ಅರ್ಜಿ ಹಾಕಿ ಪ್ರಶಸ್ತಿ ಪಡೆಯುವ ವ್ಯವಸ್ಥೆ ಇರಬಾರದು
ಮೈಸೂರು

ಅರ್ಜಿ ಹಾಕಿ ಪ್ರಶಸ್ತಿ ಪಡೆಯುವ ವ್ಯವಸ್ಥೆ ಇರಬಾರದು

October 13, 2021

ಮೈಸೂರು,ಅ.12(ಪಿಎಂ)-ಪ್ರಶಸ್ತಿಗೆ ಅರ್ಜಿ ಹಾಕುವ ವ್ಯವಸ್ಥೆ ಬದಲು ನಿಜವಾದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ವ್ಯವಸ್ಥೆ ಇರಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಅಭಿಪ್ರಾಯಪಟ್ಟರು.

ಮೈಸೂರಿನ ಚಾಮುಂಡಿಪುರಂನ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಶ್ರೀ ಅಭಯಂ ಫೌಂಡೇಷನ್ ವತಿಯಿಂದ ಮಂಗಳವಾರ ಹಮ್ಮಿ ಕೊಂಡಿದ್ದ `ಕಲಾವಿದರ ದಸರಾ’ ಮತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕಲಾವಿದರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾ ಡಿದರು. ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವಂತಹ ವ್ಯವಸ್ಥೆ ಇರಬೇಕು. ರಾಜ್ಯೋತ್ಸವ ಪ್ರಶಸ್ತಿಗೆ ತಮ್ಮ ಹೆಸರು ಶಿಫಾರಸ್ಸು ಮಾಡುವಂತೆ ಹಲವರು ನನ್ನನ್ನು ಸಂಪರ್ಕಿಸಿದರು. ಇದು ನನಗೆ ಅತ್ಯಂತ ಮುಜುಗರ ಉಂಟು ಮಾಡಿತು ಎಂದರು.

ಜಾನಪದ ಕಲೆಗಳು ಸ್ವಾಸ್ಥ್ಯ ಸಮಾಜದ ಸಂಕೇತ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆಗಳು ಅಗಾಧವಾಗಿವೆ. ಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿ ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಕಳೆದ ಮೂರು ವರ್ಷಗಳಿಂದ ಈ ರೀತಿಯಲ್ಲಿ ಕಲಾವಿದರನ್ನು ಗುರುತಿಸಿ ಗೌರವಿಸು ತ್ತಿರುವುದು ಶ್ಲಾಘನೀಯ. ಕೋವಿಡ್ ಬಿಕ್ಕಟ್ಟು ಇಲ್ಲ ವಾದಲ್ಲಿ ಮುಂದಿನ ವರ್ಷ ಈ ಕಾರ್ಯಕ್ರಮವನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಸಲಹೆ ನೀಡಿದರಲ್ಲದೆ, ಇದಕ್ಕೆ ಅಗತ್ಯ ಸಹಕಾರ ನೀಡುವು ದಾಗಿ ಭರವಸೆ ನೀಡಿದರು. ಸನ್ಮಾನ ಸ್ವೀಕರಿಸಿದ ಮೈಸೂರಿನ ಕಂಸಾಳೆ ಕಲಾವಿದ ಕುಮಾರಸ್ವಾಮಿ ಮಾತನಾಡಿ, ಜಾನಪದ ಕಲಾವಿದರು ಇಂದು ಸಾಕಷ್ಟು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಅವರ ಸಂಕಷ್ಟ ನಿವಾರಿಸಲು ಸರ್ಕಾರ ಮುಂದಾಗಬೇಕು ಎಂದು ಕೋರಿದರು. ಇದಕ್ಕೂ ಮುನ್ನ ವಿವಿಧ ಕಲಾ ಪ್ರಕಾರ ದಲ್ಲಿ ಸಾಧನೆಗೈದ ಕಲಾವಿದರನ್ನು ಸನ್ಮಾನಿಸಲಾ ಯಿತು. ಹೆಚ್‍ಡಿ ಕೋಟೆ ತಾಲೂಕಿನ ತಂಬೂರಿ ಕಲಾವಿದ ಮಹದೇವಯ್ಯ, ಸರಗೂರು ತಾಲೂಕಿನ ಜಾನಪದ ಗಾಯಕ ಶಿವಣ್ಣ, ಕೆಆರ್ ನಗರ ತಾಲೂ ಕಿನ ಕೋಲಾಟ ಕಲಾವಿದ ನರಸಿಂಹನಾಯಕ, ಟಿ.ನರಸೀಪುರ ತಾಲೂಕಿನ ರಂಗಭೂಮಿ ಕಲಾವಿದ ಹೊನ್ನನಾಯಕ, ನಂಜನಗೂಡು ತಾಲೂಕಿನ ಸೂತ್ರದ ಗೊಂಬೆ ಕಲಾವಿದ ಶಿವಬುದ್ಧಿ ಅಲ್ಹಾರ್, ಪಿರಿಯಾ ಪಟ್ಟಣ ತಾಲೂಕಿನ ಡೊಳ್ಳು ಕುಣಿತ ಕಲಾವಿದ ನಾಗನಾಯಕ, ಹೆಚ್.ಡಿ. ಕೋಟೆ ತಾಲೂಕಿನ ಜಾನಪದ ಗಾಯಕ ಅಮ್ಮರಾಮಚಂದ್ರ ಸೇರಿದಂತೆ 30ಕ್ಕೂ ಹೆಚ್ಚು ಕಲಾವಿದರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ತಗಡೂರು ರಾಮಚಂದ್ರರಾವ್ ಉದ್ಯಾನವನ ಸ್ವಚ್ಛತಾ ಕಾರ್ಯ ಮಾಡುವ ಮಹಿಳಾ ಪೌರಕಾರ್ಮಿಕರಿಗೆ ಸೀರೆಯನ್ನು ಉಡುಗೊರೆ ನೀಡಿ ಗೌರವಿಸಲಾಯಿತು. ಸಮಾಜ ಸೇವಕ ಡಾ.ಕೆ.ರಘು ರಾಮ್ ವಾಜಪೇಯಿ, ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಮುಡಾ ಸದಸ್ಯೆ ಎನ್.ಲಕ್ಷ್ಮೀದೇವಿ, ಚಲನಚಿತ್ರ ನಿರ್ಮಾ ಪಕ ಡಾ.ಎಸ್.ವೆಂಕಟೇಶ್, ಮೈಸೂರು ಜಿಲ್ಲಾ ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಬಿ.ಪಿ.ಬೋರೇಗೌಡ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಹೆಚ್.ಕ್ಯಾತನಹಳ್ಳಿ ಪ್ರಕಾಶ್, ಫೌಂಡೇಷನ್ ಅಧ್ಯಕ್ಷ ಡಾ.ಎಂ.ಎಸ್. ಮುರಳೀಧರ ಶಾಸ್ತಾ ಮತ್ತಿತರರು ಹಾಜರಿದ್ದರು.

Translate »