ಮೈಸೂರು, ಅ.27-ಶರಣರ ವಚನಗಳ ಭಜನೆ ಮಾಡುವುದರ ಮೂಲಕ ಶಿವನ ಒಲುಮೆಗೆ ಪಾತ್ರರಾಗಬಹುದು ಎಂದು ಬಿಗ್‍ಬಾಸ್ ಖ್ಯಾತಿಯ ಮೈಸೂರಿನ ಪ್ರಪ್ರಥಮ ಮಹಿಳಾ ಜಾದೂ ಮತ್ತು ಮಾತನಾಡುವ ಗೊಂಬೆಯ ಕಲಾವಿದೆ ಸುಮಾ ರಾಜ್‍ಕುಮಾರ್ ಹೇಳಿದರು.
ಶರಣು ವಿಶ್ವವಚನ ಫೌಂಡೇಷನ್ ಅಂತರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ 15ನೇ ಭಜನಾ ಮಂಡಳಿಯವರಿಂದ ವಚನ ಮಾಧುರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಚನಗಳನ್ನು ಸ್ತುತಿಸುವುದರಿಂದ ವಿಶ್ವಕ್ಕೆ ಅಂಟಿರುವ ಕೊರೊನಾ ಬಹುಬೇಗ ತೊಲಗಿ, ಜನರು ನಿರ್ಭಯವಾಗಿ ಜೀವಿಸುವಂತಹ ವಾತಾವರಣ ನಿರ್ಮಾಣವಾಗಲಿ ಎಂದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ ಮಾತನಾಡಿ, ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ, ಮಾನವ ಕಲ್ಯಾಣಕ್ಕಾಗಿ ಹಗಲಿರುಳು ದುಡಿದ ಶರಣರ ವಚನಗಳನ್ನು ಕುರಿತು ಅಧ್ಯಯನ, ಚಿಂತನೆ ಮಾಡಿದಂತೆಲ್ಲಾ ಹೊಸ ಹೊಸ ವಿಚಾರಗಳು ಹೊರಹೊಮ್ಮುತ್ತಲೇ ಇರುತ್ತವೆ. ತನು, ಮನ ಮತ್ತು ಧನವನ್ನು ಗುರು, ಲಿಂಗ ಮತ್ತು ಜಂಗಮಕ್ಕೆ ಅರ್ಪಿಸಿದಾಗ ನಮ್ಮ ಮನಸ್ಸು ಶಿವನಲ್ಲಿ ಲೀನವಾಗುತ್ತದೆ ಎಂದರು.
ನಂತರ ನಡೆದ ವಚನ ಮಾಧುರ್ಯ ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀ ಶಿವರಾತ್ರೀ ಶ್ವರ ಅಕ್ಕನ ಬಳಗ, ಶ್ರೀ ವೈಷ್ಣವಿ ಭಜನಾ ಮಂಡಳಿ, ಶ್ರೀ ಗುರುಮಲ್ಲೇಶ್ವರ ಭಜನಾ ಮಂಡಳಿ, ಹುಬ್ಬಳ್ಳಿಯ ಸಿದ್ಧ ಬುದ್ಧ ಭಜನಾ ಮಂಡಳಿ, ಸರಗೂರಿನ ಸ್ನೇಹ ಸ್ತ್ರೀ ಸಮಾಜ, ಗುಂಡ್ಲುಪೇಟೆ ತಾ.ದೊಡ್ಡಹುಂಡಿಯ ಶ್ರೀ ಅಕ್ಕಮಹಾದೇವಿ ಭಜನಾ ಮಂಡಳಿ, ದಡದಹಳ್ಳಿಯ ಶ್ರೀ ಗುರುಮಲ್ಲೇಶ್ವರ ಭಜನಾ ಸಂಘದ ಸದಸ್ಯರು ಶರಣರ ವಚನಗಳನ್ನು ಭಜಿಸಿದರು.
ದಡದಹಳ್ಳಿ ಮಠದ ಷಡಕ್ಷರಿಸ್ವಾಮೀಜಿ, ಲಾಳನಹಳ್ಳಿ ಮಠದ ಜಯದೇವಿತಾಯಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕಿ ಸುಧಾ ಮೃತ್ಯುಂಜಯಪ್ಪ, ವಿ.ಲಿಂಗಣ್ಣ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾರ್ಯದರ್ಶಿ ಅನಿತಾ ನಾಗರಾಜ್, ಧನ್ಯ ಸತ್ಯೇಂದ್ರಮೂರ್ತಿ, ಗಾಯಕಿ ಶೋಭಧನರಾಜ್, ಉಮಾಪತಿ, ನೀಲಾಂಬಿಕಾದೇವಿ ನಾಗರಾಜು, ದೀಪ ತೊಲಗಿ, ವೀರೇಶ್ ಮೂರ್ತಿ, ಹೆಚ್.ಕೆ.ಚನ್ನಪ್ಪ, ಸಿದ್ಧಪ್ಪ ಬೋರಗಿ, ಗೀತಾತಡಸದ ಉಪಸ್ಥಿತರಿದ್ದರು.