ಪುರಾತನ ವಿಗ್ರಹ ಸಂರಕ್ಷಿಸಲೆತ್ನಿಸಿದ್ದಕ್ಕೆ ಕಳವು ಆರೋಪ: ಮರಳು ಕಲಾವಿದೆ ಗೌರಿ ವಿಷಾದ
ಮೈಸೂರು

ಪುರಾತನ ವಿಗ್ರಹ ಸಂರಕ್ಷಿಸಲೆತ್ನಿಸಿದ್ದಕ್ಕೆ ಕಳವು ಆರೋಪ: ಮರಳು ಕಲಾವಿದೆ ಗೌರಿ ವಿಷಾದ

July 16, 2020

ಮೈಸೂರು, ಜು.15(ಎಂಟಿವೈ)- ರಸ್ತೆಬದಿ ಅನಾಥ ವಾಗಿ ಬಿದ್ದಿದ್ದ ಪುರಾತನ ವಿಗ್ರಹವನ್ನು ಸಂರಕ್ಷಿಸಿ ಪುರಾ ತತ್ವ ಇಲಾಖೆಗೆ ಒಪ್ಪಿಸಲು ತಂದಿದ್ದಕ್ಕೆ ನನ್ನ ಮೇಲೆ ಸುಳ್ಳೇ ಕಳವು ದೂರು ದಾಖಲಿಸಲಾಗಿದೆ. ಹಣಕ್ಕಾಗಿ ಪೀಡಿಸಿದ ಸ್ಥಳೀಯನೊಬ್ಬ ಸುಳ್ಳು ದೂರಿಗೆ ಕಾರಣವಾಗಿದ್ದಾನೆ ಎಂದು ಮರಳು ಕಲಾಕೃತಿ ಕಲಾವಿದೆ ಗೌರಿ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಫಾರಂಹೌಸ್‍ನಲ್ಲಿ ಸಾಕಲು ಬಾತುಕೋಳಿ ಖರೀದಿಸ ಲೆಂದು ಜೂ.29ರಂದು ಸಹೋದರಿ ನೀಲಾಂಬಿಕ ಜತೆ ಗೂಡಿ ನಾನು ಹರಿಹರಪುರ ಗ್ರಾಮಕ್ಕೆ ಹೋಗಿದ್ದೆ. ಆಗ ರಸ್ತೆಬದಿ ಹಳೆವಿಗ್ರಹ ಬಿದ್ದಿರುವುದನ್ನು ಕಂಡೆ. ಸಮೀಪ ದಲ್ಲೇ ಜೆಸಿಬಿ ಕಾಮಗಾರಿ ನಡೆಯುತ್ತಿತ್ತು. ಮಣ್ಣು ತುಂಬಿದ ಟಿಪ್ಪರ್ ವಿಗ್ರಹದ ಪಕ್ಕದಲ್ಲೇ ಸಂಚರಿಸುತ್ತಿತ್ತು. ಇದನ್ನು ಗಮನಿಸಿದ ನಾನು, ಆ ಪುರಾತನ ವಿಗ್ರಹ ವನ್ನು ಕೊಂಡೊಯ್ದು ಗ್ರಾಮದಲ್ಲಿ ಸಂರಕ್ಷಿಸಿ ಎಂದು ಸ್ಥಳದಲ್ಲಿದ್ದ ಗ್ರಾಮದ ವ್ಯಕ್ತಿಗೆ ಸಲಹೆ ನೀಡಿದೆ. ಗ್ರಾಮದಲ್ಲಿ ಯಾರಿಗೂ ಆ ಬಗ್ಗೆ ಆಸಕ್ತಿ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದರು. ಗ್ರಾಮಸ್ಥರು ಸಮ್ಮತಿಸಿದರೆ ಆ ವಿಗ್ರಹವನ್ನು ನಾನು ಕೊಂಡೊಯ್ದು ಪುರಾತತ್ವ ಇಲಾಖೆಗೆ ಒಪ್ಪಿಸುವೆ ಎಂದು ತಿಳಿಸಿದೆ. ಅದಕ್ಕೆ ಒಪ್ಪಿದ ಆ ವ್ಯಕ್ತಿ ಮತ್ತೊಬ್ಬರ ಸಹಾಯ ಪಡೆದು ಆ ವಿಗ್ರಹವನ್ನು ನನ್ನ ಜೀಪ್‍ನೊಳಗೆ ಇಟ್ಟರು. ಬಳಿಕ ಹಣ ನೀಡುವಂತೆ ನನ್ನನ್ನು ಒತ್ತಾಯಿಸಿದರು.

ಹಣ ನೀಡ ಲೊಪ್ಪದ ನಾನು, ಜೀಪ್‍ನಿಂದ ವಿಗ್ರಹ ಕೆಳಗಿಸುವಂತೆ ಹೇಳಿದೆ. ಹಣ ನೀಡಲಿಲ್ಲವೆಂಬ ಸಿಟ್ಟಿಗೆ ಆ ವ್ಯಕ್ತಿ ಮತ್ತೆ ಮೂರ್ನಾಲ್ಕು ಮಂದಿಯನ್ನು ಸ್ಥಳಕ್ಕೆ ಕರೆಸಿ, ನಾವು ಆ ವಿಗ್ರಹವನ್ನು ಕದಿಯುತ್ತಿz್ದÉೀವೆಂಬಂತೆ ಬಿಂಬಿಸಿ ವಿಡಿಯೋ ಮಾಡಿಸಿ ಮಾನಹಾನಿ ಮಾಡಿದರು ಎಂದು ಗೌರಿ ಆರೋಪಿಸಿದರು.

ನಮ್ಮ ಫಾರಂಹೌಸ್‍ಗೆ ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದೇವೆಂಬ ಸುಳ್ಳು ಸುದ್ದಿಯೂ ಪ್ರಕಟವಾಗಿದೆ. ಅಂದು ಸ್ಥಳಕ್ಕೆ ಬಂದ ಬಿಳಿಗೆರೆ ಪೊಲೀಸರಿಗೆ, ನಾವು ವಿಗ್ರಹ ಕಳವು ಮಾಡಿಲ್ಲ ಎಂಬುದನ್ನು ಮನವರಿಕೆ ಮಾಡಿ ಕೊಡಲೆತ್ನಿಸಿದೆವು. ಇದೆಲ್ಲಾ ಹಣಕ್ಕಾಗಿ ಪೀಡಿಸಿದ ವ್ಯಕ್ತಿಯ ಕಿತಾಪತಿ ಎಂದು ಹೇಳಲೆತ್ನಿಸಿದಾಗ ಪೊಲೀಸರು ನಮ್ಮನ್ನು ಬಂಧಿಸಲು ಮುಂದಾದರು. ಆಗ ಮಹಿಳಾ ಪೊಲೀಸರು ಇಲ್ಲದ್ದನ್ನು ಪ್ರಶ್ನಿಸಿದ ನಮ್ಮ ತಾಯಿ ನಾಗಲಾಂಬಿಕಾ ಅವರು, ಮೊಬೈಲ್ ಫೋನ್‍ನಲ್ಲಿ ವಿಡಿಯೊ ಮಾಡಲೆತ್ನಿಸಿದರು. ಅಷ್ಟಕ್ಕೇ ಸಿಟ್ಟಾದ ಪೊಲೀಸರು ಮೊಬೈಲ್ ಕಿತ್ತುಕೊಳ್ಳ ಲೆತ್ನಿಸಿದರು. ಇಷ್ಟರ ಹೊರತು ಬೇರೇನೂ ನಡೆದಿಲ್ಲ. ಇದೆಲ್ಲದರ ವಿಡಿಯೊ ತುಣುಕನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದೇನೆ ಎಂದು ಗೌರಿ ಸ್ಪಷ್ಟಪಡಿಸಿದರು.

ಹಾಡಹಗಲೇ ಎಲ್ಲರ ಮುಂದೆ ವಿಗ್ರಹ ಕಳವು ಮಾಡಲು ಸಾಧ್ಯವೇ? ಬಲು ಭಾರದ ವಿಗ್ರಹವನ್ನು ಜೀಪ್‍ನೊಳಗೆ ಇಡಲು ನಮ್ಮಿಂದ ಸಾಧ್ಯವೇ? ಎಂದು ಪ್ರಶ್ನಿಸಿದ ಮರಳು ಶಿಲ್ಪ ಕಲಾವಿದೆ, ವಿಗ್ರಹವನ್ನು ಪುರಾತತ್ವ ಇಲಾಖೆಗೆ ಒಪ್ಪಿಸುವುದಷ್ಟೇ ನಮ್ಮ ಉದ್ದೇಶವಾಗಿತ್ತು. ವಿಗ್ರಹವನ್ನು ದೇವಾಲಯದಿಂದ ಕಿತ್ತುಕೊಂಡು ಹೋಗಿದ್ದಾರೆಂದು ಸುಳ್ಳು ಆರೋಪ ಹೊರಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿ ವಾಸ್ತವಾಂಶ ಪರಿಶೀಲಿಸದೆ ಹಣಕ್ಕಾಗಿ ಪೀಡಿಸಿದ ವ್ಯಕ್ತಿಯ ಮಾತನ್ನೇ ನಂಬಿ ದೂರು ನೀಡಿದ್ದಾರೆ. ಸುಳ್ಳು ಆರೋಪ ದಿಂದಾಗಿ ಕಲಾವಿದೆಯಾದ ನನ್ನ ಮಾನಹಾನಿ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಘಟನೆಗೆ ಸಂಬಂಧಿಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದೇನೆ ಎಂದರು. ಗೌರಿ ಅವರ ತಾಯಿ ನಾಗಲಾಂಬಿಕಾ, ಸಹೋದರಿ ನೀಲಾಂಬಿಕಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »