ಈ ಬಾರಿ SSLC ಫಲಿತಾಂಶ ಕುಸಿತ
News

ಈ ಬಾರಿ SSLC ಫಲಿತಾಂಶ ಕುಸಿತ

May 9, 2023

ಬೆಂಗಳೂರು, ಮೇ 8(ಕೆಎಂಶಿ)-ಕಳೆದ ಮಾರ್ಚ್ ಹಾಗೂ ಏಪ್ರಿಲ್‍ನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ. 83.89ರಷ್ಟು ತೇರ್ಗಡೆ ಹೊಂದಿದ್ದಾರೆ. ಪದವಿ ಪೂರ್ವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ದಾಖಲೆ ಪ್ರಮಾಣದಲ್ಲಿ ತೇರ್ಗಡೆಗೊಂಡು ಇತಿಹಾಸ ನಿರ್ಮಿ ಸಿದ್ದರೆ, ಎಸ್‍ಎಸ್‍ಎಲ್‍ಸಿಯಲ್ಲಿ ವಿದ್ಯಾರ್ಥಿಗಳು ಕಳೆದ ಬಾರಿಗಿಂತ ಕಡಿಮೆ ಪ್ರಮಾಣದಲ್ಲಿ ಉತ್ತೀರ್ಣ ರಾಗಿದ್ದಾರೆ. ಕಳೆದ ಬಾರಿ 85.13ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ 1.24 ರಷ್ಟು ಇಳಿಕೆಯಾಗಿದೆ. ಬಾಲಕೀಯರೇ ಮೇಲುಗೈ ಸಾಧಿಸಿದ್ದು, ನಾಲ್ಕು ಗ್ರಾಮೀಣ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು, ಮೊದಲ ಸ್ಥಾನ ಗಳಿಸಿದ್ದಾರೆ.

ಬೆಂಗಳೂರಿನ ನ್ಯೂ ಮೆಕಾಲ ಇಂಗ್ಲೀಷ್ ಸ್ಕೂಲ್‍ನ ವಿದ್ಯಾರ್ಥಿನಿ ಭೂಮಿಕಾ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಹೈಸ್ಕೂಲ್‍ನ ವಿದ್ಯಾರ್ಥಿ ಯಶಸ್‍ಗೌಡ, ಬೆಳಗಾವಿ ಜಿಲ್ಲೆಯ ಸವದತ್ತಿಯ ಕುಮಾರೇಶ್ವರ ಶಾಲೆಯ ವಿದ್ಯಾರ್ಥಿನಿ ಅನುಪಮಾ ಶ್ರೀಶೈಲ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿ ಹಾಳದ ಆಕ್ಸ್‍ಫರ್ಡ್ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿ ಭೀಮನಗೌಡ ಹನುಮಂತಗೌಡ ಪಾಟೀಲ್ ಅವರು 100ಕ್ಕೆ 100 ಅಂಕ ಪಡೆದಿದ್ದಾರೆ. ಕಳೆದ ಸಾಲಿನಲ್ಲಿ 145 ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಅಂಕ ಗಳಿಸಿ, ಮೊದಲ ಸ್ಥಾನಕ್ಕೆ ಭಾಜನರಾಗಿದ್ದರು. ಜಿಲ್ಲಾ ವಾರು ಫಲಿತಾಂಶದಲ್ಲಿ ಚಿತ್ರದುರ್ಗ (96.8%) ಮೊದಲ ಸ್ಥಾನದಲ್ಲಿದ್ದರೆ, ಮಂಡ್ಯ (96.74%), ಹಾಸನ (96.68%) ಮೊದಲ ಮೂರು ಸ್ಥಾನದಲ್ಲಿದ್ದರೆ, ಯಾದಗಿರಿ (75.49%) ಕೊನೆಯ ಸ್ಥಾನ ಪಡೆದಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾದ 8,35,102 ವಿದ್ಯಾರ್ಥಿಗಳ ಪೈಕಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರನ್ ಆರ್., ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‍ಕುಮಾರ್‍ಸಿಂಗ್ ಹಾಗೂ ಎಸ್‍ಎಸ್‍ಎಲ್‍ಸಿ ಮಂಡಳಿ ನಿರ್ದೇಶಕ ಗೋಪಾಲ್‍ಕೃಷ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಸಕ್ತ ಸಾಲಿನ ಫಲಿತಾಂಶವನ್ನು ಪ್ರಕಟಿಸಿದರು. ಪ್ರಸಕ್ತ ಸಾಲಿನ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳ ಶೇಕಡಾವಾರು ಫಲಿತಾಂಶ ಏರಿಕೆಯಾಗಿರುವುದು ಈ ಸಾಲಿನ ವಿಶೇಷತೆಯಾಗಿದೆ. ಶೇ.70ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಗೊಂಡಿದ್ದಾರೆ. ಅದರಲ್ಲೂ 61003ರಷ್ಟು ವಿದ್ಯಾರ್ಥಿಗಳು ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದರೆ, 147634 ವಿದ್ಯಾರ್ಥಿಗಳು ಶೇಕಡ 80ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ.

5833 ಸರ್ಕಾರಿ ಶಾಲೆಗಳಲ್ಲಿನ ಒಟ್ಟು 3,33,223 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾ ಗಿದ್ದರು. ಇದರಲ್ಲಿ 2,89,035 (86.74%) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

3622 ಅನುದಾನಿತ ಶಾಲೆಗಳಿಂದ ಒಟ್ಟು 2,05,491 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ 1,75,974 (85.64%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅನುದಾನ ರಹಿತ 6038 ಶಾಲೆಗಳಿಂದ 2,48,130 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 2,25,533 (90.89%) ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು 14,983 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ದ್ವಿತೀಯ ಭಾಷೆಯಲ್ಲಿ 100ಕ್ಕೆ 100ರಷ್ಟು 9754, ತೃತೀಯ ಭಾಷೆಯಲ್ಲಿ 100ಕ್ಕೆ ನೂರರಷ್ಟು 16,170, ಗಣಿತದಲ್ಲಿ 100ಕ್ಕೆ 100ರಷ್ಟು 2132, ವಿಜ್ಞಾನದಲ್ಲಿ 100ಕ್ಕೆ 100ರಷ್ಟು 983, ಸಮಾಜ ವಿಜ್ಞಾನದಲ್ಲಿ 100ಕ್ಕೆ 100ರಷ್ಟು 8311 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಈ ಬಾರಿ 1517 ಸರ್ಕಾರಿ ಶಾಲೆಯಲ್ಲಿ ಶೇ.100ಕ್ಕೆ 100ರಷ್ಟು ಫಲಿತಾಂಶ ಬಂದಿದೆ. ಅದೇ ರೀತಿ 482 ಅನುದಾನಿತ ಶಾಲೆ, 1824 ಅನುದಾನ ರಹಿತ ಶಾಲೆಗಳಲ್ಲಿ 100ಕ್ಕೆ 100ರಷ್ಟು ಫಲಿತಾಂಶ ಬಂದಿದೆ. ಒಟ್ಟು 3823 ಶಾಲೆಗಳಲ್ಲಿ ಶೇ.100ಕ್ಕೆ 100ರಷ್ಟು ಫಲಿತಾಂಶ ದಾಖಲಾಗಿದೆ. ಉತ್ತರ ಪತ್ರಿಕೆಗಳ ಛಾಯಾಪ್ರತಿ, ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಹಾಗೂ ಪೂರಕ ಪರೀಕ್ಷೆಗೆ ನೋಂದಾಯಿಸಲು ಇಂದಿನಿಂದ ಮೇ 15 ರವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

Translate »