ಇದು ಪರಿವರ್ತನೆಯ ಯುಗ: ಸಿ.ಟಿ.ರವಿ
ಮೈಸೂರು

ಇದು ಪರಿವರ್ತನೆಯ ಯುಗ: ಸಿ.ಟಿ.ರವಿ

October 16, 2020

ಮೈಸೂರು, ಅ.15(ಆರ್‍ಕೆಬಿ)-ಕಾಳಸಂತೆಯಲ್ಲಿ ಗೊಬ್ಬರ ಮಾರಾಟವಾಗುವುದನ್ನು ತಡೆದಿದ್ದು, ದಲ್ಲಾಳಿಗಳಿಂದ ರೈತರಿಗಾಗುತ್ತಿದ್ದ ಕಿರುಕುಳ ತಪ್ಪಿಸಿದ್ದು, ಪ್ರೊ.ಎಂ.ಡಿ. ನಂಜುಂಡಸ್ವಾಮಿ, ರುದ್ರಪ್ಪ, ಸುಂದರೇಷನ್ ಅವರ ಆಶಯಕ್ಕೆ ತಕ್ಕಂತೆ ಯೋಜನೆಗಳನ್ನು ಜಾರಿಗೊಳಿಸಿರುವ ನರೇಂದ್ರ ಮೋದಿ ಸರ್ಕಾರ ರೈತರ ವಿರೋಧಿ ಹೇಗಾಗುತ್ತದೆ? ಎಂದು ಪ್ರಶ್ನಿಸಿದ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಪಕ್ಷಗಳ ವಿರುದ್ಧ ಕಿಡಿಕಾರಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರವಿ, ಮೋದಿ ಅವರು ಸ್ವಾಮಿನಾಥನ್ ವರದಿ ಪ್ರಕಾರವೇ ಫಸಲ್ ಭಿಮಾ ಯೋಜನೆ ಮೂಲಕ ರೈತರಿಗೆ ವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ. `ಒಂದು ದೇಶ-ಒಂದು ಪಡಿತರ’ ಯೋಜನೆಗೆ ಚಾಲನೆ ನೀಡಿದ್ದಾರೆ. ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಿದ್ದಾರೆ. ಹೊಸ ಶಿಕ್ಷಣ ನೀತಿ ಜಾರಿಗೊ ಳಿಸಿದ್ದಾರೆ. ಆತ್ಮನಿರ್ಭರ ಯೋಜನೆ ಜಾರಿಗೊಳಿಸಿದ್ದಾರೆ. ಇದೆಲ್ಲವೂ ದೇಶದ ರೈತರು, ಜನಸಾಮಾನ್ಯರು, ಬಡ ವರು, ಕೂಲಿ ಕಾರ್ಮಿಕರ ಏಳಿಗೆಗಾಗಿ ಮಾಡಿದ್ದಾರೆ. ಪಿಂಚಣಿ, ರೈತರಿಗೆ ನೆರವು, ಸಬ್ಸಿಡಿ ನೇರವಾಗಿ ಬಡವರ ಖಾತೆಗೆ ಸೇರುವಂತೆ ಮಾಡಿದ್ದಾರೆ ಎಂದು ಹೇಳಿದರು.

ಇದು ಪರಿವರ್ತನೆಯ ಯುಗ: 1986ರ ಕಾಲದಲ್ಲಿ ಕೇಂದ್ರ ಸರ್ಕಾರ 100 ರೂ. ಬಿಡುಗಡೆ ಮಾಡಿದರೆ ಕಟ್ಟಕಡೆಯ ಮನುಷ್ಯನಿಗೆ ತಲುಪುತ್ತಿದ್ದದ್ದು ಕೇವಲ 15 ರೂ. ಮಾತ್ರ. ಹಾಗಾದರೆ ಉಳಿದ ಹಣವನ್ನು ತಿನ್ನುತ್ತಿದ್ದ ಕಳ್ಳರು ಯಾರು? ಎಂದು ಖಾರವಾಗಿ ಪ್ರಶ್ನಿಸಿದರು. ನರೇಂದ್ರ ಮೋದಿ ಅವರು ಅಂತಹ ಕಳ್ಳರಿಗೆ ಸರ್ಕಾರದ ಅನುದಾನ ತಿನ್ನಲು ಸಿಗದಂತೆ ಮಾಡಿದರು, ಅದೇ ವೇಳೆ ಫಲಾನುಭವಿಗೆ ಶೇ.100ರಷ್ಟು ಅನುದಾನ ತಲುಪುವಂತೆ ಮಾಡಿದರು.

ಅಯೋಧ್ಯೆಯ ರಾಮಮಂದಿರ 5 ದಶಕಗಳ ಹೋರಾಟದ ಫಲ. ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಇದ್ದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಸುದೀರ್ಘ ಹೋರಾಟಕ್ಕೆ ಅಂತ್ಯ ಹಾಡಿ, ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಕೊಟ್ಟಿದ್ದಾರೆ. ಇದು ಅಸ್ಮಿತೆಯ ಪ್ರತೀಕ. ಆದರೆ ನನ್ನ ಹೆಸರಲ್ಲಿ ರಾಮ ಇದೆ ಎನ್ನುತ್ತಿದ್ದವರು ರಾಮಮಂದಿರ ಕಟ್ಟಲಿಲ್ಲ. ಕೇವಲ ರಾಜಕೀಯ ಕಾರಣಕ್ಕಾಗಿ ಮಂದಿರ ಕಟ್ಟಲು ಅವಕಾಶ ನೀಡಲಿಲ್ಲ ಎಂದು ಕಿಡಿಕಾರಿದರು.

ಮಾತನಾಡುವ ನೈತಿಕತೆ ಇಲ್ಲ: ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ರವಿ, `ತಡೆಯೊಡ್ಡು, ವಿಳಂಬಿಸು, ದಾರಿ ತಪ್ಪಿಸು’. ಇದು ಕಾಂಗ್ರೆಸ್‍ನ ಅಜೆಂಡಾ. ಅದರ ನಾಯಕರು ಈವರೆಗೂ ಅದೇ ರೀತಿ ನಡೆದುಕೊಂಡು ಬಂದಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ ಪಕ್ಷದವರೇ ನಿಜವಾದ ಅಂಬೇಡ್ಕರ್ ವಿರೋಧಿಗಳು. ಆದರೆ ಬಿಜೆಪಿ ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ಮುಂದಾಗಿದೆ ಎಂದರು. ಕಾಂಗ್ರೆಸ್‍ನದ್ದು ವಂಶಪಾರಂಪರ್ಯ ಕುಟುಂಬ ಆಡಳಿತ. 1999ರಿಂದ 2020 ರವರೆಗೆ ಸೋನಿಯಾ ಗಾಂಧಿಯವರೇ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಆದರೆ ಬಿಜೆಪಿಯಲ್ಲಿ ಹತ್ತಾರು ನಾಯಕರು ಪಕ್ಷದ ಅಧ್ಯಕ್ಷರಾಗಿ ಪಕ್ಷ ಕಟ್ಟಿ ಬೆಳೆಸಿದ ದೊಡ್ಡ ಪಟ್ಟಿಯೇ ಇದೆ ಎಂದು ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ಹೆಸರುಗಳನ್ನು ಹೇಳಿದರು. ಕಾಂಗ್ರೆಸ್‍ನವರಿಗಾಗಲೀ, ದೊಡ್ಡಗೌಡರು, ಸಣ್ಣಗೌಡರು, ಮರಿಗೌಡರಿ ಗಾಗಲೀ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.

Translate »