ಗಣಿಗಾರಿಕೆ ಸ್ಥಗಿತ: ಕೂಲಿ ಕಾರ್ಮಿಕರ ಬದುಕು ಅತಂತ್ರ
ಮಂಡ್ಯ

ಗಣಿಗಾರಿಕೆ ಸ್ಥಗಿತ: ಕೂಲಿ ಕಾರ್ಮಿಕರ ಬದುಕು ಅತಂತ್ರ

December 13, 2018

ಪಾಂಡವಪುರ: ಬೇಬಿ ಬೆಟ್ಟದ ಸುತ್ತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಕಲ್ಲುಕ್ವಾರೆಯನ್ನೇ ನಂಬಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಆತ್ಮ ಹತ್ಯೆಯ ಹಾದಿ ಹಿಡಿಯುವಂತಾಗಿದೆ ಎಂದು ಸುತ್ತ್ತಲಿನ ಗ್ರಾಮಗಳ ಗ್ರಾಮಸ್ಥರು ದೂರಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಬೇಬಿ ಬೆಟ್ಟದ ಸುತ್ತ್ತಲಿನ ಬೇಬಿ, ಶಿಂಡಬೋಗನಹಳ್ಳಿ, ಕಾವೇರಿ ಪುರ ಹಾಗೂ ಹೊನಗಾನಹಳ್ಳಿ ಗ್ರಾಮಸ್ಥರು ಜಿಲ್ಲಾಡಳಿತ ನಮ್ಮ ಬದುಕನ್ನು ಗಮನದಲ್ಲಿಟ್ಟುಕೊಂಡು ಕಲ್ಲುಕ್ವಾರೆ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಬೇಬಿಬೆಟ್ಟದ ಸುತ್ತ್ತಲಿನ ಗ್ರಾಮಗಳಾದ ಕಾವೇರಿಪುರ, ಬೇಬಿ, ಶಿಂಡಬೋಗನಹಳ್ಳಿ, ಹೊನಗಾನಹಳ್ಳಿ, ಚಿನಕುರಳಿ ಗ್ರಾಮದ ಶೇ. 95ರಷ್ಟು ಮಂದಿ ಕಲ್ಲುಕ್ವಾರೆಯನ್ನೇ ನೆಚ್ಚಿ ಕೊಂಡು ಬದುಕು ರೂಪಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಕೃಷಿಗೆ ಯೋಗ್ಯವಾದ ಭೂಮಿ ಇಲ್ಲದ ಕಾರಣ ನಾವೆಲ್ಲರು ಕೃಷಿಯ ಜೊತೆಗೆ ಕಲ್ಲುಕ್ವಾರೆಯ ಕೆಲಸದಲ್ಲೂ ತೊಡಗಿಸಿ ಕೊಂಡಿದ್ದೇವೆ. ಕಾನೂನು ಬದ್ಧವಾಗಿಯೇ ಇಲಾಖೆಯಿಂದ ಪರವಾನಗಿ ಪಡೆದು ಕ್ವಾರೆ ನಡೆಸುತ್ತಿದ್ದೇವೆ. ಇದೀಗ ಕೆಆರ್‍ಎಸ್ ಜಲಾಶಯಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ಕ್ವಾರೆಗಳನ್ನು ಮೂರು ತಿಂಗಳಿಂದ ಸ್ಥಗಿತಗೊಳಿಸಿರುವುದರಿಂದ ನಮ್ಮ ಬದುಕು ಅತಂತ್ರವಾಗಿದೆ ಎಂದು ದೂರಿದರು.

ಕಲ್ಲು ಕ್ವಾರೆ ನಡೆಸುತ್ತಿರುವುದರಿಂದ ನಮ್ಮನ್ನು ಕಳ್ಳರಂತೆ ನೋಡುತ್ತಾರೆ. ನಾವೇನು ಕಲ್ಲುಕ್ವಾರೆಯಿಂದ ಕಚ್ಚಾವಸ್ತುಗಳನ್ನು ತೆಗೆಯುತ್ತಿದ್ದೇವೆ ಅಷ್ಟೇ. ಕ್ವಾರೆಯಿಂದ ತೆಗೆದ ಕಚ್ಚಾವಸ್ತು ಗಳನ್ನು ಸ್ಥಳೀಯವಾಗಿ ಮನೆಕಟ್ಟಲು ನೀಡುತ್ತಿದ್ದೇವೆ. ಇದೀಗ ಕ್ವಾರೆಗಳು ಸ್ಥಗಿತಗೊಳಿಸಿರುವುದರಿಂದ ಮನೆಕಟ್ಟು ವರಿಗೂ ಕಚ್ಚಾವಸ್ತುಗಳಿಗೆ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೇಬಿ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನದ ಮೇಲೆ ಮರಗಳು ಬೆಳೆದಿರುವುದರಿಂದ ದೇವಸ್ಥಾನದ ಗೋಡೆಗಳು ಬಿರುಕು ಬಿಟ್ಟಿದೆ. ಆದರೆ, ಕೆಲವರು ಗಣಿಗಾರಿಕೆಯಿಂದ ದೇವಸ್ಥಾನದ ಗೋಡೆ ಬಿರುಕು ಬಿಟ್ಟಿದೆ ಎಂಬುದಾಗಿ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಭದ್ಧ ಹಿತಾಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಕಲ್ಲುಕ್ವಾರೆ ಗಳ ವಿರುದ್ದ ಹೋರಾಟ ಮಾಡಿ ಇದರಿಂದ ಕೆಆರ್‍ಎಸ್‍ಗೆ ಅಪಾಯವಿದೆ ಎಂಬುದಾಗಿ ಸುಳ್ಳು ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುತ್ತಿದ್ದಾರೆ. ಇದೀಗ ಬೇಬಿ ಬೆಟ್ಟದ ಹೋರಾಟ ಸಮಿತಿ ಎಂಬುದಾಗಿ ಹೋರಾಟ ಮಾಡುತ್ತಿರುವ ವ್ಯಕ್ತಿಗಳು ಈ ಹಿಂದೆ ಕಲ್ಲುಕ್ವಾರೆಗಳನ್ನೇ ನಡೆಸಿಕೊಂಡು ಬಂದವರು. ಪ್ರಸ್ತುತ ಅವರೇ ಕಲ್ಲುಕ್ವಾರೆಯ ವಿರುದ್ಧ ಹೋರಾಟ ನಡೆಸಿ ಜಿಲ್ಲಾಡಳಿತಕ್ಕೆ ಹಾಗೂ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಲ್ಲುಕ್ವಾರೆ ಸ್ಥಗಿತಗೊಂಡಿರುವುದರಿಂದ ನಮ್ಮ ಬದುಕು ಅತಂತ್ರವಾಗಿದೆ. ಕೆಲಸವಿಲ್ಲದ ಕಾರಣ ನಮ್ಮ ಜೀವನ ನಡೆಸಲು ಕಷ್ಟವಾಗುತ್ತಿದೆ. ಸಂಘ-ಸಂಸ್ಥೆಗಳಲ್ಲಿ ಪಡೆದಿರುವ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಕೆಲಸವಿಲ್ಲದೆ ಬೇರೆಡೆಗೆ ಗುಳೆ ಹೋಗುವ ಸ್ಥಿತಿ ನಿರ್ಮಾಣ ವಾಗಿದೆ. ಒಂದು ವೇಳೆ ಕ್ವಾರೆಕೆಲಸ ಪ್ರಾರಂಭವಾಗದೆ ಹೋದರೆ ಕ್ವಾರೆ ಕೆಲಸವನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿರುವ ನಾವೆಲ್ಲರು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿಂಡಬೋಗನಹಳ್ಳಿಯ ಗ್ರಾಪಂ ಸದಸ್ಯ ನರಸಿಂಹೇಗೌಡ, ಹೊನಗಾನಹಳ್ಳಿ ಎಚ್.ಕೃಷ್ಣೇ ಗೌಡ(ಕಿಟಿ), ಬೇಬಿ ಗ್ರಾಮದ ಮಹಾದೇವಪ್ಪ, ಮುಖಂಡರಾದ ಬಿ.ಎಸ್.ಕುಮಾರ್, ಬಿ.ಇ.ರುದ್ರೇಶ್, ಶಿವಸ್ವಾಮಿ, ನಾಗರಾಜು, ಮಹೇಶ್, ದೇವರಾಜು, ರಘು, ಗುರುಪಾದ ಸ್ವಾಮಿ, ಪ್ರಸನ್ನ, ಅಣ್ಣಯ್ಯಪ್ಪ, ಸಣ್ಣತಮ್ಮೇಗೌಡ, ಮಹೇಂದ್ರ, ಶ್ರೀನಿವಾಸ್, ಗಿರೀಗೌಡ, ದೇವೇಂದ್ರ, ಕಾವೇರಿಪುರದ ಶಂಕರ, ಅಂಗಣ್ಣ, ಆರುಮುಗಂ ಸೇರಿದಂತೆ ಇತರರು ಹಾಜರಿದ್ದರು.

Translate »