ಕ್ಷೇತ್ರದ ಜನತೆ ಸ್ವಚ್ಛ ರಾಜಕಾರಣಕ್ಕೆ ಈ ಬಾರಿ ಭಾಷ್ಯ ಬರೆಯಲಿದ್ದಾರೆ
ಮೈಸೂರು

ಕ್ಷೇತ್ರದ ಜನತೆ ಸ್ವಚ್ಛ ರಾಜಕಾರಣಕ್ಕೆ ಈ ಬಾರಿ ಭಾಷ್ಯ ಬರೆಯಲಿದ್ದಾರೆ

March 3, 2023

ಮೈಸೂರು, ಮಾ.2-ಚುನಾವಣೆಯಲ್ಲಿ ಜಾತಿ-ಮತ-ಸ್ವಜನ ಪಕ್ಷಪಾತಿಗಳಿಗೆ ಮಣೆ ಹಾಕಬೇಡಿ ಎಂದು ಶಾಸಕ ಎಸ್.ಎ. ರಾಮದಾಸ್ ಮನವಿ ಮಾಡಿದರು.
ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾದಲ್ಲಿ ಆಯೋಜಿಸಿದ್ದ ವಾರ್ಡ್ ನಂ 55ರ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದ ವಾರ್ಡ್ ಮಟ್ಟದ ಸಭೆ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಗೆ ಕೆಲವೇ ದಿನಗಳಿದ್ದು, ಈ ಸಂದರ್ಭದಲ್ಲಿ ಕೆಲವರು ಜಾತಿ ಹಾಗೂ ಧರ್ಮವನ್ನು ಮುನ್ನೆಲೆಗೆ ತಂದಿದ್ದಾರೆ. ಆದರೆ, ನಾನು ಅದೆಲ್ಲವನ್ನು ಮೀರಿ ಆಲೋಚಿಸುವವನು. ಹುಟ್ಟುವಾಗ ಇಂತಹವುದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿರಲಿಲ್ಲ. ಕೆಲವರು ಅವಕಾಶದ ದುರುಪಯೋಗಕ್ಕಾಗಿ ಹವಣಿಸುತ್ತಿದ್ದಾರೆ. ಅವರಿಗೆ ಮತದ ಮೂಲಕವೇ ಉತ್ತರ ನೀಡಿ ಎಂದು ಕರೆ ನೀಡಿದರು.

ಜಾತಿಯನ್ನು ಇಟ್ಟುಕೊಂಡೇ ಕೆಲವರು ನಿತ್ಯ ವ್ಯವಹಾರದಲ್ಲಿ ತೊಡಗಿದ್ದಾರೆ. ಅದ ರಂತಹ ಕೆಟ್ಟ ರಾಜಕಾರಣ ಮತ್ತೊಂದಿಲ್ಲ. ವ್ಯಕ್ತಿ ನೋಡಿ ಮತ ನೀಡಿ ಎಂದ ಅವರು, ಈ ಚುನಾವಣೆಯಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರ ಭ್ರಷ್ಟಾಚಾರ ಮುಕ್ತ ಕ್ಷೇತ್ರವೆಂಬ ಖ್ಯಾತಿ ಪಡೆಯಲಿದೆ. ಅದನ್ನು ಕ್ಷೇತ್ರದ ಮತ ದಾರರು ಸಾಕ್ಷಿ ಕರಿಸಲಿದ್ದಾರೆ. 1994ರಿಂದ ಈವರೆಗೆ ಕ್ಷೇತ್ರದಲ್ಲಿ ಹಣ, ಹೆಂಡ ಹಂಚಿಲ್ಲ. ನಿಮ್ಮೆಲ್ಲರ ವಿಶ್ವಾಸದಿಂದ ಆಯ್ಕೆಯಾಗುತ್ತಾ ಬಂದಿದ್ದೇನೆ. ನಿಮ್ಮ ಋಣ ನನ್ನ ಮೇಲಿದ್ದು, ಅದನ್ನು ಕಾಯಾ, ವಾಚಾ, ಮನಸಾ ತೀರಿಸುತ್ತಲೂ ಬಂದಿದ್ದೇನೆ. ಇದೀಗ ಮತ್ತೆ ಚುನಾವಣೆ ಎದುರಾಗಿದ್ದು, ಯಾವುದೇ ರೀತಿಯ ಖರ್ಚಿ ಲ್ಲದೆ ಈ ಚುನಾವಣೆ ನಡೆಸುವ ಮೂಲಕ ಹೊಸ ಭಾಷ್ಯ ಬರೆಯೋಣ ಎಂದರು.

ಹಣ, ಹೆಂಡ ಹಂಚಿ ಚುನಾವಣೆ ಮಾಡ ಬೇಡ ಎಂದು ನಮ್ಮ ತಾಯಿ ತಿಳಿಸಿದ್ದು, ಅವರಿಗೆ ಕೊಟ್ಟ ಮಾತಿನಂತೆ ಈವರೆಗೂ ನಡೆದುಕೊಂಡಿದ್ದೇನೆ. ತತ್ವಾದರ್ಶಗಳನ್ನು ಇಟ್ಟುಕೊಂಡು ರಾಜಕೀಯ ಬದುಕು ನಡೆಸಿದ್ದೇನೆ. ಆ ಬಗ್ಗೆ ಮೈಸೂರಿನ ಜನರಿಂದ ರಾಷ್ಟ್ರವ್ಯಾಪಿ ನಾಯಕರಿಗೂ ತಿಳಿದಿದೆ. ಅದು ಹಲವಾರು ದೊಡ್ಡ ದೊಡ್ಡ ವೇದಿಕೆಯಲ್ಲಿ ಚರ್ಚೆಯೂ ಆಗಿದೆ. ಅದು ನನ್ನೊಬ್ಬನಿಗೆ ಸಂದ ಗೌರವ ಅಲ್ಲ. ಇಡೀ ಕೃಷ್ಣರಾಜ ಕ್ಷೇತ್ರಕ್ಕೆ ಸಂದ ಗೌರವ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಲೇ ಬೇಕು ಎಂಬ ಮಹಾಸಂಕಲ್ಪದೊಂದಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಕೃಷ್ಣರಾಜ ಕ್ಷೇತ್ರದಲ್ಲಿ ಯಶಸ್ವಿಯಾಗಿ ಜಾರಿ ಮಾಡಲಾಗಿದ್ದು, ಭಾಗಶಃ ಜನರಿಗೆ ಮನೆ ನೀಡಲಾಗಿದೆ. ಬಾಕಿ 6 ಸಾವಿರ ಮಂದಿಗೆ ಇದೇ ತಿಂಗಳ 19ರಂದು ಹಕ್ಕುಪತ್ರ ನೀಡಲಾಗುವುದು ಎಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಅನ್ನಪೂರ್ಣ, ಮುಖಂಡರಾದ ರವಿ ಕಾಳಪ್ಪ, ಗೀತಾ, ಭಾಗ್ಯ, ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.

Translate »