ಇಂದು ಮೈಸೂರು ಬಂದ್‍ಗೆ ಕರೆ
ಮೈಸೂರು

ಇಂದು ಮೈಸೂರು ಬಂದ್‍ಗೆ ಕರೆ

February 7, 2022

ಮೈಸೂರು,ಫೆ.6(ಎಂಟಿವೈ)-ಗಣರಾಜ್ಯೋ ತ್ಸವ ದಿನದ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ತೆರವುಗೊಳಿ ಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವ ನಿಟ್ಟಿ ನಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ದಲಿತ ಪರ ಸಂಘಟನೆಗಳು ಕರೆ ನೀಡಿರುವ `ಮೈಸೂರು ಬಂದ್’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಗುವ ಸಾಧ್ಯತೆ ಇದ್ದು, ಕೆಲವು ಸಂಘಟನೆ ಗಳು ಕೇವಲ ನೈತಿಕ ಬೆಂಬಲವನ್ನಷ್ಟೇ ಘೋಷಿಸಿವೆ.
ಹೋಟೆಲ್ ಮಾಲೀಕರ ಸಂಘ, ಸಂಘ-ಸಂಸ್ಥೆ ಗಳ ಒಕ್ಕೂಟ, ವ್ಯಾಪಾರಿಗಳ ಸಂಘ ಸೇರಿದಂತೆ ಕೆಲವು ಸಂಘಟನೆಗಳು ಕೋವಿಡ್ ಹಿನ್ನೆಲೆಯಲ್ಲಿ ಕಳೆದ 1 ವರ್ಷದಿಂದ ಸಂಕಷ್ಟದ ಪರಿಸ್ಥಿತಿ ಎದು ರಿಸುತ್ತಿದ್ದೇವೆ. ಈ ಹಿನ್ನೆಲೆ ಮೈಸೂರು ಬಂದ್‍ಗೆ ನೈತಿಕ ಬೆಂಬಲವನ್ನಷ್ಟೇ ನೀಡುತ್ತೇವೆ. ಪೂರ್ಣ ಪ್ರಮಾಣ ದಲ್ಲಿ ವಹಿವಾಟು ಬಂದ್ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿರುವುದ ರಿಂದ ಮೈಸೂರು ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಲ್ಕು ತಂಡ ರಚನೆ: ಸಂವಿಧಾನ ರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದಲಿತ ಪರ ಸಂಘಟನೆ ಗಳ ಒಕ್ಕೂಟ ಸೇರಿದಂತೆ ಕೆಲವು ಸಂಘಟನೆಗಳು ಒಳಗೊಂಡು ಮೈಸೂರು ಬಂದ್‍ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ನಾಳೆ (ಫೆ.7) ನಡೆಯಲಿರುವ ಮೈಸೂರು ಬಂದ್ ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹೋರಾಟಗಾರರು ತನ್ನದೇ ಆದ ರೂಪು-ರೇಷೆ ಸಿದ್ಧಗೊಳಿಸಲು ಮುಂದಾಗಿದ್ದಾರೆ. ಬೆಳಗ್ಗೆ 7ಕ್ಕೆ ಪುರಭವನದ ಆವರಣದಲ್ಲಿ ಸೇರಿ ನಾಲ್ಕು ತಂಡಗಳಾಗಿ ವಿಭಜನೆಗೊಂಡು ಮೈಸೂರಿನ 4 ದಿಕ್ಕುಗಳಿಗೂ ತೆರಳಿ ರಸ್ತೆ ತಡೆ ನಡೆಸುವ ಮೂಲಕ ಮೈಸೂರು ಬಂದ್‍ಗೆ ಸ್ಥಳೀಯರ ಬೆಂಬಲ ಕೋರಲು ನಿರ್ಧರಿಸಿದ್ದಾರೆ. ಅಲ್ಲದೇ ಮೈಸೂರಿನ ಪ್ರಮುಖ ರಸ್ತೆಗಳಾದ ಡಿ.ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಸಯ್ಯಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಕೆಲವು ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ವ್ಯಾಪಾರಿಗಳ ಬೆಂಬಲ ಕೋರುತ್ತೇವೆ ಎಂದು ಮುಖಂಡ ಕೆ.ಶಿವರಾಂ ತಿಳಿಸಿದ್ದಾರೆ.

ನೈತಿಕ ಬೆಂಬಲ: ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತ ನಾಡಿ, ಕಳೆದ 8 ತಿಂಗಳಿನಿಂದ ಹೋಟೆಲ್ ಉದ್ಯಮಕ್ಕೆ ಹಿನ್ನಡೆ ಉಂಟಾಗಿದೆ. ಈ ಹಿನ್ನೆಲೆ ಯಲ್ಲಿ ಪದೇ ಪದೆ ಬಂದ್‍ಗೆ ನಾವು ಉದ್ಯಮವನ್ನು ಸ್ಥಗಿತಗೊಳಿಸುತ್ತಿದ್ದರೆ ಉದ್ಯಮ ನಡೆಸುವವರು ಹಾಗೂ ಉದ್ಯಮವನ್ನೇ ಅವಲಂಬಿಸಿರುವವರು ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಹೋಟೆಲ್ ಉದ್ಯಮಿಗಳು ಮೈಸೂರು ಬಂದ್‍ಗೆ ನೈತಿಕ ಬೆಂಬಲವನ್ನಷ್ಟೇ ನೀಡಿ ವಹಿವಾಟು ಎಂದಿನಂತೆ ನಡೆಸುತ್ತೇವೆ. ನಮಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅಪಾರವಾದ ಗೌರವವಿದೆ. ಈ ನಿಟ್ಟಿನಲ್ಲಿ ನಾವು ನೈತಿಕ ಬೆಂಬಲ ನೀಡುತ್ತಿದ್ದೇವೆ ಎಂದರು.

ಶರಣ ಮಂಡಳಿ ಬೆಂಬಲ: ಮೈಸೂರು ಬಂದ್‍ಗೆ ಮೈಸೂರು ಶರಣ ಮಂಡಳಿ ಬೆಂಬಲ ನೀಡುತ್ತದೆ ಎಂದು ಮಂಡಳಿಯ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ತಿಳಿಸಿದ್ದಾರೆ. ಸಂವಿಧಾನವನ್ನು ಕೊಡುಗೆಯಾಗಿ ನೀಡಿದಂತಹ ಮಹಾನ್ ನಾಯಕರಾದ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಧೀಶರೇ ತೆರವುಗೊಳಿಸಿರುವುದು ಖಂಡನೀಯ. ಇಂತಹ ಪ್ರಕರಣಗಳು ಮರುಕಳಿಸಬಾರದು. ಕೂಡಲೇ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಂಗಡಿಗಳು ತೆರೆದಿರುತ್ತವೆ: ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಮಾತನಾಡಿ, ಮೈಸೂರು ಬಂದ್‍ಗೆ ಸಂಘ-ಸಂಸ್ಥೆಗಳ ಒಕ್ಕೂಟವು ನೈತಿಕ ಬೆಂಬಲ ನೀಡುತ್ತದೆ. ವಹಿವಾಟುಗಳು ಎಂದಿನಂತೆ ನಡೆಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

ಆಟೋ ಚಾಲಕರು: ಮೈಸೂರು ಬಂದ್‍ಗೆ ಕೆಲವು ಆಟೋ ಚಾಲಕರ ಸಂಘದವರು ಪೂರ್ಣ ಪ್ರಮಾಣದ ಬೆಂಬಲ ನೀಡಿದರೆ, ಕೆಲ ಆಟೋ ಚಾಲಕರ ಸಂಘವು 3 ಗಂಟೆ ಗಳ ಕಾಲ ಆಟೋ ಸಂಚಾರ ಬಂದ್ ಮಾಡಿ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಬಸ್ ಸಂಚಾರ, ಸರ್ಕಾರಿ ಕಚೇರಿ, ಶಾಲಾ-ಕಾಲೇಜು ತೆರೆದಿರುತ್ತೆ: ಮೈಸೂರು ನಗರದಲ್ಲಿ ಸೋಮವಾರ (ಫೆ.7) ನಗರ ಮತ್ತು ಗ್ರಾಮೀಣ ಸಾರಿಗೆ ಬಸ್‍ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಎಲ್ಲಾ ಮಾರ್ಗಗಳಲ್ಲೂ ಸಾರಿಗೆ ಸಂಸ್ಥೆ ಬಸ್ಸುಗಳ ಎಂದಿನಂತೆ ಸಂಚರಿಸಲಿವೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನು ಶಾಲಾ -ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲಿವೆ.

ಪೌರಕಾರ್ಮಿಕರ ಬೆಂಬಲ: ಡಾ.ಬಿ.ಆರ್.ಅಂಬೇಡ್ಕರ್ ವಿಚಾರದಲ್ಲಿ ರಾಯಚೂರು ಜಿಲ್ಲಾ ನ್ಯಾಯಾಧೀಶರ ವರ್ತನೆಯನ್ನು ಖಂಡಿಸಿ ಸೋಮವಾರದಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಕರೆ ನೀಡಿರುವ ಮೈಸೂರು ಬಂದ್‍ಗೆ ಮೈಸೂರು ಪಾಲಿಕೆ ಖಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘ ಬೆಂಬಲ ಸೂಚಿಸಿದೆ ಎಂದು ನಗರ ಪ್ರಧಾನ ಕಾರ್ಯದರ್ಶಿ ಸಿ.ಆರ್.ರಾಚಯ್ಯ ತಿಳಿಸಿದ್ದಾರೆ.

Translate »