀಡಲು ಗುತ್ತಿಗೆದಾರರು ಮುಂದಾಗುತ್ತಿಲ್ಲ. ಪೌರಕಾರ್ಮಿಕರ ಪಿಎಫ್ ಮತ್ತು ಇಎಸ್‍ಐ ಖಾತೆಗೂ ಸರಿಯಾಗಿ ಹಣ ಪಾವತಿ ಮಾಡುತ್ತಿಲ್ಲ. ತುರ್ತು ಸಂದರ್ಭದಲ್ಲಿ ರಜೆ ನೀಡದೇ ಶೋಷಣೆ ಮಾಡಲಾಗುತ್ತಿದೆ. ಗುತ್ತಿಗೆದಾರರ ಈ ದರ್ಪದ ನಡೆಯಿಂದ ಕೆಲಸ ಮಾಡುವುದೇ ದುಸ್ತರವಾಗಿದೆ ಎಂದು ಆರೋಪಿಸಿದರು.

ಗುತ್ತಿಗೆದಾರರು ನೀಡುವ ಕಿರುಕುಳದ ವಿರುದ್ಧ ಪ್ರಶ್ನೆ ಮಾಡಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕುತ್ತಾರೆ. ಆಸ್ಪತ್ರೆಯ ಸ್ವಚ್ಛತೆ ಕೆಲಸ ಮಾಡುವ ನಮಗೆ ರೋಗ ರುಜಿನಗಳು ಬಾರದಂತೆ ಸುರಕ್ಷತಾ ಪರಿಕರಗಳನ್ನು ನೀಡಬೇಕು. ಆದರೆ ಯಾವುದೇ ಪರಿಕರ ನೀಡದೇ ಪಶುಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಇವರ ಈ ದಬ್ಬಾಳಿಕೆ ಪ್ರವೃತ್ತಿಗೆ ಕೊನೆಯಾಡಬೇಕು. ಈ ಹಿನ್ನೆಲೆಯಲ್ಲಿ ಅವರ ಗುತ್ತಿಗೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಪಿಎಫ್ ಮತ್ತು ಇಎಸ್‍ಐ ಹಣವನ್ನು ಕಾರ್ಮಿಕರ ಖಾತೆಗೆ ಸಮಯಕ್ಕೆ ಸರಿಯಾಗಿ ಸಂದಾಯ ಮಾಡಬೇಕು. 14 ಸಾವಿರ ರೂ. ಕನಿಷ್ಠ ವೇತನ ನೀಡಬೇಕು. ಜೊತೆಗೆ ಪ್ರತಿ ತಿಂಗಳು ವೇತನಕ್ಕೆ ಸಂಬಂಧಿಸಿದ ವಿವರಗಳನ್ನು ಒಳಗೊಂಡ ವೇತನ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.

ಜೊತೆ ಸಮವಸ್ತ್ರಕ್ಕೆ 1,500 ರೂ.: ಸ್ವಚ್ಛತಾ ಕೆಲಸ ಮಾಡುವ ನಮಗೆ ನೀಡಿರುವ ಸಮವಸ್ತ್ರಕ್ಕೂ 1500 ರೂ.ಗಳನ್ನು ಬೆದರಿಕೆ ಹಾಕಿ ಗುತ್ತಿಗೆದಾರರು ವಸೂಲಿ ಮಾಡಿದ್ದಾರೆ. ಈ ಹಣವನ್ನು ವಾಪಸ್ಸು ಕೊಡಿಸಬೇಕು. ಪ್ರತಿ ಕಾರ್ಮಿಕರಿಂದ ತಿಂಗಳಿಗೆ 500 ರೂ.ಗಳಂತೆ ಮೂರು ತಿಂಗಳ ಕಾಲ 1500 ರೂ. ವಸೂಲಿ ಮಾಡಿದ್ದಾರೆ. ಈ ಬಗ್ಗೆ ನಾವು ಸಹಾಯಕ ಕಾರ್ಮಿಕ ಆಯುಕ್ತರಿಗೂ ದೂರು ನೀಡಿದ್ದೇವೆ. ಅದರಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಕಾರ್ಮಿಕ ಇಲಾಖೆಯಿಂದ ನೋಟೀಸ್ ಜಾರಿಯಾಗಿದೆ. ಹೀಗಿದ್ದರೂ ವೈದ್ಯಕೀಯ ಅಧೀಕ್ಷಕರು ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸ್ವಚ್ಛತಾ ಕೆಲಸಕ್ಕೆ ಯಾವುದೇ ಸಲಕರಣೆ ನೀಡದೇ ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ವಾರ್ಡ್‍ಗಳಲ್ಲಿ ಸ್ವಚ್ಛತಾ ಕೆಲಸ ಮಾಡುವ ಜೊತೆಗೆ ಹೆಚ್ಚುವರಿಯಾಗಿ ಆಸ್ಪತ್ರೆ ಆವರಣದಲ್ಲಿ ಗಿಡ-ಗಂಟಿ ಕೀಳುವ ಕೆಲಸವನ್ನು ಒತ್ತಾಯಪೂರ್ವಕವಾಗಿ ಮಾಡಿಸುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಸಂಸ (ಅಂಬೇಡ್ಕರ್ ವಾದ) ನಗರ ಸಂಚಾಲಕ ಕೆ.ನಂಜಪ್ಪ ಬಸವನಗುಡಿ, ಸ್ವಚ್ಛತೆ ಕೆಲಸ ಮಾಡದೇ ಆಸ್ಪತ್ರೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಪೌರಕಾರ್ಮಿಕರು ತಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕು. ಜೊತೆಗೆ ಗುತ್ತಿಗೆ ಪದ್ಧತಿ ರದ್ದು ಮಾಡುವ ಸಂಬಂಧ ನಿರಂತರ ಹೋರಾಟ ನಡೆಸಬೇಕು ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಜಿಲ್ಲಾ ಆಸ್ಪತ್ರೆಗಳ ಗುತ್ತಿಗೆ ಪೌರಕಾರ್ಮಿಕರ ಹಾಗೂ ನೌಕರರ ಸಂಘದ ಅಧ್ಯಕ್ಷ ಆರ್.ಆರ್.ರಮೇಶ್, ಉಪಾಧ್ಯಕ್ಷೆ ನಾಗವೇಣ , ಪ್ರಧಾನ ಕಾರ್ಯದರ್ಶಿ ಜಿ.ಮುರುಗೇಶ್ ಸೇರಿದಂತೆ ಆಸ್ಪತ್ರೆಯ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »