ಕನ್ನಡ ಕರ್ನಾಟಕದಲ್ಲಿ ಮಾತ್ರವಲ್ಲ ಈಗ ವಿಶ್ವ ಕನ್ನಡವಾಗಿದೆ
ಮೈಸೂರು

ಕನ್ನಡ ಕರ್ನಾಟಕದಲ್ಲಿ ಮಾತ್ರವಲ್ಲ ಈಗ ವಿಶ್ವ ಕನ್ನಡವಾಗಿದೆ

August 5, 2018

ಮೈಸೂರು: ಜಾಗತೀಕರಣದಿಂದಾಗಿ ಕನ್ನಡ ಭಾಷೆ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬೆಳೆಯುವ ಮೂಲಕ ವಿಶ್ವಕನ್ನಡವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕಲಾಮಂದಿರದಲ್ಲಿ ನಾವಿಕ (ನಾವು ವಿಶ್ವ ಕನ್ನಡಿಗರು)ಸಂಸ್ಥೆ ಆಯೋಜಿಸಿದ್ದ ನಾವಿಕೋತ್ಸವ-2018 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಭಾಷೆಗೂ ತನ್ನದೇ ಆದ ಶಕ್ತಿ ಇದ್ದು, ಯಾವುದೇ ಭಾಷೆಯನ್ನು ಹೆಚ್ಚು ಬಳಸಿದಂತೆ ಆ ಭಾಷೆ ಬೆಳೆಯಲಿದೆ. ಆದರೆ ರಾಜ್ಯದಲ್ಲಿ ಪ್ರಸ್ತುತ ಕನ್ನಡ ಭಾಷೆ ಅವನತಿಯ ಅಂಚಿನಲ್ಲಿದ್ದು, ನಮ್ಮವರಿಗೆ ಕನ್ನಡದ ಬಗ್ಗೆ ಕೀಳರಿಮೆ ಇರುವುದು ನಿಜಕ್ಕೂ ಶೋಚನೀಯ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ನೆಲೆಸಿರುವ ತಜ್ಞರು, ಜ್ಞಾನಿಗಳು ಕನ್ನಡ ಭಾಷೆಯನ್ನು ಬೆಳೆಸಬೇಕಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಕರ್ನಾಟಕದಲ್ಲಿ ಕನ್ನಡ ಭಾಷೆ ನಶಿಸಿ ಹೋಗುತ್ತಿದ್ದು, ಬೆಂಗಳೂರಿನಲ್ಲಿ ನಮ್ಮ ಭಾಷೆಗೆ ಜಾಗ ವಿಲ್ಲದಂತೆ ಪರ ಭಾಷಿಗರೇ ಹೆಚ್ಚಿದ್ದು, ಆಕ್ರಮಿಸಿಕೊಂಡಿದ್ದಾರೆ. ಆದರೆ, ನಮ್ಮ ಕನ್ನಡಿಗರು ವಿದೇಶಗಳಿಗೆ ಹೋಗಿ ಅಲ್ಲಿನ ಭಾಷೆ ಕಲಿಯುವ ಜತೆಗೆ ನಮ್ಮ ಕನ್ನಡದ ಬೀಜವನ್ನು ಬಿತ್ತುವ ಮೂಲಕ ಭಾಷೆಯನ್ನು ಉಳಿಸುತ್ತಿದ್ದಾರೆ ಎಂದ ಅವರು, ಉನ್ನತ ಶಿಕ್ಷಣ ಇಲಾಖೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಕನ್ನಡದಲ್ಲಿಯೇ ನಡೆಸಲು ಸೂಚನೆ ನೀಡಿದ್ದೇನೆ ಎಂದರು.

ನಾಡೋಜ ಡಾ.ಕೆ.ಎಸ್.ನಿಸಾರ್ ಅಹಮದ್ ಮಾತನಾಡಿ, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳು ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಬೆಳೆಯುತ್ತಿದ್ದು, ನಾಡಿನ ಬೇರುಗಳ ಬಗ್ಗೆ ತಿಳಿದಿಲ್ಲ. ಬಾಲ್ಯದಲ್ಲಿ ವಿವಿಧ ಬಗೆಯ ಆಟಗಳನ್ನು ಆಡುತ್ತಾ ಬೆಳೆಯ ಬೇಕಿದ್ದ ಮಕ್ಕಳನ್ನು ಕ್ರಿಕೆಟ್, ಟಿವಿ ಮಾಧ್ಯಮಗಳು ಹಾಳು ಮಾಡುತ್ತಿವೆ. ಆದ್ದರಿಂದ ಮಕ್ಕಳಲ್ಲಿ ಸದಭಿರುಚಿಯನ್ನು ಬೆಳೆಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಅಮೆರಿಕಾದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ವಿಜ್ಞಾನಿ ಗುರುಪ್ರಸಾದ್‍ರವರು ಸಿದ್ಧಪಡಿಸಿರುವ 18 ಭಾರತೀಯ ಭಾಷೆಗಳನ್ನು ಹೊಂದಿರುವ `ಕೀಲಿಮಣೆ’ಯನ್ನು ಸಚಿವ ಜಿ.ಟಿ.ದೇವೇಗೌಡರು ಬಿಡುಗಡೆ ಮಾಡಿದರು. ಇದು ಕನ್ನಡ ಭಾಷೆಯ ಕಲಿಕೆಗೆ ಪೂರಕವಾಗಿದೆ. ನಂತರ ವಿದೇಶಿ ಮಕ್ಕಳ ಕನ್ನಡ ಕಲಿಕೆಗೆ ಅನುಕೂಲವಾಗುವಂತೆ ಅಮೆರಿಕಾದಲ್ಲಿ ನೆಲೆಸಿರುವ ಲೇಖಕ ಶಿವನಗೌಡ ಅವರು ಬರೆದಿರುವ 8 ಸಂಪುಟಗಳ ಪುಸ್ತಕವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ವರನಟ ಡಾ. ರಾಜ್‍ಕುಮಾರ್ ಅವರ ಪುತ್ರಿ ಲಕ್ಷ್ಮಿ ರಾಜಕುಮಾರ್, ನಾವಿಕ ಸಂಸ್ಥೆ ಅಧ್ಯಕ್ಷ ಸುರೇಶ್ ರಾಮಚಂದ್ರ, ನಾವಿಕೋತ್ಸವ ಸಂಚಾಲಕ ಪ್ರಕಾಶ್ ಬಾಣಾವರ ಮತ್ತಿತರರು ಉಪಸ್ಥಿತರಿದ್ದರು.

Translate »