ಮಂಡ್ಯ ಜಿಲ್ಲೆಯಲ್ಲಿ ಕೊಂಚ ತಗ್ಗಿದ ವರುಣನ ಆರ್ಭಟ
ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ಕೊಂಚ ತಗ್ಗಿದ ವರುಣನ ಆರ್ಭಟ

August 6, 2022

ಮಂಡ್ಯ,ಆ.5- ಕಳೆದ ಒಂದು ವಾರದಿಂದ ಅಬ್ಬರಿಸುತ್ತಿದ್ದ ವರುಣನ ಆರ್ಭಟ ನಿನ್ನೆ ಸಂಜೆಯಿಂದ ಕೊಂಚ ತಗ್ಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಜನ ನೆಮ್ಮದಿಯಿಂದ ವರ ಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಕಳೆದ ಹಲವು ದಿನಗಳಿಂದ ಕೇವಲ ರಾತ್ರಿ ಸಂದರ್ಭ ದಲ್ಲಿ ಮಾತ್ರ ಅಬ್ಬರಿಸುತ್ತಿದ್ದ ಮಳೆ ನಿನ್ನೆ ಗುರುವಾರ ಬೆಳಿಗ್ಗೆ ಹತ್ತರಿಂದ ಸಂಜೆ 5ರ ವರೆಗೆ ನಿರಂತರವಾಗಿ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಆದರೆ ನಿನ್ನೆ ಸಂಜೆಯಿಂದ ಇಂದು ರಾತ್ರಿಯವರೆಗೆ ತುಂತುರು ಮಳೆ ಬೀಳುತ್ತಿದೆ.

ಜಿಲ್ಲೆಯಲ್ಲಿ ನಿರಂತರ ಮಳೆಗೆ ಕೆರೆ ಕೋಡಿ ಗಳು ಒಡೆದು ರಸ್ತೆಗಳು ಜಲಾವೃತ್ತವಾದರೆ, ಕೆಲವೆಡೆ ರಸ್ತೆಗಳೇ ಬಿರುಕು ಬಿಟ್ಟಿದ್ದವು. ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಜಲಾವೃತ ವಾದರೆ ಮಂಡ್ಯದ ಬೀಡಿ ಕಾಲೋನಿಯ 250 ಮನೆಗಳು ಜಲಮಯವಾಗಿದ್ದವು.

ಹೆದ್ದಾರಿ ಸಂಚಾರ ಮುಕ್ತ: ಕಳೆದ ಮೂರು ದಿನಗಳಿಂದ ಭಾರೀ ಮಳೆಯಿಂದ ಮಂಡ್ಯದ ಬೂದನೂರು ಬಳಿ ಕೆರೆ ಕೋಡಿ ಒಡೆದು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಮಯವಾಗಿತ್ತು. ಇದರಿಂದ ಮೈಸೂರು, ಮಂಡ್ಯದಿಂದ ಬೆಂಗಳೂರು ತಲುಪುವವರಿಗೆ ಕೆ.ಎಂ.ದೊಡ್ಡಿ ರಸ್ತೆಯನ್ನು ಬದಲಿ ಮಾರ್ಗವಾಗಿ ಕಲ್ಪಿಸಲಾಗಿತ್ತು. ಕೆ.ಎಂ. ದೊಡ್ಡಿ ರಸ್ತೆ ಕಿರಿದಾಗಿದ್ದರಿಂದ ಸಂಚಾರಕ್ಕೂ ಸಾಹಸ ಪಡಬೇಕಿತ್ತು.

ಮದ್ದೂರು ಬಳಿಯೂ ಮದ್ದೂರಮ್ಮನ ಕೆರೆ ಒಡೆದು ಕೊಲ್ಲಿ ವೃತ್ತದಲ್ಲಿ ಹೆದ್ದಾರಿ ಜಲಾ ವೃತ್ತವಾದ ಪರಿಣಾಮ ಜನರು ಹೈರಾಣಾ ಗಿದ್ದರು. ಇದರಿಂದ ಮಂಡ್ಯದಿಂದ ಬೆಂಗ ಳೂರು ತಲುಪುವವರು ಕೆ.ಎಂ.ದೊಡ್ಡಿ, ಹಲಗೂರು, ಕನಕಪುರ ಮಾರ್ಗದಲ್ಲಿ ಬೆಂಗ ಳೂರು ಹಾಗೂ ಮೈಸೂರಿನವರು ಮಳವಳ್ಳಿ, ಹಲಗೂರು, ಕನಕಪುರ ಮಾರ್ಗದಿಂದ ಬೆಂಗಳೂರು ತಲುಪುವಂತಾಗಿತ್ತು. ಇದೀಗ ಬೂದನೂರು ಬಳಿ ಹಾಗೂ ಕೊಲ್ಲಿ ವೃತ್ತದ ಬಳಿ ಕೆರೆ ಕೋಡಿ ಸಿದ್ಧಪಡಿಸಿದ ಪರಿಣಾಮ ನಿನ್ನೆಯಿಂದ ಬೆಂಗಳೂರು- ಮೈಸೂರು ಹೆದ್ದಾರಿ ಸಂಚಾರ ಮುಕ್ತವಾಗಿದೆ.

ರೈಲ್ವೆ ಸಂಚಾರಕ್ಕೂ ಅಡ್ಡಿ ಇಲ್ಲ: ಮೊನ್ನೆ ಮದ್ದೂರಿನ ಶಿವಪುರ ಬಳಿ ಭಾರೀ ಮಳೆಗೆ ರೈಲ್ವೆ ಹಳಿ ಬಿರುಕು ಬಿಟ್ಟು ಕೆಲ ರೈಲುಗಳ ಸಂಚಾರ ವ್ಯತ್ಯಯವಾಗಿತ್ತು. ನಿನ್ನೆಯೇ ಬೆಂಗಳೂರು- ಮೈಸೂರು ರೈಲ್ವೆ ಮಾರ್ಗ ರೆಟಡಿಯಾ ಗಿದ್ದು, ರೈಲುಗಳು ಎಂದಿನಂತೆ ಸಂಚರಿಸುತ್ತಿವೆ.

ಗೋಡೆ ಕುಸಿತ: ನಿನ್ನೆ ಬೆಳಿಗ್ಗೆಯಿಂದ ಸಂಜೆ ಯವರೆಗೆ ಸುರಿದ ಭಾರೀ ಮಳೆಗೆ ಮಂಡ್ಯ ತಾಲೂಕಿನ ಬಸರಾಳು ಬಳಿಯ ಕೆಂಚನ ಹಳ್ಳಿಯಲ್ಲಿ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದೆ. ಸಿದ್ದೇಗೌಡ ಎಂಬುವ ವರಿಗೆ ಸೇರಿದ ಮನೆ ಸಂಪೂರ್ಣ ಕುಸಿದ ಪರಿಣಾಮ ಅಧಿಕಾರಿಗಳು ಭೇಟಿ ನೀಡಿ, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.

ಬೋರ್ಗರೆಯುತ್ತಿರುವ ನದಿ, ಕೆರೆಗಳು: ಭಾರೀ ಮಳೆಗೆ ಮಂಡ್ಯ ಜಿಲ್ಲೆಯ ಬಹುತೇಕ ಕೆರೆ, ನದಿಗಳು ಬೋರ್ಗರೆಯುತ್ತಿವೆ. ಕೆ.ಆರ್.ಎಸ್. ಅಣೆಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ಹರಿಯುತ್ತಿದ್ದು, ನೀರು ಬಿಡ ಲಾಗಿದೆ. ಬಲಮುರಿ, ರಂಗನತಿಟ್ಟು, ನಿಮಿ ಷಾಂಬ ಬಳಿ ಪ್ರವಾಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ನೀರಿನ ವೈಭವ ವೀಕ್ಷಿಸಲು ಜನ ಮುಗಿ ಬೀಳುತ್ತಿದ್ದಾರೆ. ಇದರ ಜೊತೆಗೆ ಮಳ ವಳ್ಳಿಯ ಮುತ್ತತ್ತಿ, ಗಾಣಾಳು, ಗಗನಚುಕ್ಕಿ ಹಾಗೂ ಪಕ್ಕದ ಭರಚುಕ್ಕಿ ಸಹ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರು ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ನಿರಾಶ್ರಿತ ಕುಟುಂಬಗಳಿಗೆ ತಲಾ 10 ಸಾವಿರ ನೆರವುÀ: ಮಳೆಯಿಂದ ಹಾನಿ ಗೊಳಗಾದ ಒಂದೂವರೆ ಸಾವಿರ ಬೀಡಿ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ದಿಂದ ತಲಾ 10 ಸಾವಿರ ರೂ. ನೆರವು ನೀಡಿದ್ದು, ಶಾಸಕ ಎಂ.ಶ್ರೀನಿವಾಸ್ ಫಲಾನುಭವಿಗಳಿಗೆ ವಿತರಿಸಿದರು.

ನಂತರ ಮಾತನಾಡಿದ ಅವರು, ಬೀಡಿ ಕಾಲೋನಿಯಲ್ಲೇ ಒಂದೂವರೆ ಸಾವಿರ ಮನೆಗಳು, ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು 300 ಮನೆಗಳು ಹಾನಿಯಾಗಿವೆ. ಮಳೆಯಿಂದಾಗಿ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ, ಭಾಗಶಃ ಹಾನಿಯಾಗಿರುವ ಮನೆಗಳಿಗೆ 3 ಲಕ್ಷ, ಅಲ್ಪ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ಪರಿಹಾರವನ್ನು ಸರ್ಕಾರ ನೀಡುತ್ತಿದೆ ಎಂದು ಹೇಳಿದರು.

ಬೀಡಿ ಕಾರ್ಮಿಕರ ಕಾಲೋನಿಗೆ ಶಾಶ್ವತ ಪರಿಹಾರ ಹುಡುಕುವ ನಿಟ್ಟಿನಲ್ಲಿ ಅಂದಾಜು ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸ ಲಾಗಿದೆ. ಈಗಾಗಲೇ ಅದು ಡಿಪಿಆರ್ ಆಗಿ, ಗುತ್ತಿಗೆ ನೀಡಲಾಗಿದೆ. ಹೌಸಿಂಗ್ ಬೋರ್ಡ್ ಕಾಲೋನಿ, ವಿವೇಕಾನಂದ ಬಡಾವಣೆಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರ ಬಿಡುಗಡೆ ಮಾಡಿರುವ ಹಣ ಫಲಾನುಭವಿಗಳ ಖಾತೆಗೆ ಆರ್‍ಟಿಜಿಎಸ್ ಮೂಲಕ ತಲುಪಲಿದೆ. ಇಂದು ಅನೇಕ ಮಂದಿಗೆ ಚೆಕ್ ಮೂಲಕ ಸಾಂಕೇತಿಕವಾಗಿ ನೀಡಲಾಗಿದೆ. ಕೆಲವರ ಖಾತೆಗೆ ಜಮಾ ಆಗಲಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ನಗರಸಭಾಧ್ಯಕ್ಷ ಎಚ್.ಎಸ್.ಮಂಜು, ತಹಸೀಲ್ದಾರ್ ಕುಂಞಅಹಮದ್ ಮಾತ ನಾಡಿ, ಕಾಣಿಕಾ ರೈತ ಉತ್ಪಾದಕರ ಕಂಪನಿ ನಿರ್ದೇಶಕ ಎಸ್.ಎನ್.ಮಹೇಶ್, ಮುಖಂ ಡರಾದ ಮಂಜುನಾಥ್, ಆನಂದ್, ಶಿವರಾಮು, ವಿನೋದ್, ರವಿ, ಕುಮಾರ್, ಅಪ್ಪಾಜಿ, ಶ್ರೀನಿವಾಸ್ ಇತರರಿದ್ದರು.

Translate »