ನೆರೆಯವರಿರ್ಲಿ ಕುಟುಂಬದವ್ರೆ ಮನೆಗೆ ಸೇರಿಸ್ಲಿಲ್ಲ, ಯಾವ್ದಾದ್ರು ಹೋಟ್ಲಲ್ಲಿ ಉಳ್ಕೊ ಅಂದ್ರು…!
ಮೈಸೂರು

ನೆರೆಯವರಿರ್ಲಿ ಕುಟುಂಬದವ್ರೆ ಮನೆಗೆ ಸೇರಿಸ್ಲಿಲ್ಲ, ಯಾವ್ದಾದ್ರು ಹೋಟ್ಲಲ್ಲಿ ಉಳ್ಕೊ ಅಂದ್ರು…!

August 26, 2020

ಮೈಸೂರು, ಆ.25(ವೈಡಿಎಸ್)- ನೆರೆಯವರಿರ್ಲಿ ಕುಟುಂಬ ದವ್ರೆ ಮನೆಗೆ ಸೇರಿಸ್ಲಿಲ್ಲ. ಯಾವ್ದಾದ್ರು ಹೋಟ್ಲಲ್ಲಿ ಉಳ್ಕೊ ಅಂದ್ರು… ಇದು ಬೇಸರ ತರುಸ್ತು…

ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದಾಗ ಕುಟುಂಬ ದವ್ರು ಮನೆಗೆ ಬರೋದ್ಬೇಡ. ಯಾವ್ದಾರೂ ಹೋಟ್ಲಲ್ಲಿ ಇರು ಅಂತಂದ್ರು. ಮನೇರ್ಗೆ ತೊಂದ್ರೆ ಆಗ್ಬಾರ್ದು ಎಂದು ಹೋಟ್ಲಲ್ಲಿ ಕ್ವಾರಂಟೈನ್ ಆಗಿದ್ದೆ ಎಂದು ಕೊರೊನಾ ಸೋಂಕಿನಿಂದ ಗುಣಮುಖರಾದ ನಜರ್ ಬಾದ್ ನಿವಾಸಿಯ(ಎಂವೈಎಸ್760) ಬೇಸರದ ನುಡಿಗಳು.

ಜು.5ರಂದು ಜ್ವರ ಬಂತು. ಕ್ಲಿನಿಕ್‍ಗೆ ಹೋದರೆ ಡಾಕ್ಟ್ರು 2 ಇಂಜಕ್ಷನ್ ಹಾಕಿದ್ರು. ಆದರೂ ಜ್ವರ ಕಡಿಮೆ ಆಗ್ಲಿಲ್ಲ. ಮತ್ತೆ ಕ್ಲಿನಿಕ್‍ಗೆ ಹೋದಾಗ ಡಾಕ್ಟ್ರು, ಉಸಿರ್ನ ಮೇಲ್ಕೆ ಎಳ್ಕೋ ಅಂದ್ರು. ಎಳೆಯಕ್ಕೆ ಆಗ್ತಿರ್ಲಿಲ್ಲ. ಆಗ ಡಾಕ್ಟ್ರು, ಇದು ಕೋವಿಡ್ ಇರ್ಬಹ್ದು. ಕೆ.ಆರ್.ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡ್ಸಿ ಅಂದ್ರು. ಅವ್ರ ಸಲಹೆ ಯಂತೆ ಹೋಗಿ ಪರೀಕ್ಷೆ ಮಾಡಿಸ್ದೆ. ಪಾಸಿಟಿವ್ ಬಂದಿದೆ ಎಂದು ಹೇಳಿದ್ರು. ಮೇಟಗಳ್ಳಿ ಕೋವಿಡ್ ಆಸ್ಪತ್ರೆಗೆ ಕರ್ಕೊಂಡ್ ಹೋದ್ರು. ಅಲ್ಲಿ 4 ದಿನ ಚಿಕಿತ್ಸೆ ಪಡೆದು ಗುಣಮುಖನಾದೆ. ಡಿಶ್ಚಾರ್ಜ್ ಮಾಡಿದ್ರು. 14 ದಿನ ಹೋಟೆಲ್‍ನಲ್ಲಿ ಕ್ವಾರಂಟೈನ್ ಇದ್ದೆ. ಈಗದು ಮುಕ್ತಾಯವಾಯ್ತು.

ಊಟ ಚೆನ್ನಾಗಿತ್ತು: ಕೋವಿಡ್ ಆಸ್ಪತ್ರೆಯಲ್ಲಿ ಊಟ ಚೆನ್ನಾಗಿರಲ್ಲ. ಶುಚಿತ್ವ ಇಲ್ಲ ಎಂದು ಎಲ್ಲರೂ ಹೇಳ್ತಿದ್ರು. ಆದರೆ, ಆಸ್ಪತ್ರೆಲಿ ಸಮಯಕ್ಕೆ ಸರಿಯಾಗಿ ಶುಚಿ, ರುಚಿ ಯಾದ ಊಟ ನೀಡ್ತಾರೆ. ಬಿಸಿ ನೀರಿನ ವ್ಯವಸ್ಥೆಯೂ ಇದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿದಿನ ನರ್ಸ್‍ಗಳು ಆರೋಗ್ಯ ವಿಚಾರಿಸ್ತಾರೆ. ಯಾರ್ಗಾದ್ರೂ ತಲೆನೋವು, ಮೈ ಕೈನೋವು, ಕೆಮ್ಮು ಇದೆ ಅಂದ್ರೆ ಕೂಡಲೇ ಔಷಧಿ ನೀಡ್ತಾರೆ. ಅವರಷ್ಟು ಕಷ್ಟಪಡುತ್ತಿರೋರು ಯಾರೂ ಇಲ್ಲ. ಕೊರೊನಾ ವಾರಿಯರ್ಸ್‍ಗೆ ಧನ್ಯವಾದ ಹೇಳಲೇಬೇಕು.

ಮನೆಗೆ ಸೇರಿಸಲಿಲ್ಲ: ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದಾಗ ಕುಟುಂಬವ್ರು ಮನೆಗೆ ಬರ್ಬೇಡ ಅಂದ್ರು. ಹಾಗಾಗಿ ಹೋಟ್ಲಲ್ಲಿ ಕ್ವಾರಂಟೈನ್ ಆಗಿದ್ದೆ. ಪೂರ್ಣಗೊಂಡ ನಂತ್ರ ಮನೆಗೆ ಹೋಗಿ ಬಟ್ಟೆ ತಗೊಂಡು ಸ್ನೇಹಿತನ ಮನೆಗೆ ಹೋದೆ. ಅಲ್ಲಿ ಎಲ್ಲರೂ ಮಾತಾಡ್ಸಿ ಆರೋಗ್ಯ ವಿಚಾರಿಸಿದ್ದು ಸಂತೋಷವಾಯ್ತು. ಮರುದಿನವೇ ಕೆಲಸಕ್ಕೆ ಹೋಗಲು ಬೆಂಗಳೂರಿಗೆ ಬಂದೆ… ಎಂದು ನೋವಿನಿಂದಲೇ ಮಾತು ಮುಗಿಸಿದರು.

Translate »