ಚಾಮುಂಡಿಬೆಟ್ಟದ ಅಪಾಯ `ತಡೆ’ಗೋಡೆಗಳು ದುರ್ಬಲ
ಮೈಸೂರು

ಚಾಮುಂಡಿಬೆಟ್ಟದ ಅಪಾಯ `ತಡೆ’ಗೋಡೆಗಳು ದುರ್ಬಲ

October 22, 2021

ಕಣ ್ಣಗೆ ಕಂಡರೂ ಕಾಣದಂತಿರುವ ಅಧಿಕಾರಿ ವರ್ಗ

ನಿರ್ದಿಷ್ಟ ಪ್ರಮಾಣದ ಹಾನಿ ಯಾದರಷ್ಟೇ ಅದರತ್ತ ಗಮನ

ಪ್ರಸಿದ್ಧ ಧಾರ್ಮಿಕ, ಪ್ರವಾಸಿ ಕೇಂದ್ರದ ಮಾರ್ಗ ಸುರಕ್ಷತೆಗೆ ಕಾಯಕಲ್ಪದ ಅಗತ್ಯವಿದೆ

ಮೈಸೂರು,ಅ.೨೧-ಮೈಸೂರಿನ ಚಾಮುಂಡಿ ಬೆಟ್ಟ ರಸ್ತೆಯ ತಡೆಗೋಡೆಗೆ ಕಾಯಕಲ್ಪದ ಅಗತ್ಯವಿದೆ. ಬುಧವಾರ ಸುರಿದ ಭಾರೀ ಮಳೆಗೆ ಚಾಮುಂಡಿಬೆಟ್ಟದ ನಂದಿ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಇದಕ್ಕೆ ಸಮೀಪದಲ್ಲೇ ಕಳೆದ ವರ್ಷವೂ ಭೂಕುಸಿತವಾಗಿತ್ತು. ಹೀಗೆ ಪದೇ ಪದೆ ಅವಘಡ ಸಂಭವಿಸುತ್ತಿರುವುದು ಆತಂಕಕಾರಿ ಸಂಗತಿ. ಮುಖ್ಯರಸ್ತೆ ಸೇರಿದಂತೆ ಚಾಮುಂಡೇಶ್ವರಿ ದೇವಾಲಯ ಸಂಪರ್ಕಿಸುವ ಪ್ರಮುಖ ರಸ್ತೆಯೂ ಸೇರಿದಂತೆ ಇನ್ನಿತರೆ ರಸ್ತೆ ಗಳ ತಡೆಗೋಡೆಗೆ ಹಲವೆಡೆ ಹಾನಿಯಾಗಿದ್ದು, ಆತಂಕ ಹೆಚ್ಚಿಸಿದೆ. ಸಮುದ್ರಮಟ್ಟದಿಂದ ಸುಮಾರು ೩,೪೮೯ ಅಡಿ ಎತ್ತರದ ಚಾಮುಂಡಿ ಬೆಟ್ಟದ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರು ಕಾಲುದಾರಿಯಲ್ಲಿ ತೆರಳುತ್ತಿದ್ದರು. ದೊಡ್ಡ ದೇವರಾಜ ಒಡೆಯರ್ ಅವರು ಒಂದು ಸಾವಿರ ಮೆಟ್ಟಿಲು ಗಳನ್ನು ನಿರ್ಮಾಣ ಮಾಡಿ ಅನುಕೂಲ ಮಾಡಿ ಕೊಟ್ಟರು. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಂಜಿನಿಯರ್ ಹೆಚ್.ಡುಗ್ಲಸ್ ರೈಸ್ ಮೂಲಕ ರಸ್ತೆ ನಿರ್ಮಾಣ ಮಾಡಿದರು. ಆ ವೇಳೆ ಗಾರೆ ಬಳಸಿ ಕಲ್ಲಿನ ತಡೆ ಗೋಡೆ ನಿರ್ಮಿಸಿ, ಇಳಿಜಾರು ಮಾದರಿಯಲ್ಲಿ ಕಲ್ಲಿನ ಗೋಡೆ ಕಟ್ಟಿ ಭದ್ರಗೊಳಿಸಲಾಗಿದೆ. ಇದಾಗಿ ಶತಮಾನ ಕಳೆದಿದ್ದು, ಸೂಕ್ತ ನಿರ್ವಹಣೆ ಕೊರತೆಯಿಂದ ಅಲ್ಲಲ್ಲಿ ತಡೆ ಗೋಡೆ ಕಲ್ಲುಗಳು ಕುಸಿದು ಪ್ರಪಾತ ಸೇರಿವೆ. ತಡೆಗೋಡೆಯ ಹತ್ತಾರು ಕಡೆ ಕಲ್ಲುಗಳು ಕುಸಿದಿರುವುದನ್ನು ಕಾಣಬಹುದು. ಹಲವೆಡೆ ಗಾರೆ ಸಂಪೂರ್ಣವಾಗಿ ಕಿತ್ತುಹೋಗಿದೆ. ಮಳೆ ಮುಂದುವರೆದರೆ ಅಂತಹ ಜಾಗದಲ್ಲೂ ಕಲ್ಲುಗಳು ಕುಸಿಯುವುದು ಖಚಿತ. ಪ್ರವಾಸಿ ಗೋಪುರದ ಬಳಿ ದೊಡ್ಡ ಬಂಡೆಗಳ ಕೆಳಭಾಗ ದಲ್ಲಿ ಮಧ್ಯಮ ಗಾತ್ರದ ಕಲ್ಲುಗಳು ರಸ್ತೆ ಬದಿಯಲ್ಲಿ ಬಿದ್ದಿವೆ. ಇವು ಗುಡ್ಡದ ಮೇಲ್ಭಾಗದಿಂದ ಉರುಳಿರುವುದೋ? ಅಥವಾ ಬೃಹತ್ ಬಂಡೆಯ ಕೆಳಭಾಗದಿಂದ ಕುಸಿದಿರುವುದೋ? ಎಂಬುದನ್ನು ತಿಳಿಯಬೇಕಿದೆ. ಹೀಗೆ ೨-೩ ಕಡೆಗಳಲ್ಲಿ ಬಂಡೆ ತಳದಲ್ಲಿ ಕಲ್ಲುಗಳು ಬಿದ್ದಿವೆ. ಚಾಮುಂಡೇಶ್ವರಿ ದೇವಾಲಯಕ್ಕೆ ಇನ್ನೊಂದು ಕಿ.ಮೀ. ಇರುವಂತೆ ಆರೇಳು ಮೀಟರ್‌ನಷ್ಟು ತಡೆಗೋಡೆ ಬಿದ್ದು ಹೋಗಿದೆ. ಇಲ್ಲಿ ರಸ್ತೆ ಬದಿ ಪ್ರಪಾತವಿಲ್ಲದಿದ್ದರೂ ನಿರ್ಲಕ್ಷಿಸುವ ವಿಚಾರವಂತೂ ಅಲ್ಲ. ನೀರು ಹರಿಯಲು ಸ್ಳಳಾವಕಾಶ ಕಲ್ಪಿಸಿರುವ ಕಡೆಗಳಲ್ಲೂ ಕೆಲವೆಡೆ ತಡೆಗೋಡೆಗೆ ಹಾನಿಯಾಗಿದೆ. ಮುಖ್ಯರಸ್ತೆ, ನಂದಿ ರಸ್ತೆ ಇನ್ನಿತರ ಮಾರ್ಗಗಳಲ್ಲಿ ಬೆಟ್ಟಕ್ಕೆ ತೆರಳುವಾಗ ಸೂಕ್ಷö್ಮವಾಗಿ ಗಮನಿಸಿದರೆ ತಡೆಗೋಡೆಗೆ ಕಾಯಕಲ್ಪದ ಅನಿವಾರ್ಯತೆ ಮನದಟ್ಟಾಗುತ್ತದೆ.

ಚಾಮುಂಡಿ ಬೆಟ್ಟಕ್ಕೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಾತ್ರಿ ವೇಳೆಯೂ ಜನ ಓಡಾಡುತ್ತಾರೆ. ಆಷಾಢ ಮಾಸ, ವಾರಾಂತ್ಯ ದಿನಗಳು, ಹಬ್ಬ, ಸರ್ಕಾರಿ ರಜಾ ದಿನಗಳು ಸೇರಿದಂತೆ ವಿಶೇಷ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ರಸ್ತೆ ಮೇಲಿನ ಒತ್ತಡವೂ ಹೆಚ್ಚುತ್ತದೆ. ಮಳೆ ಬಂದಾಗ ಬೆಟ್ಟದ ತುದಿಯಿಂದ ನೀರು ಹರಿದು ರಸ್ತೆಗೆ ಇಳಿಯುತ್ತದೆ. ರಸ್ತೆಯಲ್ಲಿ ಹಳ್ಳವಿರುವ ಕಡೆಗೆ ಒಮ್ಮೆಲೆ ನೀರು ಹರಿದು ಬರುವುದರಿಂದ ಆ ಭಾಗದ ತಡೆಗೋಡೆಗೆ ಒತ್ತಡವಾಗುತ್ತದೆ. ತಗ್ಗು ಪ್ರದೇಶದಲ್ಲಿ ತಡೆಗೋಡೆ ನಡುವೆಯೇ ನೀರನ್ನು ಹಳ್ಳಕ್ಕೆ ಹರಿಸಲು ವ್ಯವಸ್ಥೆ ಮಾಡಲಾಗಿದೆ. ನೀರು ಮೇಲಿನಿಂದ ಧುಮ್ಮಿಕ್ಕುವಾಗ ಮಣ್ಣು ಸವಕಳಿಯಾಗಿ ಭೂಕುಸಿತವಾಗುವುದನ್ನು ತಪ್ಪಿಸಲು ಕಲ್ಲುಗಳನ್ನು ಮೆಟ್ಟಿಲು ಮಾದರಿಯಲ್ಲಿ ಜೋಡಿಸಲಾಗಿದೆ. ಆದರೆ ವಾಹನಗಳು ಡಿಕ್ಕಿ ಹೊಡೆದೋ? ಕಿಡಿಗೇಡಿಗಳ ಕೃತ್ಯದಿಂದಲೋ? ಅಥವಾ ಶಿಥಿಲಾವಸ್ಥೆ ಕಾರಣದಿಂದ ಸಹಜವಾಗಿಯೋ? ಒಂದೆರಡು ಕಲ್ಲುಗಳು ಕುಸಿದಿರುವ ಸ್ಥಳದಲ್ಲಿ ತಡೆಗೋಡೆ ಬಿದ್ದು, ಭೂಕುಸಿತವೂ ಸಂಭವಿಸಬಹುದು. ಎರಡು ಬಾರಿ ಭೂಕುಸಿತ ಸಂಭವಿಸಿದರೂ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ. ನೂರು ವರ್ಷ ಕಳೆದಿರುವುದರಿಂದ ತಡೆಗೋಡೆ ದುರ್ಬಲವಾಗಿ ಕುಸಿದಿದೆ ಎನ್ನುವ ಸಿದ್ಧ ಕಾರಣವನ್ನು ಹೇಳಲಾಗುತ್ತಿದೆ. ರಸ್ತೆ ನಿರ್ವಹಣೆ ಜವಾಬ್ದಾರಿ ಹೊಂದಿರುವ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಬಂದಿದೆ. ಭೂಗೋಳ ತಜ್ಞರಿಂದ ಪರಿಶೀಲನೆ ನಡೆದಿಲ್ಲ. ಆದರೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಪತ್ರಿಕಾ ಪ್ರಕಟಣೆ ಮೂಲಕ ದುರಸ್ತಿ ಭರವಸೆ ನೀಡಿದ್ದಾರೆ. ಅವಘಡ ಸಂಭವಿಸಿದಾಗ ಮಾತ್ರ ಆತಂಕ, ದುಗುಡ, ದಾವಂತ, ಕಾಳಜಿ ಪ್ರದರ್ಶಿಸುವ ಬದಲು ಮುಂಜಾಗ್ರತೆ ವಹಿಸುವುದು ಸೂಕ್ತ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.

ತಜ್ಞರ ಸಮಿತಿ ಮೂಲಕ ಪರಿಶೀಲನೆಗೆ ಮನವಿ
ಚಾಮುಂಡಿಬೆಟ್ಟದ ರಸ್ತೆಯಲ್ಲಿ ೨ ಬಾರಿ ಭೂಕುಸಿತವಾಗಿದೆ. ಕೆಲ ವರ್ಷಗಳ ಹಿಂದೆ ಪ್ರವಾಸಿ ಗೋಪುರಕ್ಕೂ ಹಾನಿಯಾಗಿತ್ತು. ರಸ್ತೆ ತಡೆಗೋಡೆಯ ಹಲವೆಡೆ ಕಲ್ಲುಗಳು ಬಿದ್ದು ಹೋಗಿವೆ. ಕೆಲವೆಡೆ ಗಾರೆ ಹಾಳಾಗಿ ಕಲ್ಲುಗಳು ಕಾಣುತ್ತವೆ. ಮತ್ತೆ ಕೆಲವೆಡೆ ತಡೆಗೋಡೆ ವಾಲಿದಂತೆ ಕಾಣುತ್ತದೆ. ಮಳೆ ನೀರಿನಿಂದ ಮಣ್ಣು ಸವಕಳಿಯಾಗದಂತೆ ಸ್ವಲ್ಪ ದೂರ ತಡೆಗೋಡೆಯ ಪಕ್ಕದಲ್ಲಿ ಸಿಮೆಂಟ್ ಬೆಡ್ ಹಾಕಲಾಗಿದೆ. ಆದರೂ ಮುಂಜಾಗ್ರತೆ ವಹಿಸುವುದು ಒಳ್ಳೆಯದು. ತಡೆಗೋಡೆ ಹಾಗೂ ಇದರ ಭದ್ರತೆಗೆ ಇಳಿಜಾರಾಗಿ ನಿರ್ಮಿಸಿರುವ ಕಲ್ಲಿನ ಗೋಡೆಯ ಸದೃಢತೆ, ಮಳೆ ನೀರು ಹರಿಯಲು ವ್ಯವಸ್ಥೆಯಿರುವ ಸ್ಥಳದಲ್ಲಿ ಹಳ್ಳಕ್ಕೆ ಜೋಡಿಸಿರುವ ಕಲ್ಲುಗಳ ಭದ್ರತೆ, ರಸ್ತೆ ಪಕ್ಕದ ಬಂಡೆಗಳ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಬೇಕು. ಇದಕ್ಕಾಗಿ ತಜ್ಞರ ಸಮಿತಿ ರಚಿಸಿ, ವರದಿ ಪಡೆದುಕೊಳ್ಳುವುದು ಸೂಕ್ತ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸದAತೆ ಮುಂಜಾಗ್ರತೆಯಿAದ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ಮೈಸೂರಿನ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

ಎಸ್.ಬಿ.ದೇವರಾಜ

Translate »