ಶ್ರೀರಾಮನ ಹೆಸರೇಳಿಕೊಂಡು ಸರ್ಕಾರ ರಚಿಸಿದವರಿಗೆ ಆ ಆದರ್ಶ ಪುರುಷನ ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿ ಕಂಡರೇಕೆ ತಾತ್ಸಾರ!?
ಮೈಸೂರು

ಶ್ರೀರಾಮನ ಹೆಸರೇಳಿಕೊಂಡು ಸರ್ಕಾರ ರಚಿಸಿದವರಿಗೆ ಆ ಆದರ್ಶ ಪುರುಷನ ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿ ಕಂಡರೇಕೆ ತಾತ್ಸಾರ!?

October 28, 2020

ಮೈಸೂರು, ಅ.27(ಎಸ್‍ಬಿಡಿ)- ಮೈಸೂರಿನಲ್ಲಿ `ಶ್ರೀ ಮಹರ್ಷಿ ವಾಲ್ಮೀಕಿ’ ಅವರ ಪುತ್ಥಳಿ ನಿರ್ಮಿಸಬೇಕೆಂಬ ದಶಕದ ಆಶಯ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿ ವರ್ಗದ ಇಚ್ಛಾಶಕ್ತಿಯ ಕೊರತೆಯಿಂದ ನೆನೆಗುದಿಗೆ ಬಿದ್ದಿರುವುದು ವಿಷಾಧನೀಯ ಸಂಗತಿ.

ಮೈಸೂರಿನ ಸರ್ಕಾರಿ ಅತಿಥಿಗೃಹ, ಮಿನಿ ವಿಧಾನಸೌಧ ಹಾಗೂ ಲೋಕೋಪಯೋಗಿ ಕಚೇರಿಗಳ ನಡುವಿನ ಖಾಲಿ ಜಾಗದಲ್ಲಿ ವಾಲ್ಮೀಕಿ ಮಹರ್ಷಿಗಳ ಪುತ್ಥಳಿ ನಿರ್ಮಿಸಬೇಕೆಂಬ ಕೂಗು ದಶಕದಿಂದ ಕೇಳಿ ಬರುತ್ತಿದೆ. ಈ ಸಂಬಂಧ ಅನೇಕ ಪ್ರತಿಭಟನೆಗಳು ನಡೆದಿವೆ. ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡುವ ಬಗ್ಗೆ ನಗರ ಪಾಲಿಕೆ ಕೌನ್ಸಿಲ್‍ನಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಆದರೆ ಈ ಪ್ರಕ್ರಿಯೆಯ ಮುಂದಿನ ಸ್ಥಿತಿಗತಿ ಮಾತ್ರ ಈವರೆಗೂ ತಿಳಿದಿಲ್ಲ.

ವಿಳಂಬಕ್ಕೆ ಕಾರಣ ತಿಳಿಸಲಿ: ಶ್ರೀರಾಮ ಹಾಗೂ ರಾಮಾಯಣವನ್ನು ವಿಶ್ವಕ್ಕೆ ಪರಿಚಯಿಸಿದವರು ಶ್ರಿ ವಾಲ್ಮೀಕಿ ಮಹರ್ಷಿಗಳು. ಇವರ ನಂತರ ಅದೆಷೋ ಕವಿಗಳು ರಾಮಾಯಣದ ಬಗ್ಗೆ ಸಾಹಿತ್ಯ ರಚಿಸಿದ್ದರೂ `ವಾಲ್ಮೀಕಿ ರಾಮಾಯಣ’ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ವಾಲ್ಮೀಕಿ ಅವರು ಕವಿಮಾತ್ರರಲ್ಲದೆ, ದಾರ್ಶನಿಕ, ತತ್ವಜ್ಞಾನಿ, ರಾಜನೀತಿಜ್ಞ, ಸಮಾಜ ಸುಧಾರಕ, ಮನುಕುಲ ಚಿಂತಕರಾಗಿದ್ದವರು. ರಾಮರಾಜ್ಯದ ಪರಿಕಲ್ಪನೆ ಯನ್ನು ಕೃತಿ ಮೂಲಕವೇ ಪ್ರತಿಪಾದಿಸಿದವರು. ಈ ಮಹನೀಯರು ಒಂದು ವರ್ಗಕ್ಕೆ ಸೀಮಿತರಲ್ಲ. ಪ್ರತಿಯೊಬ್ಬರಿಗೂ ಶ್ರೀ ವಾಲ್ಮೀಕಿ ಮಹರ್ಷಿ ಗಳು ಪೂಜ್ಯನೀಯರಾಗಿದ್ದಾರೆ. ಆದರೂ ಶ್ರೀರಾಮರ ಹೆಸರಿನ ಬಲದಲ್ಲೇ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ, ಮಹರ್ಷಿಗಳ ಪುತ್ಥಳಿ ನಿರ್ಮಾ ಣಕ್ಕೆ ಅನುಮತಿಸಲು ಮೀನಾಮೇಷ ಎಣಿಸುತ್ತಿರುವುದಕ್ಕೆ ಕಾರಣವೇ ನೆಂದು ಜನರಿಗೆ ತಿಳಿಸಬೇಕು ಎಂದು ಮೈಸೂರು ನಾಯಕರ ಪಡೆ ಪ್ರಶ್ನಿಸಿದೆ.

ಜನಪ್ರತಿನಿಧಿಗಳ ಒತ್ತಾಯಕ್ಕೂ ಕಿಮ್ಮತ್ತಿಲ್ಲ: ಈ ಬಗ್ಗೆ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿದ ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಉಪಾ ಧ್ಯಕ್ಷರೂ ಆದ ಮೈಸೂರು ನಾಯಕ ಪಡೆ ಅಧ್ಯಕ್ಷ ಪಡುವಾರಹಳ್ಳಿ ಎಂ. ರಾಮಕೃಷ್ಣ, ಮೈಸೂರು ನಗರದಲ್ಲೇ ಲಕ್ಷದ ಹತ್ತಿರತ್ತಿರ ವಾಲ್ಮೀಕಿ ಸಮುದಾಯ ದವರಿದ್ದೇವೆ. ಅಲ್ಲದೆ ಇದು ಒಂದು ಸಮುದಾಯದ ಆಗ್ರಹವಲ್ಲ. ಶ್ರೀ ವಾಲ್ಮೀಕಿ ಮಹರ್ಷಿಗಳ ಪುತ್ಥಳಿ ನಿರ್ಮಾಣವಾಗಬೇಕೆಂಬುದು ಎಲ್ಲಾ ವರ್ಗದವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ನಗರ ಪಾಲಿಕೆ ಮುಂಭಾಗ ಹಲವು ಬಾರಿ ಪ್ರತಿಭಟನೆಯನ್ನೂ ನಡೆಸಿದ್ದೇವೆ. ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಂದಾ ಸ್ವಾಮೀಜಿ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇ ವಪ್ಪ, ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರು ಸ್ಥಳ ಪರಿಶೀಲನೆಯನ್ನೂ ನಡೆಸಿದ್ದರು. ಅಲ್ಲದೆ ವಾಸು ಅವರು, 2017ರ ಅಕ್ಟೋಬರ್ ತಿಂಗಳಲ್ಲಿ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಹೆಚ್.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಗಳು ಹಾಗೂ ಮೇಯರ್‍ಗೆ ಪತ್ರ ಬರೆದು ಆಗ್ರಹಿಸಿದ್ದರು. ನಂತರ ಈ ಸಂಬಂಧ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಯಿಂದ ಪಾಲಿಕೆ ಆಯುಕ್ತರನ್ನು ಕೇಳಲಾಗಿತ್ತು. 2019ರ ಜ.29ರಂದು ಪಾಲಿಕೆ ಬಳಿ ಪ್ರತಿಭಟಿಸಿ, ಅಂದಿನ ಮೇಯರ್ ಪುಷ್ಪಲತಾ ಜಗನ್ನಾಥ್ ಅವರಿಗೆ ಮನವಿ ಸಲ್ಲಿಸಿದ್ದೆವು. ಹಿರಿಯ ಸಾಹಿತಿ ಸಿಪಿಕೆ ನೇತೃತ್ವದಲ್ಲಿ ಸಹಿ ಸಂಗ್ರಹ ಮಾಡಿದ್ದೆವು. ಹಿಂದಿನ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೂ ಮನವಿ ನೀಡಿದ್ದೇವೆ ಎಂದು ತಿಳಿಸಿದರು.

ಕಡೆಗೆ ನಿಗದಿತ ಸ್ಥಳದಲ್ಲಿ ಶ್ರೀ ವಾಲ್ಮೀಕಿ ಮಹರ್ಷಿಗಳ ಪುತ್ಥಳಿ ನಿರ್ಮಾ ಣಕ್ಕೆ ಕೌನ್ಸಿಲ್‍ನಲ್ಲಿ ಅನುಮೋದನೆ ದೊರೆತು, ಸರ್ಕಾರದ ಅನುಮತಿಗೆ ಸಲ್ಲಿಸಲಾಗಿದೆ ಎಂದು ತಿಳಿಯಿತು. ಆದರೂ ಅನಗತ್ಯವಾಗಿ ವಿಳಂಬ ಧೋರಣೆ ತೋರುತ್ತಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಟಿ.ದೇವೇಗೌಡರು, ಸಂಸದ ಪ್ರತಾಪ್‍ಸಿಂಹ, ಶಾಸಕ ಎಲ್.ನಾಗೇಂದ್ರ ಅವರ ಮೂಲಕವೂ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಆದರೂ ಶ್ರೀರಾಮನ ಹೆಸರೇಳಿಕೊಂಡು ಸರ್ಕಾರ ರಚಿಸಿರುವ ಬಿಜೆಪಿಗೆ, ಶ್ರೀರಾಮರನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿಗಳ ಬಗ್ಗೆ ತಾತ್ಸಾರ ಏಕೆಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Translate »