`ವಿದ್ಯಾಗಮ’ ಅನುಷ್ಠಾನ ಪರಿಶೀಲನೆಗೆ ಉಸ್ತುವಾರಿ ತಂಡ
ಮೈಸೂರು

`ವಿದ್ಯಾಗಮ’ ಅನುಷ್ಠಾನ ಪರಿಶೀಲನೆಗೆ ಉಸ್ತುವಾರಿ ತಂಡ

August 26, 2020

ಮೈಸೂರು, ಆ.25(ಎಸ್‍ಪಿಎನ್)- ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮ ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಲು ಹಿರಿಯ ಅಧಿಕಾರಿಗಳ ಉಸ್ತುವಾರಿ ತಂಡವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ನೇಮಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳವಾರ ಪಟ್ಟಿ ಪ್ರಕಟಿಸಿದೆ.

ಮೈಸೂರು, ಕೊಡಗು, ಮಂಡ್ಯ ಜಿಲ್ಲೆಗಳಿಗೆ ಬೆಂಗಳೂರಿನ ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರನ್ನು ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಹಾಸನ, ಚಾಮರಾಜ ನಗರ ಜಿಲ್ಲೆಗೆ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್ ಅವರನ್ನು ನೇಮಿಸಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ್ನೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿರಂತರ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳ ಮನಸ್ಥೈರ್ಯ ಹೆಚ್ಚಿಸಲು `ವಿದ್ಯಾಗಮ’ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ ಎಂದು ರಾಜ್ಯ ಶಿಕ್ಷಣ ಸಂಶೋಧನಾ ತರಬೇತಿ ಸಂಸ್ಥೆಯ ಉಪ ನಿರ್ದೇಶಕ(ಅಭಿವೃದ್ಧಿ) ಕೆ.ಮಹದೇವಪ್ಪ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಗ್ರಾಮಗಳಲ್ಲಿ ವಿದ್ಯಾರ್ಥಿಗಳಿದ್ದಲ್ಲಿಗೆ ತೆರಳಿ ಶೈಕ್ಷಣಿಕ ಚಟುವಟಿಕೆ ಆರಂಭಿಸುವುದು ಶಿಕ್ಷಕರ ಜವಾಬ್ದಾರಿ. `ವಿದ್ಯಾಗಮ’ ಅನುಷ್ಠಾನ ಬಗ್ಗೆ ಮಾಹಿತಿ ಪಡೆಯಲು ಹಿರಿಯ ಅಧಿಕಾರಿಗಳ ತಂಡ ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭ ಆಯಾ ಜಿಲ್ಲೆಯ ಡಿಡಿಪಿಐ(ಆಡಳಿತ), ಬಿಇಓ ಹಾಗೂ ಬಿಆರ್‍ಸಿಗಳು ಹಾಜರಿದ್ದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

Translate »