ಮದ್ಯ ವ್ಯಸನಿಗಳ ಸಾಹಸ ಕಥೆ-ವ್ಯಥೆ
ಮೈಸೂರು

ಮದ್ಯ ವ್ಯಸನಿಗಳ ಸಾಹಸ ಕಥೆ-ವ್ಯಥೆ

April 20, 2020

ಹುಬ್ಬಳ್ಳಿ,ಏ.19-ಲಾಕ್‍ಡೌನ್‍ನಿಂದಾಗಿ ಕುಡಿಯಲು ಮದ್ಯ ಸಿಗದೇ ದೇಶಾದ್ಯಂತ ಮದ್ಯಪ್ರಿಯರ ಪಾಡಂತೂ ಹೇಳತೀರದಾಗಿದೆ. ಮದ್ಯ ಇಲ್ಲದೇ ಬದುಕಲಾರವೂ ಎನ್ನುವ ಈ ಚಟಗಾರರು, ಮದ್ಯದಂಗಡಿಗೆ ಕನ್ನ ಹಾಕು ವುದು, ಯೂಟ್ಯೂಬ್ ನೋಡಿಕೊಂಡು ಸ್ವಂತವಾಗಿ ತಯಾರಿಸುವುದು, ಅದೂ ಆಗದಿದ್ದರೆ ದುಪ್ಪಟ್ಟು ಹಣ ಕೊಟ್ಟು ಕಳ್ಳಮಾರ್ಗದಲ್ಲಿ ಖರೀದಿಸುವುದು ಮಾಡುತ್ತಿ ದ್ದಾರೆ. ಅದೇನೇ ಇರಲಿ, ಅವರಿಗೀಗ ಮದ್ಯಾರಾಧನೆ ನಡೆಸ ಬೇಕಿದೆ. ಅದಕ್ಕಾಗಿ ಏನು ಮಾಡುವುದಕ್ಕೂ ತಯಾರಾಗಿದ್ದಾರೆ.

ಈ ಮಧ್ಯೆ ಮದ್ಯ ಸಿಗದೇ ಇದ್ದುದಕ್ಕೆ ಕಲಘಟಗಿ ತಾಲೂ ಕಿನ ಗಂಬ್ಯಾಪುರ ಗ್ರಾಮದ ಮಧ್ಯವಯಸ್ಕ ವ್ಯಕ್ತಿಯೊಬ್ಬ ಕೈ ಶುಚಿಗೊಳಿಸಿಕೊಳ್ಳಲು ಇಟ್ಟಿದ್ದ ಸ್ಯಾನಿಟೈಸರ್ ಅನ್ನೇ ಕುಡಿ ದಿದ್ದಾನೆ. ಸ್ಯಾನಿಟೈಸರ್ ಕುಡಿದ ಪರಿಣಾಮ ಸಾವಿಗೀಡಾಗಿ ದ್ದಾನೆ. ಗಂಬ್ಯಾಪುರ ಗ್ರಾಮದ ಬಸವರಾಜ್ ವೆಂಕಪ್ಪ ಕುರು ವಿನಕೊಪ್ಪ(45) ಮೃತ ವ್ಯಕ್ತಿ. ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದ ಪರಿಣಾಮ 3 ದಿನಗಳ ಹಿಂದೆ ಬಸವರಾಜ್ ತೀವ್ರವಾಗಿ ಅಸ್ವಸ್ಥಗೊಂಡ. ತಕ್ಷಣವೇ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅಸುನೀಗಿದ.

ಲಾಕ್‍ಡೌನ್ ಹಿನ್ನೆಲೆ ಮದ್ಯ ಮಾರಾಟ ಸ್ಥಗಿತಗೊಂಡಿದ್ದು, ಮದ್ಯ ಪ್ರಿಯರು ಬೇಸತ್ತು ಹೋಗಿದ್ದಾರೆ. 21 ದಿನಗಳ ಲಾಕ್ ಡೌನ್ ಏ.14ಕ್ಕೆ ಮುಗಿಯುತ್ತೆ. ಮದ್ಯದ ಅಂಗಡಿ ತೆರೆಯುತ್ತೆ ಎಂದು ಮದ್ಯವ್ಯಸನಿಗಳು ಖುಷಿಯಲ್ಲಿದ್ದರು. ಕೇಂದ್ರ ಸರ್ಕಾರ ಈಗ ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸಿದ್ದರಿಂದ ಮದ್ಯಪ್ರಿಯರ ಆಸೆಗೆ ತಣ್ಣೀರು ಎರಚಿದಂತಾಗಿದೆ.

Translate »