ನವದೆಹಲಿ, ಜು.22- ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿಯ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಸಾಮಾನ್ಯ ವರ್ಗದ ನೌಕರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಜೀವ್ ಧವನ್ ಮತ್ತು ವಕೀಲ ಕುಮಾರ್ ಪರಿಮಳ್ ಅವರು, ಈ ವಿಷಯದಲ್ಲಿ ಮಧ್ಯಂತರ ಆದೇಶವನ್ನು ಜಾರಿ ಗೊಳಿಸಬೇಕೆಂಬ ಮನವಿಗೆ ವಿರೋಧ ವ್ಯಕ್ತಪಡಿಸಿದರು. ವರ್ಚುವಲ್ ನ್ಯಾಯಾಲಯದ ಬದಲಿಗೆ ಭೌತಿಕ ನ್ಯಾಯಾಲಯದಲ್ಲಿ ಈ ವಿಷಯದಲ್ಲಿ ಆಲಿಸಬೇಕು ಎಂದು ಮನವಿ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿ ನೀಡುವಲ್ಲಿ ಮೀಸಲಾತಿಯ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು 2019ರ ಏಪ್ರಿಲ್ 15ರಂದು ಅಂಗೀಕರಿಸಿದ ಆದೇಶದ ಕುರಿತು ಸ್ಪಷ್ಟೀಕರಣ ನೀಡುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ. ನ್ಯಾಯದ ಹಿತದೃಷ್ಟಿಯಿಂದ 4 ವಾರಗಳ ನಂತರ ಅಂತಿಮವಾಗಿ ನಾವು ಇದರ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಎಸ್ ಎ ಬೊಬಡೆ, ನ್ಯಾಯಮೂರ್ತಿ ಎಲ್ ನಾಗೇಶ್ವರರಾವ್ ಅವರನ್ನೊಳಗೊಂಡ ನ್ಯಾಯಪೀಠವು , ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ ಮೌಖಿಕವಾಗಿ ತಿಳಿಸಿದೆ. ಏಳು ನ್ಯಾಯಾಧೀಶರ ಸಮಿತಿಯು ಇದಕ್ಕೆ ಸ್ಪಂದಿಸಿದ್ದು ಭೌತಿಕ ನ್ಯಾಯಾಲಯಗಳ ಪುನರಾರಂಭದ ಬಗ್ಗೆ ಪರಿಗಣಿಸಿದ್ದು, ಇನ್ನು ನಾಲ್ಕು ವಾರಗಳೊಳಗೆ ಈ ಸಮಸ್ಯೆಯನ್ನು ಪರಿಹರಿಸಲಾಗುವುದು, ಆದ್ದರಿಂದ ಎಲ್ಲಾ ತ್ವರಿತ ವಿಷಯಗಳ ಪ್ರಕರಣಗಳನ್ನು ನಾಲ್ಕು ವಾರಗಳ ಬಳಿಕ ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ.