ಪರಿಸರ ಸೂಕ್ಷ್ಮ ವಲಯ ಸಂಬಂಧ ಇನ್ನೂ ಆಕ್ಷೇಪಣೆ ಸಲ್ಲಿಸದ ರಾಜ್ಯ ಸರ್ಕಾರ
ಮೈಸೂರು

ಪರಿಸರ ಸೂಕ್ಷ್ಮ ವಲಯ ಸಂಬಂಧ ಇನ್ನೂ ಆಕ್ಷೇಪಣೆ ಸಲ್ಲಿಸದ ರಾಜ್ಯ ಸರ್ಕಾರ

August 5, 2018

ಮೈಸೂರು: ಪಶ್ಚಿಮ ಘಟ್ಟ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡಿಸುವ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈವರೆವಿಗೂ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿಲ್ಲ.

ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡುವ ಕೇರಳ, ಮಹಾರಾಷ್ಟ್ರ, ಗೋವಾ, ಗುಜರಾತ್ ಮತ್ತು ತಮಿಳುನಾಡು ಸರ್ಕಾರಗಳು ಈಗಾಗಲೇ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿವೆ. ಆ.25ರ ಒಳಗಾಗಿ ಕರ್ನಾಟಕ ತನ್ನ ಆಕ್ಷೇಪಣೆಯನ್ನು ಸಲ್ಲಿಸದೇ ಹೋದ ಪಕ್ಷದಲ್ಲಿ ಕೇಂದ್ರ ಸರ್ಕಾರವು ರಾಜ್ಯದಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಪರಿಗಣಿಸಿ, ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಅಪಾಯವಿದೆ. ಕಸ್ತೂರಿ ರಂಗನ್ ವರದಿಯಂತೆ ಕರ್ನಾಟಕದಲ್ಲಿ 20,668 ಚದರ ಕಿ.ಮೀ. ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡುತ್ತದೆ. ಕೊಡಗು ಸೇರಿದಂತೆ 8 ಜಿಲ್ಲೆಗಳ 1,576 ಹಳ್ಳಿಗಳು ಈ ವಲಯಕ್ಕೆ ಒಳಪಡುವುದರಿಂದ ಸಂಬಂಧಪಟ್ಟ ಹಳ್ಳಿಗಳೆಲ್ಲವೂ ಖಾಲಿ ಮಾಡಬೇಕಾದ ಅಪಾಯ ಬಂದೊದಗು ತ್ತದೆ.

ಅದರಲ್ಲೂ ಕೊಡಗಿನ ಶೇ.50ಕ್ಕೂ ಹೆಚ್ಚು ಭಾಗ ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಟ್ಟು, ಅಲ್ಲಿನ ಗ್ರಾಮಸ್ಥರು ವಲಸೆ ಹೋಗ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳು ಮತ್ತು ಜಿಲ್ಲಾ ಗ್ರಾಮ ಪಂಚಾಯ್ತಿಗಳಲ್ಲೂ ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧ ನಿರ್ಣಯಗಳನ್ನು ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ರಾಜ್ಯದ ಎಂಟೂ ಜಿಲ್ಲೆಗಳಲ್ಲಿನ ಜನರಿಗೆ ಮಾರಕ ವಾಗಿರುವ ಈ ಪರಿಸರ ಸೂಕ್ಷ್ಮ ವಲಯ ಅನುಷ್ಠಾನಕ್ಕೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಈವರೆವಿಗೂ ಮನಸ್ಸು ಮಾಡಿಲ್ಲ. ಜನ ಜೀವನದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಯೋಜನೆ ಅನುಷ್ಠಾನದ ವಿರುದ್ಧ ತನ್ನ ಆಕ್ಷೇಪಣೆಯನ್ನು ಸಲ್ಲಿಸಬೇಕಾದ ಮಹತ್ವದ ಕಾರ್ಯವನ್ನು ಸರ್ಕಾರ ಮರೆತಿದೆ. ಇಂತಹ ಮಹತ್ವದ ವಿಷಯದ ಬಗ್ಗೆ ಈ ಸರ್ಕಾರಕ್ಕೆ ಸಮಯಾವಕಾಶ ಇಲ್ಲದ ಮೇಲೆ ಇನ್ನು ಎಂತಹ ಜನೋಪಯೋಗಿ ಕೆಲಸಗಳನ್ನು ಈ ಸರ್ಕಾರದಿಂದ ನಿರೀಕ್ಷಿಸಬಹುದು ಎಂದು ಕೊಡಗಿನ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂತಿಮ ಅಧಿಸೂಚನೆಯಾಗಿದೆ: ಪರಿಸರ ಸೂಕ್ಷ್ಮ ವಲಯದ ಅಂತಿಮ ಅಧಿಸೂಚನೆ ಈಗಾಗಲೇ ಆಗಿದೆ. ಅದು ಅನುಷ್ಠಾನಗೊಳ್ಳುವುದು ಮಾತ್ರ ಬಾಕಿ ಇದೆ ಎಂದು ಕೊಡಗಿನ ಜನಪ್ರತಿನಿಧಿಯೋರ್ವರು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರವು ಕಾಟಾಚಾರಕ್ಕಾಗಿ ಆಕ್ಷೇಪಣೆಯನ್ನು ಸಲ್ಲಿಸಿತ್ತು. ಅಂತಿಮ ಅಧಿಸೂಚನೆಯಾದ ನಂತರ ಆಕ್ಷೇಪಣೆಗೆ ಅವಕಾಶವಿಲ್ಲ. ಆದರೆ ಯೋಜನೆಯನ್ನು ಅನುಷ್ಠಾನ ಗೊಳಿಸಲು ಪ್ರಾದೇಶಿಕ ಆಯುಕ್ತರ ನೇತೃತ್ವದ ಸಮಿತಿಯಿದೆ. ಈ ಸಮಿತಿಯು ಸಭೆ ಸೇರಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳನ್ನು ಗುರುತಿಸಬೇಕಾಗಿದೆ. ಆ ಸಂದರ್ಭದಲ್ಲಿ ಜನರಿಗೆ ಹೆಚ್ಚು ತೊಂದರೆಯಾಗದಂತೆ ಕ್ರಮ ವಹಿಸುವ ಅವಕಾಶವಂತೂ ಇದೆ. ಆದರೆ ವಿಪರ್ಯಾಸವೆಂದರೆ ಈವರೆವಿಗೂ ಅನುಷ್ಠಾನ ಸಮಿತಿ ಸಭೆಯೇ ನಡೆದಿಲ್ಲ. ಯೋಜನೆ ಅನುಷ್ಠಾನವಾಗದಿದ್ದರೂ ಕೊಡಗಿನ ಅಧಿಕಾರಿಗಳು ಯೋಜನೆ ಅನುಷ್ಟಾನವಾಗಿದೆ ಎಂಬಂತೆ ವರ್ತಿಸುತ್ತಿ ದ್ದಾರೆ. ಹಲವಾರು ಕಡೆ ಮನೆ ರಿಪೇರಿ ಹಾಗೂ ನಿರ್ಮಾಣಕ್ಕೆ ಅನು ಮತಿಯನ್ನೇ ಕೊಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

Translate »