ನಂಜನಗೂಡು: ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಚುನಾಯಿತ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯ ಗ್ರಾಮಸ್ಥರು ಮೇ 12 ರಂದು ನಡೆಯಲಿ ರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸು ವುದಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಲಿಖಿತ ಪತ್ರ ನೀಡಿದ್ದಾರೆ.
ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ 400ಕ್ಕೂ ಹೆಚ್ಚು ಮತದಾರರಿದ್ದು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಕಾಂಕ್ರಿಟ್ ರಸ್ತೆ, ಚರಂಡಿ ಸೌಲಭ್ಯ ಹಾಗೂ ಬಸ್ ನಿಲ್ದಾಣದ ಸೌಕರ್ಯಗಳಿಲ್ಲದೇ ಜನರು ಪರದಾಡು ತ್ತಿದ್ದರೂ ಯಾವುದೇ ಸೌಕರ್ಯವಿಲ್ಲ. ಇನ್ನು ಕಳೆದ ವರ್ಷ ಜರುಗಿದ ಉಪ ಚುನಾವಣೆ ವೇಳೆ ಗ್ರಾಮದ ಮೂಲಭೂತ ಸೌಕರ್ಯಗಳ ಕುರಿತು ಗಮನ ಸೆಳೆದಾಗ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಯಿತಾದರೂ ಈವರೆಗೂ ಕಾಮಗಾರಿ ಆರಂಭಗೊಂಡಿಲ್ಲ. ನಿರ್ಮಾಣ ಹಂತದಲ್ಲಿ ರುವ ಸಮುದಾಯ ಭವನದ ಗುತ್ತಿಗೆದಾರನಿಗೆ ಬಿಲ್ ಪಾವತಿಸದಿರುವ ಹಿನ್ನೆಲೆಯಲ್ಲಿ ಕಾಮಗಾರಿ ಕಳೆದ ಏಳೆಂಟು ತಿಂಗಳಿನಿಂದ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಸ್ಥಳೀಯರ ಬವಣೆಯನ್ನು ಸರಕಾರಕ್ಕೆ ಮನದಟ್ಟು ಮಾಡಿಕೊಡುವ ಸಲುವಾಗಿ ಚುನಾವಣೆಯನ್ನು ಒಮ್ಮತದಿಂದ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರಾದ ಮಲ್ಲೇಗೌಡ, ಪುಟ್ಟಸ್ವಾಮಿ, ಮಾದೇಗೌಡ, ಕೆಂಪಮ್ಮ, ಕುಮಾರ್ ಮುಂತಾದವರು ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮದಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ಬವಣೆಯನ್ನು ನಿವಾರಿಸುವುದಾಗಿ ಪ್ರತೀ ಬಾರಿ ರಾಜಕೀಯ ಪಕ್ಷದವರು ಆಶ್ವಾಸನೆ ನೀಡುತ್ತಿ ದ್ದಾರೆ. ಆದರೆ ಚುನಾವಣೆ ನಂತರ ಯಾವುದೇ ಸವಲತ್ತುಗಳನ್ನು ಗ್ರಾಮಸ್ಥರಿಗೆ ನೀಡಿಲ್ಲ. ಗ್ರಾಮದೊಳಗಿನ ರಸ್ತೆಯನ್ನು ಅಭಿವೃದ್ಧಿಪಡಿಸದಿರುವುದರಿಂದ ಮಳೆಗಾಲ ದಲ್ಲಿ ಇಡೀ ಗ್ರಾಮವೇ ಕೆಸರು ಗದ್ದೆಯಾಗುತ್ತದೆ. ಪಾದಚಾರಿಗಳು ರಸ್ತೆಯಲ್ಲಿ ನಡೆದು ಹೋಗಲು ಪರದಾಡುವಂತಾಗಿದೆ ಎಂದು ದೂರಿದರು.
ಉಪಚುನಾವಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸಿದರಾದರೂ ಒಂದು ವರ್ಷ ಪೂರ್ಣಗೊಂಡರೂ ಈವರೆಗೂ ಕಾಮಗಾರಿ ಆರಂಭಗೊಂಡಿಲ್ಲ. ಇನ್ನು ಗ್ರಾಮದಲ್ಲಿ ಬಸ್ ನಿಲ್ದಾಣ ಹಾಗೂ ಸ್ಮಶಾನದ ಜಾಗವನ್ನು ಮಂಜೂರು ಮಾಡಿಸಿಕೊಡುವುದಾಗಿ ಸ್ಥಳೀಯ ಶಾಸಕರು ಭರವಸೆ ನೀಡಿದ್ದು, ಈವರೆಗೂ ಯಾವುದೇ ಪ್ರಗತಿಯಾಗಿಲ್ಲ.
ಹೀಗಾಗಿ ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರೆಲ್ಲರೂ ಒಮ್ಮತದಿಂದ ತೀರ್ಮಾನಿಸಿದ್ದು ಗ್ರಾಮದೊಳಗೆ ಯಾವುದೇ ರಾಜಕೀಯ ಪಕ್ಷದವರು ಹಾಗೂ ಚುನಾವಣೆಯ ಅಭ್ಯರ್ಥಿಗಳು ಕಾಲಿಡಬಾರದು ಎಂದು ಸೂಚನಾ ಫಲಕವನ್ನು ಗ್ರಾಮದ ಪ್ರವೇಶ ದ್ವಾರದಲ್ಲಿ ಅಳವಡಿ ಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.