ಈ ವರ್ಷವೂ ಶ್ರೀ ಚಾಮರಾಜೇಶ್ವರ ರಥೋತ್ಸವ ಇಲ್ಲ
ಚಾಮರಾಜನಗರ

ಈ ವರ್ಷವೂ ಶ್ರೀ ಚಾಮರಾಜೇಶ್ವರ ರಥೋತ್ಸವ ಇಲ್ಲ

July 11, 2021

ಚಾಮರಾಜನಗರ, ಜು.10- ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭರವಸೆ ಈಡೇರಿದ್ದರೆ, ಅಥವಾ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿರುವ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ರಥೋತ್ಸವವು ಇದೇ ತಿಂಗಳ 23ರಂದು ನಡೆಸಬೇಕಿತ್ತು. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಕೊರೊನಾ ಕಾರಣದಿಂದ ಈ ಬಾರಿಯೂ ಇತಿಹಾಸ ಪ್ರಸಿದ್ಧವಾದ ಶ್ರೀಚಾಮ ರಾಜೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತಿಲ್ಲ.

ಶ್ರೀಚಾಮರಾಜೇಶ್ವರಸ್ವಾಮಿ ರಥೋ ತ್ಸವವು ನೂರಾರು ವರ್ಷಗಳಿಂದ ಆಷಾಢ ಮಾಸದಲ್ಲಿ ಜರುಗುತ್ತಿತ್ತು. ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಜನರು ಜಾತ್ರೆ ಯಲ್ಲಿ ಭಾಗವಹಿಸುತ್ತಿದ್ದರು. 2017ರಲ್ಲಿ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ದೊಡ್ಡ ರಥಕ್ಕೆ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿದ ಕಾರಣ ರಥದ ಸ್ವಲ್ಪ ಭಾಗ ಸುಟ್ಟಿತ್ತು. ಸುಟ್ಟಿರುವ ರಥ ಎಳೆಯಬಾರದು ಎಂಬ ಕಾರಣಕ್ಕೆ 2017ರಿಂದ ರಥೋತ್ಸವ ನಡೆ ದಿಲ್ಲ. ನೂತನ ರಥ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದರಿಂದ ಈ ಬಾರಿ ಯಾದರೂ ರಥೋತ್ಸವ ನಡೆಯಲಿದೆ ಎಂದು ಭಕ್ತರು ಭಾವಿಸಿದ್ದರು. ಆದರೆ ನೂತನ ರಥ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಳ್ಳದ ಹಾಗೂ ಕೊರೊನಾ ಆರ್ಭಟದ ಹಿನ್ನೆಲೆಯಲ್ಲಿ ಈ ವರ್ಷವೂ ರಥೋತ್ಸವ ನಡೆಯುತ್ತಿಲ್ಲ. ಇದರಿಂದ ಭಕ್ತರು ನಿರಾಶೆಗೊಂಡಿದ್ದಾರೆ.
ಆಷಾಢ ಮಾಸದಲ್ಲಿ ನಡೆಯುವ ಈ ರಥೋತ್ಸವದಲ್ಲಿ ವಿಶೇಷವಾಗಿ ನವ ಜೋಡಿಗಳು ಭಾಗವಹಿಸಿ ರಥಕ್ಕೆ ಹಣ್ಣು-ಜವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಳು ನೆರವೇರಲಿ ಎಂದು ಪ್ರಾರ್ಥಿಸುತ್ತಿದ್ದುದ್ದು ವಿಶೇಷ ವಾಗಿತ್ತು. ಆದರೆ, ಸುಟ್ಟಿರುವ ರಥದಲ್ಲಿ ರಥೋ ತ್ಸವ ನಡೆದರೆ ಒಳ್ಳೆಯದಲ್ಲ ಎಂಬ ಜ್ಯೋತಿಷಿ ಗಳು ಹಾಗೂ ಪುರೋಹಿತರು ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ 2017ರಿಂದಲೂ ನಗರದಲ್ಲಿ ರಥೋತ್ಸವ ನಡೆದಿಲ್ಲ.
ನೂತನ ರಥ ನಿರ್ಮಾಣಕ್ಕೆ ಆಗ್ರಹಿಸಿ ಕನ್ನಡ ಪರ ಹೋರಾಟಗಾರರು ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆ ಯಲ್ಲಿ ಬೆಂಗಳೂರಿನಲ್ಲಿ ರಥ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜಾತ್ರೆ ವೇಳೆಗೆ ನೂತನ ರಥ ಸಿದ್ಧಗೊಳ್ಳುವುದರಿಂದ ಈ ಬಾರಿ ರಥೋತ್ಸವ ನಡೆಯಲಿದೆ ಎಂದು ಭಕ್ತರು ನಿರೀಕ್ಷೆ ಹೊಂದಿದ್ದರು. ಆದರೆ, ರಥ ನಿರ್ಮಾಣ ಕಾರ್ಯ ಶೇ. 80ರಷ್ಟು ಭಾಗ ಮಾತ್ರ ಪೂರ್ಣ ಗೊಂಡಿರುವ ಕಾರಣ ಹಾಗೂ ಕೊರೊನಾ ಆರ್ಭಟದಿಂದ ದೇವಸ್ಥಾನದ ಪ್ರವೇಶಕ್ಕೆ ನಿರ್ಬಂಧ ಹೇರಿರುವುದರಿಂದ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ರಥೋ ತ್ಸವವು ಐದನೇ ವರ್ಷವೂ ಸಹ ನಡೆಯುತ್ತಿಲ್ಲ.

Translate »