ಮಹಿಳೆ, ನಾಲ್ವರು ಮಕ್ಕಳೂ ಸೇರಿ ಒಂದೇ ಕುಟುಂಬದ ಐವರ ಭೀಕರ ಹತ್ಯೆ
ಮಂಡ್ಯ

ಮಹಿಳೆ, ನಾಲ್ವರು ಮಕ್ಕಳೂ ಸೇರಿ ಒಂದೇ ಕುಟುಂಬದ ಐವರ ಭೀಕರ ಹತ್ಯೆ

February 7, 2022

ಶ್ರೀರಂಗಪಟ್ಟಣ, ಫೆ.6(ವಿನಯ್ ಕಾರೇ ಕುರ)-ಶ್ರೀರಂಗಪಟ್ಟಣ ತಾಲೂಕು ಕೆಆರ್‍ಎಸ್ ಗ್ರಾಮದಲ್ಲಿ ಶನಿವಾರ ತಡರಾತ್ರಿ ಮಹಿಳೆ ಹಾಗೂ ನಾಲ್ವರು ಮಕ್ಕಳು ಸೇರಿ ದಂತೆ ಒಂದೇ ಕುಟುಂಬದ ಐವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಗ್ರಾಮದ ಬಜಾರ್ ಲೈನ್ ಬಡಾ ವಣೆಯ ಗಂಗಾರಾಮ್ ಎಂಬುವರ ಪತ್ನಿ ಲಕ್ಷ್ಮಿ(30), ಮಕ್ಕಳಾದ ರಾಜು(10), ಕೋಮಲ್(7), ಕುನಾಲ್(4) ಮತ್ತು ಗಂಗಾರಾಮ್ ಅವರ ಸಹೋದರ ಗಣೇಶ್ ಅವರ ಮಗ ಗೋವಿಂದ(8) ಹತ್ಯೆಗೀಡಾದವರಾಗಿದ್ದಾರೆ.

ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಗಂಗಾ ರಾಮ್, ತನ್ನ ಸಹೋದರ ಗಣೇಶ್ ಮತ್ತು ಅತ್ತಿಗೆ ಚಂಪಾಡಿ ಜೊತೆ ವ್ಯಾಪಾರ ನಿಮಿತ್ತ ಹೊರ ರಾಜ್ಯಕ್ಕೆ ತೆರಳಿದ್ದಾರೆ. ಇಂದು ಬೆಳಗ್ಗೆ 8.30 ಆದರೂ ಮನೆಯ ಬಾಗಿಲು ತೆರೆಯದಿದ್ದುದನ್ನು ಗಮನಿಸಿದ ಪಕ್ಕದ ಮನೆಯ ಅವರ ಸಂಬಂಧಿಯೇ ಆದ ಸೀತಾಬಾಯಿ ಅವರು ಬಾಗಿಲು ತೆರೆದು ನೋಡಿದಾಗ ಹತ್ಯಾಕಾಂಡ ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಎಸ್ಪಿ ಯತೀಶ್, ಶ್ರೀರಂಗಪಟ್ಟಣ ಡಿವೈಎಸ್‍ಪಿ ಸಂದೇಶ್ ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಯೋಗೇಶ್ ಸೇರಿದಂತೆ ಹಿರಿಯ ಅಧಿ ಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲಿಸಿದರು. ನಾಲ್ವರು ಮಕ್ಕಳು ಹಾಗೂ ಮಹಿಳೆಯ ಸಾಮೂಹಿಕ ಹತ್ಯಾಕಾಂಡದಿಂದ ಕೆಆರ್‍ಎಸ್ ಗ್ರಾಮ ಬೆಚ್ಚಿ ಬಿದ್ದಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾದಂತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಹತ್ಯೆಗೆ ಕಾರಣವೇನು ಎಂಬುದು ನಿಗೂಢವಾಗಿದೆ. ಈ ಕುಟುಂಬವು ಉತ್ತರ ಭಾರತದಿಂದ ಇಲ್ಲಿಗೆ ಬಂದು ಹತ್ತಾರು ವರ್ಷಗಳಿಂದ ನೆಲೆಸಿದೆ. ಈ ಕುಟುಂಬಕ್ಕೆ ಗ್ರಾಮದಲ್ಲಿ ಯಾರೊಂದಿಗೂ ಮನಸ್ತಾಪವಿರಲಿಲ್ಲ ಎಂದು ಹೇಳ ಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

Translate »