ನಾನು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ
ಮೈಸೂರು

ನಾನು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ

November 18, 2022

ಮೈಸೂರು, ನ.17(ಆರ್‍ಕೆ)-ಬಸ್ ತಂಗುದಾಣ ನಿರ್ಮಿಸುವ ವಿಚಾರ ದಲ್ಲಿ ನಾನು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಆ ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ ಎಂದು ಶಾಸಕ ಎಸ್.ಎ.ರಾಮದಾಸ್, ಇಂದು ಮಾಧ್ಯಮಗಳ ಮುಂದೆ ಗದ್ಗದಿತರಾದರು.

ಮೈಸೂರು-ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಪಾರಂಪರಿಕ ಶೈಲಿಯ ಬಸ್ ತಂಗುದಾಣವನ್ನು ಶಾಸಕರ ಕ್ಷೇತ್ರಾ ಭಿವೃದ್ಧಿ ಅನುದಾನದಿಂದ ಕೆಆರ್‍ಐಡಿಎಲ್ ಮೂಲಕ ನಿರ್ಮಿಸಲಾಗಿದೆ. ಅದರ ಗೋಪುರಗಳು ಪುರಾತತ್ವ ಮತ್ತು ಪಾರಂಪರಿಕ ವಿನ್ಯಾಸದಂತೆ ಇವೆಯೇ ಹೊರತು, ಬೇರೆ ಧರ್ಮದ ಶೈಲಿಯದ್ದಲ್ಲ ಎಂದು ಅವರು ಸಮರ್ಥಿಸಿಕೊಂಡರು. ಪಾರಂಪರಿಕ ತಜ್ಞರ ಸಮಿತಿ ರಚಿಸಲಿ. ಒಂದು ವೇಳೆ ಅದು ಸರಿ ಇಲ್ಲ ಎಂದು ಅಭಿಪ್ರಾಯಪಟ್ಟರೆ, ವಿನ್ಯಾಸ ಬದಲಿ ಸುತ್ತೇವೆ. ಅಥವಾ ಈ ವಿಚಾರದಲ್ಲಿ ಶಿಕ್ಷೆ ಕೊಡಲಿ, ಆ ನಷ್ಟದ ಹಣವನ್ನು ನನ್ನ ಸಂಬಳದ ಹಣದಲ್ಲಿ ಭರಿಸುತ್ತೇನೆ ಎಂದ ಅವರು, ಈ ಬಗ್ಗೆ ನಿನ್ನೆ ಬೆಂಗಳೂರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ನೀಡಿದ್ದೇನೆ ಎಂದರು. ಶಾಸಕನಾಗಿ ನಾನು ಅಭಿ ವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ.

ಪಾರ್ಕ್, ಸ್ಮಶಾನ ಅಭಿವೃದ್ಧಿ ನನ್ನ ಕನಸು. ಸಾಯುವ ಮುನ್ನ ಸಾಧನೆ ಮಾಡಬೇಕೆಂಬುದೇ ನನ್ನ ಗುರಿ. 30 ವರ್ಷಗಳಲ್ಲಿ ಕಿರುಕುಳ ನೀಡಿದ್ದರಿಂದ ಬಿಜೆಪಿಯ 11 ಶಾಸಕರು ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೇ. ಇರುವವರೆಗೆ ಕ್ಷೇತ್ರದ ಜನರಿಗೆ ಒಳ್ಳೆಯ ಕೆಲಸ ಮಾಡಲು ಬಿಡಿ. ಬಸ್ ಶೆಲ್ಟರ್ ವಿಷಯದಲ್ಲಿ ಏನನ್ನೂ ಕೇಳಬೇಡಿ. ದಯಮಾಡಿ ನನ್ನನ್ನು ಬಿಟ್ಟು ಬಿಡಿ, ಪ್ಲೀಸ್… ಎಂದು ಹೇಳಿ ರಾಮದಾಸ್ ಗದ್ಗದಿತರಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಕೈಮುಗಿದರು.

ಬಸ್ ಶೆಲ್ಟರ್ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿರುವ ಸಾಮಾಜಿಕ ಜಾಲ ತಾಣಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿ ಪತ್ರದಲ್ಲಿ ಕೇಳಿಕೊಂಡಿದ್ದೇನೆ. ಕ್ಷೇತ್ರದ ಜನರಿಗಾಗಿ ಕೆಲಸ ಮಾಡಬೇಕೆಂಬುದೇ ನನ್ನ ಉದ್ದೇಶವಾಗಿರುವುದರಿಂದ ನನ್ನನ್ನು ಬಿಟ್ಟು ಬಿಡಿ ಎಂದರು.

Translate »