ಪಂಚರಾಜ್ಯಗಳ ಫಲಿತಾಂಶ
ಮೈಸೂರು

ಪಂಚರಾಜ್ಯಗಳ ಫಲಿತಾಂಶ

December 12, 2018

ಭಾರತೀಯ ಜನತಾ ಪಕ್ಷ ಆಡಳಿತದಲ್ಲಿದ್ದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‍ಗಢದಲ್ಲಿ ಪಕ್ಷಕ್ಕೆ ಹೀನಾಯ ಸೋಲುಂಟಾಗಿದೆ. ರಾಜಸ್ಥಾನ ಮತ್ತು ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದ್ದು, ಅಧಿಕಾರ ಗದ್ದುಗೆ ಹಿಡಿಯುವ ಸಿದ್ಧತೆಯಲ್ಲಿ ತೊಡಗಿದೆ.

ಮಧ್ಯಪ್ರದೇಶ: ಭಾರತದ ಹೃದಯ ಭಾಗವೆಂದೇ ಪರಿಗಣಿತ ವಾಗಿರುವ ಮಧ್ಯಪ್ರದೇಶದಲ್ಲಿಯೂ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಹಿನ್ನಡೆಯಾಗಿದೆ. ಪೂರ್ಣ ಫಲಿತಾಂಶ ಇನ್ನೂ ಪ್ರಕಟವಾಗದಿದ್ದರೂ, ಪ್ರಸ್ತುತ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ತೀವ್ರ ಪೈಪೋಟಿ ನಡೆದಿದೆ. ಕಾಂಗ್ರೆಸ್ 114 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 108 ಸ್ಥಾನ ಪಡೆದಿದೆ. ಬಿಎಸ್‍ಪಿ 2 ಹಾಗೂ ಇನ್ನಿತರರು 6 ಸ್ಥಾನಗಳನ್ನು ಗಳಿಸಿದ್ದಾರೆ. ಪೂರ್ಣ ಫಲಿತಾಂಶ ಮಧ್ಯರಾತ್ರಿ ವೇಳೆಗೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದರೂ ಪ್ರಕಟಿತ ಫಲಿತಾಂಶಗಳ ಆಧಾರದ ಮೇಲೆ ಹೇಳುವುದಾದರೆ ರಾಜ್ಯದ ಆಡಳಿತಾರೂಢ ಬಿಜೆಪಿಗೆ ಅಧಿಕಾರ ಮತ್ತೊಮ್ಮೆ ದೊರಕುವುದು ಸಾಧ್ಯವೇ ಇಲ್ಲ ಎಂಬಂತಿದೆ. ಇಲ್ಲಿ ಕಾಂಗ್ರೆಸ್ ಅಧಿಕಾರ ಗದ್ದುಗೆ ಹಿಡಿಯಲು ರಣತಂತ್ರ ರೂಪಿಸುತ್ತಿದೆ. ಸುಮಾರು 15 ವರ್ಷಗಳಿಂದ ಅಧಿಕಾರ ಹಿಡಿದಿದ್ದ ಬಿಜೆಪಿ, ಈ ಬಾರಿ ಆಡಳಿತ ವಿರೋಧಿ ಅಲೆ, ನರ್ಮದಾ ನದಿ ಸ್ವಚ್ಛತೆ ನಿರ್ಲಕ್ಷ್ಯ, ರೈತರ ಕಡೆಗಣನೆ ಇನ್ನಿತರ ಕಾರಣಗಳಿಗಾಗಿ ಹೀನಾಯ ಸೋಲು ಕಂಡಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕರಾದ ಕಮಲನಾಥ್, ದಿಗ್ವಿಜಯ್ ಸಿಂಗ್ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಂಘಟಿತ ಹೋರಾಟ ಕಾಂಗ್ರೆಸ್‍ಗೆ ಜಯ ತಂದುಕೊಟ್ಟಿದೆ.

ರಾಜಸ್ಥಾನ: ರಾಜಸ್ಥಾನ ವಿಧಾನಸಭೆಯ ಒಟ್ಟು 200 ಸ್ಥಾನಗಳಲ್ಲಿ 119 ಸ್ಥಾನಗಳಿಗಷ್ಟೇ ಚುನಾವಣೆ ನಡೆದಿದ್ದು,
ಕಾಂಗ್ರೆಸ್ 101 ಸ್ಥಾನ ಗಳಿಸಿ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದ್ದರೆ, ಬಿಜೆಪಿ ಕೇವಲ 73 ಸ್ಥಾನ ಗಳಿಸಿ ಭಾರೀ ಹಿನ್ನಡೆ ಅನುಭವಿಸಿದೆ. ಉಳಿದಂತೆ ಬಿಎಸ್‍ಪಿ 6 ಹಾಗೂ ಇತರರು 19 ಸ್ಥಾನ ಗಳಿಸಿದ್ದಾರೆ. ರಾಜಸ್ಥಾನದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗಿದೆ. ಇಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಜೋಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಂಘಟನಾತ್ಮಕ ಹೋರಾಟದಿಂದ ಇಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಅತಿಯಾದ ಆತ್ಮವಿಶ್ವಾಸದಿಂದಾಗಿ ಮುಖ್ಯಮಂತ್ರಿ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸೋತು ಸುಣ್ಣವಾಗಿದೆ.

ಛತ್ತೀಸ್‍ಗಢ: ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದೆ. ವಿಧಾನಸಭೆಯ 90 ಸ್ಥಾನಗಳ ಪೈಕಿ ಕಾಂಗ್ರೆಸ್ 67 ಸ್ಥಾನ ಗಳಿಸಿ ಮೂರನೇ ಎರಡರಷ್ಟು ಬಹುಮತ ಪಡೆದಿದ್ದರೆ, ಆಡಳಿತಾರೂಢ ಬಿಜೆಪಿ ಕೇವಲ 16 ಸ್ಥಾನಕ್ಕೆ ಕುಸಿದು ಕಂಗಾಲಾಗಿದೆ. ಮಿಕ್ಕಂತೆ ಬಿಎಸ್‍ಪಿ 6 ಹಾಗೂ ಇತರರು 1 ಸ್ಥಾನ ಗಳಿಸಿದ್ದಾರೆ. ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಿದೆ. ಇಲ್ಲಿ ಕೇಂದ್ರದ ವೀಕ್ಷಕರಾಗಿ ಎಂ.ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿಯುಕ್ತಿಗೊಳಿಸಲಾಗಿದ್ದು, ಅವರು ನೂತನ ಸರ್ಕಾರ ರಚನೆ ಹೊಣೆ ಹೊತ್ತಿದ್ದಾರೆ.

ತೆಲಂಗಾಣ: ತೆಲಂಗಾಣದಲ್ಲಿ ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜಿಸಿ ಚುನಾವಣಾ ಕಣಕ್ಕೆ ಧುಮುಕಿದ್ದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‍ಎಸ್) ಧುರೀಣ ಕೆ.ಚಂದ್ರಶೇಖರ ರಾವ್ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಟಿಆರ್‍ಎಸ್ ರಾಜ್ಯ ವಿಧಾನಸಭೆಯ 119 ಸ್ಥಾನಗಳ ಪೈಕಿ 88 ಸ್ಥಾನಗಳನ್ನು ಗಳಿಸಿದೆ. ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ. ಈಗಾಗಲೇ ಚಂದ್ರಶೇಖರ ರಾವ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ನಾಳೆ ಮಧ್ಯಾಹ್ನ ತೆಲಂಗಾಣದ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಲ್ಲಿ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭಾರೀ ಹಿನ್ನಡೆಯಾಗಿದೆ. ಕೊನೇ ಕ್ಷಣದಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ತೆಲುಗು ದೇಶಂ ಪಕ್ಷದ ಧುರೀಣ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೂ ತೀವ್ರ ಮುಖಭಂಗವಾಗಿದೆ.

ಮಿಜೋರಾಂ: ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಹಿಡಿಯಲು ಸಜ್ಜಾಗಿದೆ. ವಿಧಾನಸಭೆಯ 40 ಸ್ಥಾನಗಳ ಪೈಕಿ ಮಿಜೋ ನ್ಯಾಷನಲ್ ಫ್ರಂಟ್ 26 ಸ್ಥಾನಗಳನ್ನು ಗಳಿಸಿದರೆ, ಆಡಳಿತಾರೂಢ ಕಾಂಗ್ರೆಸ್ ಕೇವಲ 5 ಸ್ಥಾನಗಳನ್ನು ಗಳಿಸಿದೆ. ಇಲ್ಲಿ ಬಿಜೆಪಿ 1 ಹಾಗೂ ಇನ್ನಿತರರು 8 ಸ್ಥಾನಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಇಲ್ಲಿ ಅಧಿಕಾರವನ್ನು ಕಳೆದುಕೊಂಡಿದೆ. ಮುಖ್ಯಮಂತ್ರಿ ಥಾನ್ ಹೌಲಾ ಎರಡು ಕ್ಷೇತ್ರಗಳಲ್ಲೂ ಸೋಲುಂಡಿದ್ದಾರೆ.

Translate »