ಕೊಡಗಲ್ಲಿ ಭಾರೀ ಮಳೆಗೆ ಮುಳುಗಿದ ತ್ರಿವೇಣಿ ಸಂಗಮ
ಕೊಡಗು

ಕೊಡಗಲ್ಲಿ ಭಾರೀ ಮಳೆಗೆ ಮುಳುಗಿದ ತ್ರಿವೇಣಿ ಸಂಗಮ

August 6, 2022

ಮಡಿಕೇರಿ,ಆ.5- ಕೊಡಗು ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತಿದೆ. ಭಾರೀ ಗಾತ್ರದ ಮರ ಗಳು ಧರೆಗುರುಳುತ್ತಿದ್ದರೆ, ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಜಿಲ್ಲೆ ಭಾಗಶಃ ಜಲಾವೃತ ಗೊಂಡಂತೆ ಕಂಡುಬರುತ್ತಿದೆ. ಶನಿವಾರ ಬೆಳಗ್ಗೆ 8.30ರವರೆಗೆ `ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಅವಧಿ ಯಲ್ಲಿ ಗಾಳಿ ಸಹಿತ 200 ಮಿ.ಮೀ.ಗೂ ಅಧಿಕ ಮಳೆ ಸುರಿಯಲಿದೆ ಎಂದು ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸಂಗಮ ಮುಳುಗಡೆ: ಬ್ರಹ್ಮಗಿರಿ ಬೆಟ್ಟ ಶ್ರೇಣಿ, ತಲಕಾವೇರಿ, ಕೋರಂಗಾಲ, ಚೇರಂ ಗಾಲ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಸಂಗಮದಲ್ಲಿ ನೀರಿನ ಮಟ್ಟ ತೀವ್ರ ಏರಿಕೆಯಾಗಿದ್ದು, ನಾಗನಕಟ್ಟೆ ಮುಳುಗಡೆಯಾಗಿ ಸಂಗಮಕ್ಕೆ ತೆರಳುವ ಮೆಟ್ಟಿಲುಗಳು ಕೂಡ ನೀರಿನಿಂದ ಆವೃತ್ತ ವಾಗಿದೆ. ಪ್ರವಾಹ ಪರಿಸ್ಥಿತಿಯ ಕಾರಣ ಭಾಗ ಮಂಡಲ-ಅಯ್ಯಂಗೇರಿ ರಸ್ತೆ ಮೇಲೆ 5 ಅಡಿ ನೀರು ಹರಿಯುತ್ತಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಭಾಗಮಂಡಲ-ಮಡಿಕೇರಿ ರಸ್ತೆ ಸಂಚಾ ರಕ್ಕೆ ಮುಕ್ತವಾಗಿದ್ದರೂ ಮಳೆ ಮುಂದುವರೆ ದಲ್ಲಿ ಮತ್ತೆ ಮುಳುಗುವ ಸಾಧ್ಯತೆಗಳಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಭಾಗಮಂಡಲ ವ್ಯಾಪ್ತಿಯಲ್ಲಿ 126 ಮಿ.ಮೀ ಮಳೆ ಸುರಿದಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಭಾರೀ ಏರಿಕೆ ಆಗಿದೆ. ಮದೆನಾಡು ವ್ಯಾಪ್ತಿ ಯಲ್ಲಿ 125.5 ಮಿ.ಮೀ ಹಾಗೂ ಗಾಳಿಬೀಡು ವ್ಯಾಪ್ತಿಯಲ್ಲಿ 124.5 ಮಿ.ಮೀ ಮಳೆಯಾಗಿ ರುವುದಾಗಿ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವ ಹಣಾ ಕೇಂದ್ರ ಮಾಹಿತಿ ನೀಡಿದೆ. ಪಯಶ್ವಿನಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಕುಟುಂಬಗಳ ಸ್ಥಳಾಂತರ: ಸರಣಿ ಭೂ ಕಂಪನದ ಗ್ರಾಮಗಳಾದ ಸಂಪಾಜೆ, ಚೆಂಬು, ಕೊಯನಾಡು, ದಬ್ಬಡ್ಕ, ಊರುಬೈಲು, ಎಂ.ಚೆಂಬು ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಭೂ ಕುಸಿತದ ಆತಂಕ ಕಾಡುತ್ತಿದೆ. ದಬ್ಬಡ್ಕ ಗ್ರಾಮದಲ್ಲಿ ಜಲ ಸ್ಫೋಟ ಸಂಭವಿಸಿ ಭೂ ಕುಸಿತದ ಆತಂಕ ಎದುರಿಸು ತ್ತಿರುವ 3 ಕುಟುಂಬಗಳನ್ನು ಸ್ಥಳಾಂತರಿಸ ಲಾಗಿದೆ. ಎಂ.ಚೆಂಬು ಸರಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಆಶ್ರಯ ಪಡೆದಿವೆ. ಕಳೆದ 2 ದಿನಗಳ ಹಿಂದೆ ದಬ್ಬಡ್ಕ ಗ್ರಾಮದ ಕೊಪ್ಪದ ಬಾಲಕೃಷ್ಣ ಎಂಬುವರ ಮನೆ ಹಿಂಭಾಗದ ರಬ್ಬರ್ ತೋಟ ಕುಸಿದು, ಮನೆ ನಾಶವಾಗಿತ್ತು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ಎನ್‍ಡಿ ಆರ್‍ಎಫ್, ಅಲ್ಲಿನ ನಿವಾಸಿಗಳನ್ನು ಸ್ಥಳಾಂತ ರಿಸುವಂತೆ ಸೂಚಿಸಿದ್ದರು.

ಸೇತುವೆ-ಮೋರಿ ದುರಸ್ತಿ: ದಬ್ಬಡ್ಕ-ಕೊಪ್ಪ, ದಬ್ಬಡ್ಕ-ಸಂಪಾಜೆ ಸಂಪರ್ಕಿಸುವ ಸೇತುವೆಗಳ ತಡೆಗೋಡೆಯ ಪಕ್ಕದ ಮಣ್ಣು ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಹಿಟಾಚಿ ಸಹಾಯದಿಂದ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ನದಿಯ ಒಳಗಿ ನಿಂದ ಬೃಹತ್ ಕಲ್ಲುಗಳ ಹೊರತೆಗೆದು ಮಣ್ಣು ಕೊಚ್ಚಿ ಹೋದ ಸ್ಥಳಕ್ಕೆ ತುಂಬಿಸಲಾಗುತ್ತಿದೆ. ನದಿ ಪಕ್ಕದಲ್ಲಿ ಭೂಮಿ ಕುಸಿಯುವ ಸಾಧ್ಯತೆ ಇರುವ ಕಡೆಗಳಲ್ಲಿ ಬಂಡೆಕಲ್ಲುಗಳನ್ನು ಜೋಡಿ ಸಲಾಗುತ್ತಿದ್ದು, ತಾತ್ಕಾಲಿಕ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಇನ್ನು ಚೆಂಬು ಮಾರ್ಪಡ್ಕ ಗ್ರಾಮ ಸಂಪರ್ಕ ಕಲ್ಪಿಸುವ ಮಾರ್ಪಡ್ಕ ಮೋರಿ ಕೊಚ್ಚಿ ಹೋಗಿದ್ದು, ಇಲ್ಲಿಯೂ ಪರ್ಯಾಯ ವ್ಯವಸ್ಥೆ ಕಾರ್ಯ ನಡೆದಿದೆ.

ಪರಿಹಾರ ವಿತರಣೆ: ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ತಹಸೀಲ್ದಾರ್ ಮಹೇಶ್, ಕಂದಾಯ ಇಲಾಖೆ ಅಧಿಕಾರಿಗಳು ಚೆಂಬು, ದಬ್ಬಡ್ಕ, ಎಂ. ಚೆಂಬು, ಊರುಬೈಲು, ಪೆರಾಜೆ ಗ್ರಾಮಗಳಿಗೆ ತೆರಳಿ ಮಳೆಹಾನಿ ಕುರಿತು ಪರಿಶೀಲನೆ ನಡೆಸಿ ದರು. ಭಾರೀ ಮಳೆಯಿಂದ ಮಾರ್ಪಡ್ಕ, ಆನೆಹಳ್ಳ, ದಬ್ಬಡ್ಕ ಸೇತುವೆಗಳು, ಭೂ ಕುಸಿತ ವಾದ ಪ್ರದೇಶಗಳನ್ನು ವೀಕ್ಷಿಸಿದರು. ಬಳಿಕ ತೀವ್ರ ಮನೆ ಹಾನಿಗೆ ಒಳಗಾದ ದಬ್ಬಡ್ಕ ನಿವಾಸಿಗಳಾದ ಕೊಪ್ಪದ ಬಾಲಕೃಷ್ಣ, ಎನ್.ಕೆ. ಉಮೇಶ್ ಅವರುಗಳಿಗೆ ಲಕ್ಷ ರೂ. ಹಾಗೂ ಪೆರಾಜೆ ಗ್ರಾಮ ನಿವಾಸಿಗಳಾದ ಉಪೇಂದ್ರ ಮತ್ತು ಪುರುಷೋತ್ತಮ್ ನಾಯರ್ ಅವರು ಗಳಿಗೆ ತಲಾ 10 ಸಾವಿರ ರೂ. ಪರಿಹಾರವನ್ನು ವಿತರಿಸಿದರು. ಚೆಂಬು ವ್ಯಾಪ್ತಿಯಲ್ಲಿ ಅತಿ ಯಾಗಿ ಮಳೆ ಸುರಿಯುತ್ತಿರುವ ಕಾರಣ ಅಲ್ಲಿರುವ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಪಶುಪಾಲನಾ ಇಲಾಖೆ ವತಿಯಿಂದ ಹಿಂಡಿ ಮಿಶ್ರಿತ ಪಶು ಆಹಾರವನ್ನು ವಿತರಿಸಲಾಗಿದೆ.

Translate »