ಹಣ, ಆಭರಣಕ್ಕಾಗಿ ಮಹಿಳೆಯರ ಕೊಂದು ರುಂಡ-ಮುಂಡ ಬೇರ್ಪಡಿಸುತ್ತಿದ್ದ ಸೀರಿಯಲ್ ಕಿಲ್ಲರ್ ಜೋಡಿ ಬಂಧನ
ಮಂಡ್ಯ

ಹಣ, ಆಭರಣಕ್ಕಾಗಿ ಮಹಿಳೆಯರ ಕೊಂದು ರುಂಡ-ಮುಂಡ ಬೇರ್ಪಡಿಸುತ್ತಿದ್ದ ಸೀರಿಯಲ್ ಕಿಲ್ಲರ್ ಜೋಡಿ ಬಂಧನ

August 5, 2022

ಮಂಡ್ಯ, ಆ.4-ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿ ರುಂಡ-ಮುಂಡವನ್ನು ಬೇರ್ಪ ಡಿಸಿ ನಾಲೆಗೆ ಬಿಸಾಕಿದ್ದ ಪ್ರಕರಣವನ್ನು ಭೇದಿಸಿ ರುವ ಮಂಡ್ಯ ಜಿಲ್ಲಾ ಪೊಲೀಸರು, ಸೀರಿಯಲ್ ಕಿಲ್ಲರ್ ಹಾಗೂ ಆತನ ಪ್ರೇಯಸಿಯನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಂಡವಪುರ ಹಾಗೂ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಲೆಗಳಲ್ಲಿ ಇಬ್ಬರು ಮಹಿಳೆಯರ ಮುಂಡ ಮಾತ್ರ ಕಳೆದ ಎರಡು ತಿಂಗಳ ಹಿಂದೆ ಪತ್ತೆಯಾಗಿತ್ತು. ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಇಂಗ್ಲಿಷ್ ಪತ್ತೇದಾರಿ ಸಿನೆಮಾ `ಶೆರ್ಲಾಕ್ಸ್ ಹೋಮ್ಸ್’ನ ಹೀರೋನಂತೆ ಹಲವಾರು ಕ್ಲಿಷ್ಟಕರ ಪ್ರಕರಣ ಗಳನ್ನು ಪತ್ತೆ ಹಚ್ಚಿರುವ ಶ್ರೀರಂಗಪಟ್ಟಣ ಉಪ ವಿಭಾಗದ ಡಿವೈಎಸ್‍ಪಿ ಸಂದೇಶ್ ಕುಮಾರ್ ಅವರಿಗೆ ಈ ಪ್ರಕರಣದ ತನಿಖೆಯ ಜವಾಬ್ದಾರಿ ಯನ್ನು ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಮತ್ತು ಮಂಡ್ಯ ಜಿಲ್ಲಾ ಎಸ್ಪಿ ಎನ್. ಯತೀಶ್ ವಹಿಸಿದ್ದರು. ಉಪ ವಿಭಾಗದ ಪೊಲೀಸರು ಮಾತ್ರವಲ್ಲದೇ ಜಿಲ್ಲೆಯ ಯಾವುದೇ ಠಾಣೆಯ ಸಮರ್ಥ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ತನಿಖೆಗೆ ಬಳಸಿಕೊಳ್ಳುವಂತೆಯೂ
ಅವರಿಗೆ ಸೂಚಿಸಲಾಗಿತ್ತು. ಡಿವೈಎಸ್‍ಪಿ ಸಂದೇಶ ಕುಮಾರ್ ಅವರು, 7 ಪೊಲೀಸ್ ಇನ್ಸ್‍ಪೆಕ್ಟರ್, 7 ಸಬ್ ಇನ್ಸ್‍ಪೆಕ್ಟರ್ ಹಾಗೂ 30 ಸಮರ್ಥ ಸಿಬ್ಬಂದಿಗಳನ್ನು ಕಲೆ ಹಾಕಿ 9 ತಂಡಗಳನ್ನಾಗಿ ವಿಂಗಡಿಸಿ, ಅವರೊಂದಿಗೆ ತನಿಖೆಗೆ ಇಳಿದರು. ಒಂದು ತಂಡ ತಾಂತ್ರಿಕ ಮಾಹಿತಿ ಕಲೆ ಹಾಕಿದರೆ, ಮತ್ತೊಂದು ತಂಡ ಸಿಸಿ ಕ್ಯಾಮರಾ ದೃಶ್ಯಾವಳಿ ಗಳನ್ನು ಕಲೆ ಹಾಕುವ ಕಾರ್ಯದಲ್ಲಿ ತೊಡಗಿತು. ಇಡೀ ರಾಜ್ಯಾದ್ಯಂತ ನಾಪತ್ತೆಯಾಗಿರುವ ಮಹಿಳೆಯರ ಪ್ರಕರಣಗಳ ಪರಿಶೀಲನೆಗೆ ಒಂದು ತಂಡ ಇಳಿದರೆ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುವ ಕಾಯಕದಲ್ಲಿ ಇನ್ನೊಂದು ತಂಡ ನಿರತವಾಯಿತು.

ಈ ತಂಡಗಳು 17ಕ್ಕೂ ಹೆಚ್ಚು ಟವರ್‍ಗಳಲ್ಲಿನ ಸುಮಾರು 1 ಲಕ್ಷಕ್ಕೂ ಅಧಿಕ ಮೊಬೈಲ್ ಕರೆಗಳನ್ನು ಪರಿಶೀಲಿಸಿತು. ಮಹಿಳೆಯರ ಮುಂಡ ದೊರೆತಿದ್ದ ಸ್ಥಳದ ಸಂಪರ್ಕ ರಸ್ತೆಗಳಲ್ಲಿನ 22ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಫುಟೇಜ್‍ಗಳನ್ನು ಸಂಗ್ರಹಿಸಿ ಕೂಲಂಕುಷ ವಾಗಿ ಪರಿಶೀಲಿಸಿತು. 1116ಕ್ಕೂ ಹೆಚ್ಚು ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಪರಿಶೀಲನೆ ನಡೆಸಿತು. ಆದರೆ ಇದ್ಯಾವುದರಿಂದಲೂ ಫಲ ದೊರೆಯದಿದ್ದಾಗ ಪೊಲೀಸರು ಮೃತಪಟ್ಟಿರುವ ಮಹಿಳೆಯರ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದರು. ಸಂದೇಶ್ ಕುಮಾರ್ ಅವರು ಮೃತದೇಹಗಳ ಚಿತ್ರ ಒಳಗೊಂಡ 10 ಸಾವಿರ ಕರಪತ್ರಗಳನ್ನು ಮುದ್ರಿಸಿ ತಮ್ಮ ಸಿಬ್ಬಂದಿ ಮೂಲಕ ಹಲವಾರು ಹಳ್ಳಿಗಳಲ್ಲಿ ಹಂಚಿ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದರು.

ಸುಳಿವು ನೀಡಿದ ಅದೊಂದು ನಾಪತ್ತೆ ಕೇಸ್: ಮಹಿಳೆಯರ ಮುಂಡಗಳು ದೊರೆತದ್ದು ಜೂನ್ 7ರಂದು. ಸಂದೇಶ್ ಕುಮಾರ್ ನೇತೃತ್ವದ ತಂಡ ಚಿಕ್ಕ ಸುಳಿವೂ ದೊರೆಯದೇ ಪರದಾಡುತ್ತಿದ್ದ ವೇಳೆ ಸರಿಯಾಗಿ 1 ತಿಂಗಳಲ್ಲಿ ಅಂದರೆ ಜುಲೈ 7ರಂದು ಚಾಮರಾಜನಗರ ಟೌನ್ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆ ಪ್ರಕರಣವೊಂದು ದಾಖಲಾಯಿತು. ಅಲ್ಲಿನ ಮಹಿಳೆ 30 ವರ್ಷದ ಸಿದ್ದಮ್ಮ ಅಲಿಯಾಸ್ ಪುಟ್ಟಿ ಅಲಿಯಾಸ್ ಗೀತಾ, ಜೂ.5ರಂದು ಮನೆ ಬಿಟ್ಟು ಹೋದವರು ಇನ್ನೂ ವಾಪಸ್ಸಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಪಾಂಡವಪುರ ಬಳಿ ದೊರೆತಿದ್ದ ಮಹಿಳೆಯ ಮುಂಡವನ್ನು ಪರಿಶೀಲಿಸಿದ್ದ ಪೊಲೀಸರು, ಮೃತ ಮಹಿಳೆಗೆ 30 ರಿಂದ 35 ವರ್ಷ ಇರಬಹುದು ಎಂದು ಅಂದಾಜಿಸಿದ್ದರು. ಅಲ್ಲದೇ ಆ ಮುಂಡದಲ್ಲಿ ದೊರೆತ ಬಟ್ಟೆಯೂ ಕೂಡ ವಾರಸುದಾರರ ಮಾಹಿತಿಗೆ ಸರಿ ಹೊಂದುತ್ತಿತ್ತು ದೊರೆತಂತಹ ಸಣ್ಣ ಸುಳಿವಿನ ಜಾಡು ಹಿಡಿದ ಸಂದೇಶ್ ಕುಮಾರ್ ತಂಡ, ನಾಪತ್ತೆಯಾಗಿದ್ದ ಮಹಿಳೆಯ ಮೊಬೈಲ್ ನಂಬರ್ 8867669864ನ ಟವರ್ ಲೊಕೇಷನ್‍ಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಅದು ಮೈಸೂರಿನ ಮೇಟಗಳ್ಳಿಯಲ್ಲಿ ಜೂ.6ರಂದು ಆಫ್ ಆಗಿರುವುದು ಗೊತ್ತಾಯಿತು. ಈ ಸುಳಿವಿನ ಆಧಾರದ ಮೇರೆಗೆ ಮೇಟಗಳ್ಳಿ ಟವರ್ ಮತ್ತು ಜೂ.7ರಂದು ಮಹಿಳೆಯರ ಮುಂಡಗಳು ದೊರೆತ ಸ್ಥಳದ ಸುತ್ತಮುತ್ತಲಿನ ಟವರ್‍ಗಳಲ್ಲಿ ಕಾರ್ಯ ನಿರ್ವಹಿಸಿದ್ದ ಮೊಬೈಲ್‍ಗಳ ಮಾಹಿತಿಯನ್ನು ಕಲೆ ಹಾಕಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಒಂದು ಮೊಬೈಲ್ ಸಂಖ್ಯೆ ಮೇಲೆ ಬಲವಾದ ಅನುಮಾನ ವ್ಯಕ್ತವಾಯಿತು. ಆದರೆ ಅದೂ ಕೂಡ ಸ್ವಿಚ್ ಆಫ್ ಆಗಿತ್ತು. ಸ್ವಿಚ್ ಆಫ್ ಆಗಿದ್ದ ಸಿಮ್ ಯಾವ ಮೊಬೈಲ್‍ನಿಂದ ಕಾರ್ಯ ನಿರ್ವಹಿಸಿದೆ ಎಂಬುದರ ಬಗ್ಗೆ ತಾಂತ್ರಿಕ ತಂಡ ಪರಿಶೀಲಿಸಿ ಸದರಿ ಮೊಬೈಲ್‍ನಲ್ಲಿ 9 ಸಿಮ್‍ಗಳು ಕಾರ್ಯ ನಿರ್ವಹಿಸಿದ್ದವು ಎಂಬುದನ್ನು ಪತ್ತೆ ಹಚ್ಚಿತು. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರ ತಂಡ ಸದರಿ ಮೊಬೈಲ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಮ್ ಯಾವ ಟವರ್‍ನಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ತುಮಕೂರಿನ ಡಾಬಸ್‍ಪೇಟೆಗೆ ತೆರಳಿದಾಗ ಅಲ್ಲಿ ಸಿಕ್ಕಿಬಿದ್ದವರೇ ಸಿದ್ದಲಿಂಗಪ್ಪ ಮತ್ತು ಚಂದ್ರಕಲಾ ಎಂಬುವರು.

ಸಿದ್ದಲಿಂಗಪ್ಪ ವಿರುದ್ಧ ಹಲವಾರು ಸರಗಳವು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದವು ಎಂಬುದೂ ಕೂಡ ಬೆಳಕಿಗೆ ಬಂತು. ಈತ ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕೋಡಿಹಳ್ಳಿ ಕಾಲೋನಿಯವನಾಗಿದ್ದು, ಆತನ ಜೊತೆಗಿದ್ದ ಚಂದ್ರಕಲಾ ಪಾಂಡವಪುರ ತಾಲೂಕು ಹರವು ಗ್ರಾಮದವಳು. ಇವರಿಬ್ಬರೂ ಪ್ರೇಮಿಗಳಾಗಿದ್ದು, ಪಾಂಡವಪುರ ಮತ್ತು ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರ ಮುಂಡಗಳು ದೊರೆತ ದಿನದಲ್ಲಿ ಅವರಿಬ್ಬರೂ ಈ ಭಾಗದಲ್ಲೇ ಇದ್ದರು ಎಂಬುದೂ ಕೂಡ ತಾಂತ್ರಿಕ ತಂಡದ ಸಹಕಾರದೊಂದಿಗೆ ಪತ್ತೆ ಹಚ್ಚಲಾಗಿತ್ತು. ಅವರಿಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರು ಮೂವರು ಮಹಿಳೆಯರನ್ನು ಹತ್ಯೆ ಮಾಡಿ ಅವರಿಂದ ಚಿನ್ನಾಭರಣ ದೋಚಿ ಮೃತದೇಹ ರುಂಡ-ಮುಂಡ ಬೇರ್ಪಡಿಸಿ ಹರಿಯುವ ನೀರಿಗೆ ಬಿಸಾಕಿದ್ದರು ಎಂಬ ಬೆಚ್ಚಿ ಬೀಳುವಂತಹ ಸಂಗತಿ ಹೊರ ಬಿತ್ತು. ಅಲ್ಲದೇ ಇನ್ನೂ ಐವರು ಮಹಿಳೆಯರನ್ನು ಹತ್ಯೆ ಮಾಡಲು ಪಟ್ಟಿ ಮಾಡಿಕೊಂಡಿದ್ದರು ಎಂಬುದೂ ತಿಳಿಯಿತು.

ಚಂದ್ರಕಲಾ ಬೆಂಗಳೂರಿನ ಗಾರ್ಮೆಂಟ್ಸ್‍ನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದರು. ಸಿದ್ದಲಿಂಗಪ್ಪ ಸರಗಳ್ಳನಾಗಿದ್ದ. ಇವರಿಬ್ಬರೂ ಪರಿಚಯವಾಗಿ, ಪ್ರೇಮಿಗಳಾಗಿ ಪರಿವರ್ತನೆಯಾದ ನಂತರ ಸಿದ್ದಲಿಂಗಪ್ಪ ಹಾಕಿದ ಐನಾತಿ ಐಡಿಯಾ ಗಾರ್ಮೆಂಟ್ಸ್‍ನಲ್ಲಿ ಚಂದ್ರಕಲಾಗೆ ಪರಿಚಯವಿರುವ ಮಹಿಳೆಯರಿಗೆ ಗಾರ್ಮೆಂಟ್ಸ್ ಹಾಗೂ ಹೋಂ ನರ್ಸಿಂಗ್ ಕೆಲಸ ಕೊಡಿಸುವುದಾಗಿ ನಂಬಿಸಿ, ಕರೆಸಿಕೊಂಡು ಅವರ ಹತ್ಯೆ ಮಾಡಿ, ಚಿನ್ನಾಭರಣ ದೋಚುವುದೇ ಆಗಿತ್ತು. ಆತನ ಐಡಿಯಾಗೆ ಚಂದ್ರಕಲಾ ಕೂಡ ಒಪ್ಪಿದ್ದಳು. ಇವರಿಬ್ಬರೂ ಮೈಸೂರಿನ ಮೇಟಗಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಇದ್ದುಕೊಂಡು ಜೂ.5ರಂದು ಚಂದ್ರಕಲಾ ತನಗೆ ಪರಿಚಯವಿದ್ದ ಚಾಮರಾಜನಗರದ ಸಿದ್ದಮ್ಮಳನ್ನು ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪಾರ್ವತಿ ಎಂಬಾಕೆಯನ್ನು ಮೈಸೂರಿಗೆ ಕರೆಸಿಕೊಂಡಿದ್ದಾಳೆ. ಒಂದು ದಿನ ಪೂರ್ತಿ ಸುತ್ತಾಡಿಕೊಂಡಿದ್ದು, ಮರುದಿನ ರಾತ್ರಿ ಅವರಿಬ್ಬರನ್ನು ಉಸಿರುಗಟ್ಟಿಸಿ ಕೊಂದ ನಂತರ ರುಂಡ-ಮುಂಡ ಬೇರ್ಪಡಿಸಿ ಚೀಲದಲ್ಲಿ ತುಂಬಿಕೊಂಡು ಬೈಕ್‍ನಲ್ಲಿ ಸಾಗಿಸಿ ಒಂದು ಮುಂಡವನ್ನು ಪಾಂಡವಪುರ ಬಳಿ, ಹಾಗೂ ಮತ್ತೊಂದು ಮುಂಡವನ್ನು ಅರಕೆರೆ ಬಳಿ ಬಿಸಾಡಿ ಹೋಗಿದ್ದಾರೆ. ನಂತರ ಬೆಂಗಳೂರಿನ ಆಡುಗೋಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಲ್ಲಿನ ಕುಮುದಾ ಎಂಬಾಕೆಯನ್ನೂ ಇದೇ ರೀತಿ ಹತ್ಯೆ ಮಾಡಿ ಚಿನ್ನಾಭರಣ ದೋಚಿದ ನಂತರ ಡಾಬಸ್ ಪೇಟೆಗೆ ಹೋಗಿ ಬಾಡಿಗೆ ಮನೆಯಲ್ಲಿ ನೆಲೆಸಿ ಮತ್ತೆ ಐವರು ಮಹಿಳೆಯರ ಪಟ್ಟಿ ಮಾಡಿಕೊಂಡಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಡಿವೈಎಸ್‍ಪಿ ಸಂದೇಶ್ ಕುಮಾರ್ ನೇತೃತ್ವದ ತಂಡಕ್ಕೆ ಇವರು ಸಿಕ್ಕಿಬೀಳದಿದ್ದಲ್ಲಿ ಇನ್ನೂ ಐವರು ಅಮಾಯಕ ಮಹಿಳೆಯರು ಬಲಿಯಾಗುವ ಅಪಾಯವಿತ್ತು. ಇಂದು ಮಂಡ್ಯ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಭಯಾನಕ ವಿಚಾರ ವಿವರಿಸಿದರಲ್ಲದೇ ಸವಾಲಾಗಿದ್ದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಡಿವೈಎಸ್ಪಿ ಸಂದೇಶ್ ಕುಮಾರ್ ನೇತೃತ್ವದ ತಂಡವನ್ನು ಶ್ಲಾಘಿಸಿ 1 ಲಕ್ಷ ರೂ. ಬಹುಮಾನ ಘೋಷಿಸಿದರು. ಸುದ್ದಿಗೋಷ್ಠಿ ಯಲ್ಲಿ ಮಂಡ್ಯ ಜಿಲ್ಲಾ ಎಸ್ಪಿ ಯತೀಶ್, ಅಡಿಷನಲ್ ಎಸ್ಪಿ ವೇಣುಗೋಪಾಲ್, ತನಿಖಾ ತಂಡದ ಮುಖ್ಯಸ್ಥರಾದ ಡಿವೈಎಸ್‍ಪಿ ಸಂದೇಶ್ ಕುಮಾರ್ ಉಪಸ್ಥಿತರಿದ್ದರು.

Translate »