ಉರುಳಿಗೆ ಬಲಿಯಾದ ಹುಲಿಯ ಮರಿಗಳು ಸೇಫ್
ಮೈಸೂರು

ಉರುಳಿಗೆ ಬಲಿಯಾದ ಹುಲಿಯ ಮರಿಗಳು ಸೇಫ್

November 17, 2022

ಮೈಸೂರು, ನ.16(ಎಂಟಿವೈ)- ಬೇಟೆಗಾರರ ಉರುಳಿಗೆ ಸಿಲುಕಿ ಮೃತಪಟ್ಟಿದ್ದ ಹುಲಿಯ ಮೂರು ಮರಿಗಳ ಚಲನ-ವಲನ ಮೂರು ದಿನದ ಹಿಂದೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜಿಂಕೆಯೊಂದನ್ನು ಬೇಟೆಯಾಡಿ, ಅದರ ಮಾಂಸ ಸೇವಿಸುತ್ತಿರುವ ದೃಶ್ಯ ದಾಖಲಾಗಿದೆ. ಇದರಿಂದ ಮರಿಗಳು ಸುರಕ್ಷಿತವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವಲಯದ ಸರಹದ್ದಿನಲ್ಲಿ ನ.12 ರಂದು ಕೊಳೆತ ಸ್ಥಿತಿಯಲ್ಲಿ ದೊರೆತ ಹೆಣ್ಣು ಹುಲಿಯ ಮೂರು ಮರಿಗಳ ಬಗ್ಗೆ ಅರಣ್ಯ ಇಲಾಖೆ ಕಳವಳ ವ್ಯಕ್ತಪಡಿಸಿತ್ತು. ಸುಮಾರು 8 ತಿಂಗಳ ಮರಿಗಳಾಗಿದ್ದು, ಬೇಟೆಯಾಡಲು ಶಕ್ತವಾಗಿಲ್ಲದ ಕಾರಣ ಹಸಿವಿನಿಂದ ಕಂಗೆಟ್ಟಿರುವ ಅನುಮಾನ ವ್ಯಕ್ತವಾಗಿತ್ತು. ಈ ಮರಿಗಳ ರಕ್ಷಣೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿತ್ತು.

ಅಂತರಸಂತೆ ವಲಯದ ಸಫಾರಿ ವಿಭಾಗದ ನಾಯಂತಿಕಟ್ಟೆ ಬಳಿ 2009ರಿಂದ 2022ರ ಆಗಸ್ಟ್ ವರೆಗೂ ನಿತ್ಯವೂ ಕಾಣಿಸಿಕೊಳ್ಳುತ್ತಿದ್ದ ಹೆಣ್ಣು ಹುಲಿ, ಅರಣ್ಯ ಗಡಿಯಿಂದ 300 ಮೀಟರ್ ಹೊರಗೆ ಬಂದು ಕೃಷಿ ಭೂಮಿಗೆ ಹೊಂದಿಕೊಂಡಂತೆ ಹಳ್ಳದಲ್ಲಿ ತನ್ನ ಮೂರು ಮರಿಗಳೊಂದಿಗೆ ಬೀಡು ಬಿಟ್ಟಿತ್ತು. ಬೇಟೆಗಾರರು ಹಂದಿ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ತಾಯಿ ದಾರುಣವಾಗಿ ಮೃತ ಪಟ್ಟಿತ್ತು. 8 ದಿನಗಳ ಬಳಿಕ ಹುಲಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಅರಣ್ಯ ಸಿಬ್ಬಂದಿಗಳಿಗೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಆದೇಶದಂತೆ ಮರಿಗಳ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು.

4 ಆನೆ, 120 ಸಿಬ್ಬಂದಿ, 30 ಕ್ಯಾಮರಾ ಬಳಕೆ: ಅಸಹಾಯಕ ಹುಲಿ ಮರಿಗಳ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ತಾಯಿ ಹುಲಿ ಕಳೇಬರ ದೊರೆತ ದಿನದಂದು ಸಂಜೆ ವೇಳೆಗೆ ವಿವಿಧೆಡೆ ಕ್ಯಾಮರಾ ಅಳವಡಿಸಲಾಗಿತ್ತು. ನ.13ರಂದು ಸಾಕಾನೆಗಳಾದ ಅಭಿಮನ್ಯು, ಭೀಮಾ, ಮಹೇಂದ್ರ ಹಾಗೂ ಗಣೇಶನ ಬಳಸಿಕೊಂಡು, 120 ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ದಿನ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಕೆಲವೆಡೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ನಂತರ ಎರಡು ಡ್ರೋನ್ ಬಳಸಿ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿತ್ತು. ಈ ವೇಳೆ ನ.14ರಂದು ಜಿಂಕೆಯನ್ನು ಯಾವುದೋ ಪ್ರಾಣಿ ಬೇಟೆಯಾಡಿ, ಅದರ ಮಾಂಸ ಸೇವಿಸಿತ್ತು. ಅನುಮಾನದ ಮೇರೆಗೆ ಜಿಂಕೆ ಕಳೇಬರ ಇದ್ದ ಸ್ಥಳದಲ್ಲಿ ಕ್ಯಾಮರಾ ಅಳವಡಿಸಲಾಗಿತ್ತು. ನ.15ರಂದು ರಾತ್ರಿ ಮೂರು ಹುಲಿ ಮರಿಗಳು ಉಳಿದಿದ್ದ ಜಿಂಕೆ ಮಾಂಸ ತಿನ್ನಲು ಬಂದಿರುವ ದೃಶ್ಯ ದಾಖಲಾಗಿದೆ. ಈ ಮೂರು ಮರಿಗಳೂ ಲವಲವಿಕೆಯಿಂದ ಕೂಡಿದ್ದು, ಜಿಂಕೆ ಮಾಂಸ ಸೇವಿಸುತ್ತಿರುವ ದೃಶ್ಯ ಕಂಡು ಬಂದಿದೆ.

ಅಸ್ತಿತ್ವಕ್ಕೆ ಧಕ್ಕೆ ಇಲ್ಲ: ಕ್ಯಾಮರಾದಲ್ಲಿ ಸೆರೆ ಸಿಕ್ಕ ದೃಶ್ಯವನ್ನು ಹಿರಿಯ ಅಧಿಕಾರಿಗಳು, ವನ್ಯಜೀವಿ ತಜ್ಞರು ಸೂಕ್ಷ್ಮವಾಗಿ ಪರಿಶೀಲಿಸಿ, ಹುಲಿ ಮರಿಗಳು ಸ್ವತಂತ್ರವಾಗಿ ಬೇಟೆಯಾಡುವ ಸಾಮಥ್ರ್ಯ ಹೊಂದಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಅವುಗಳನ್ನು ಸೆರೆ ಹಿಡಿಯದೇ, ಅವು ಸ್ವಚ್ಛಂದವಾಗಿರಲು ಅನುವು ಮಾಡಿಕೊಡುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ. ಇದರಿಂದ ಸೆರೆ ಹಿಡಿಯುವ ಕಾರ್ಯಾಚರಣೆಯಿಂದ ಅರಣ್ಯ ಇಲಾಖೆ ಹಿಂದೆ ಸರಿದಿದೆ.
ಮುಂದುವರೆಯಲಿದೆ ಕಣ್ಗಾವಲು: ಹುಲಿ ಮರಿಗಳು ವಿಹರಿಸಬಹುದಾದ ತಾರಕ ಹಳ್ಳ, ಹೊಳೆ ದಡ ಮತ್ತು ಹಿನ್ನೀರಿನ ಪ್ರದೇಶದಲ್ಲಿ ಕಣ್ಗಾವಲು ಮುಂದುವರೆಸಲು ನಿರ್ಧರಿಸಲಾಗಿದೆ. ಕೂಂಬಿಂಗ್ ಕಾರ್ಯಾಚರಣೆಗೆ ಬಳಸಿಕೊಂಡಿರುವ ಆನೆಗಳೊಂದಿಗೆ ಇನ್ನಷ್ಟು ದಿನ ಹುಲಿ ಮರಿಗಳ ಚಲನವಲನ ಗಮನಿಸಲು ಚಿಂತಿಸಲಾಗಿದೆ.

ಇನ್ನಷ್ಟು ಪರಿಣತಿ ಅಗತ್ಯ: ಹುಲಿ ಮರಿಗಳು ಸ್ವಯಂ ಬೇಟೆಯಾಡುವ ಸಾಮಥ್ರ್ಯ ಹೊಂದಿವೆ. ಈ ಮರಿಗಳಿಗೆ ಈಗ 10 ತಿಂಗಳು ಇರಬೇಕೆಂದು ಅಂದಾಜಿಸಲಾಗಿದ್ದು, ಅರಣ್ಯ ಪ್ರದೇಶಕ್ಕಿಂತ ಈಗ ಅವು ಇರುವ ಪ್ರದೇಶದಲ್ಲಿಯೇ ಜಿಂಕೆ, ಕಾಡಂದಿ ಬೇಟೆಯಾಡುವ ಸಾಮಥ್ರ್ಯ ವೃದ್ಧಿಸಿಕೊಂಡರೆ 3-4 ತಿಂಗಳ ನಂತರ ಅರಣ್ಯ ಪ್ರದೇಶಕ್ಕೆ ಹುಲಿ ಮರಿಗಳು ವಲಸೆ ಹೋಗುತ್ತವೆ ಎಂದು ಭಾವಿಸಲಾಗಿದೆ.

ಪ್ರಾಣಿ ಪ್ರಿಯರ ಸಮಾಧಾನ: ಹುಲಿ ಮರಿಗಳ ಸೆರೆ ಉದ್ದೇಶದಿಂದ ಹಿಂದೆ ಸರಿದ ಕ್ರಮವನ್ನು ವನ್ಯಜೀವಿ ಪ್ರೇಮಿಗಳು ಸ್ವಾಗತಿಸಿದ್ದಾರೆ. ಎರಡು ದಿನದ ಹಿಂದೆಯೇ ಮರಿಗಳನ್ನು ಸೆರೆ ಹಿಡಿಯದಂತೆ ಅಭಿಯಾನ ಆರಂಭಿಸಿದ್ದರು. ಹುಲಿ ಮರಿಗಳು ಅಲ್ಲಿಯೇ ನೆಲೆ ನಿಲ್ಲುವ ವಾತಾವರಣ ಕಲ್ಪಿಸುವಂತೆ ಆಗ್ರಹಿಸಿದ್ದರು. ಯಾವುದೇ ಕಾರಣಕ್ಕೂ ಮೃಗಾಲಯ ಅಥವಾ ಪುನರ್ವಸತಿ ಕೇಂದ್ರಕ್ಕೆ ಕೊಂಡೊಯ್ಯದಂತೆ ಮನವಿ ಮಾಡಿದ್ದರು. ಇದೀಗ ಅರಣ್ಯ ಇಲಾಖೆ, ಸೆರೆ ಹಿಡಿಯುವ ನಿರ್ಧಾರದಿಂದ ಹಿಂದೆ ಸರಿದಿರುವುದಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಾರ್ಯಾಚರಣೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಹರ್ಷಕುಮಾರ್ ನರಗುಂದ, ಅಂತರಸಂತೆ ವಲಯದ ಎಸಿಎಫ್ ರಂಗಸ್ವಾಮಿ, ಅಂತರಸಂತೆ ಆರ್‍ಎಫ್‍ಓ ಸಿದ್ದರಾಜು, ಡಿ.ಬಿ.ಕುಪ್ಪೆ ಆರ್‍ಎಫ್‍ಓ ಮಧು, ಮೇಟಿಕುಪ್ಪೆ ಆರ್‍ಎಫ್‍ಓ ಹರ್ಷಿತ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Translate »