ಆರೋಪ, ಅಪಪ್ರಚಾರ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತಾಡಿ
ಮೈಸೂರು

ಆರೋಪ, ಅಪಪ್ರಚಾರ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತಾಡಿ

March 3, 2023

ಮೈಸೂರು: ಆರೋಪ, ಅಪಪ್ರಚಾರದ ಬದಲು ನಿಮ್ಮ ಪಕ್ಷದ ಸಾಧನೆ, ಮುಂದಿನ ಯೋಜನೆಗಳ ಬಗ್ಗೆ ತಿಳಿಸಿ. ಹಣ ಕೊಟ್ಟು ಜನರನ್ನು ಕರೆಸಿ ಭಾಷಣ ಮಾಡುವ ಬದಲು, ನೀವೇ ಹಳ್ಳಿಗಳಿಗೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
ಜೆಡಿಎಸ್, ಬಿಜೆಪಿಯ `ಬಿ’ ಟೀಂ. ಅದಕ್ಕೆ ಮತ ನೀಡಬೇಡಿ ಎಂದು ಅಪಪ್ರಚಾರ ಮಾಡುತ್ತೀರಿ. ಈ ಕಾಯಿಲೆ ಸಿದ್ದರಾಮಯ್ಯನವರಿಗೆ ಮಾತ್ರ ಇದೆ ಎಂದುಕೊಂಡಿದ್ದೆ. ಈಗ ಅಮಿತ್ ಷಾಗೂ ಶುರುವಾಗಿದೆ. ನಿಮಗೆ ಜೆಡಿಎಸ್‍ನ ಚಿಂತೆ ಏಕೆ. ನೀವೇನು ಸಾಧನೆ ಮಾಡಿ ದ್ದೀರಿ, ಮುಂದೇನು ಮಾಡುತ್ತೀರಿ ಅದನ್ನು ಹೇಳಿ. ನಾನು 75 ವಿಧಾನಸಭಾ ಕ್ಷೇತ್ರದ ಪ್ರವಾಸದಲ್ಲಿ ನನ್ನ ಕಾರ್ಯಕ್ರಮ ತಿಳಿಸಿ ಬೆಂಬಲ ಕೋರಿದ್ದೇನೆ. ಯಾರ ವಿರುದ್ಧವೂ ಆರೋಪ, ಅಪಪ್ರಚಾರ ಮಾಡಲು ಹೋಗಿಲ್ಲ. ಕಾಂಗ್ರೆಸ್ ಅಥವಾ ಬಿಜೆಪಿಗೆ ಮತ ಹಾಕ ಬೇಡಿ ಎಂದು ಹೇಳಿಲ್ಲ ಎಂದು ತಿಳಿಸಿದರು.

ಬಿಜೆಪಿಯವರಂತೆ 500 ರೂ. ಕೊಟ್ಟು ಜನ ಕರೆಸ ಬೇಕು ಎಂದು ಸಿದ್ದರಾಮಯ್ಯ ಹೇಳಿರುವ ವಿಡಿಯೋ ವೈರಲ್ ಆಗಿದೆ. ಹಣ, ಊಟ ಕೊಟ್ಟು ತಾಲೂಕು ಗಳಿಂದ ಜನರನ್ನು ಕರೆತಂದು ಭಾಷಣ ಮಾಡುವುದೇಕೆ. ಎರಡು ಪಕ್ಷದವರೂ ಒಳ್ಳೆಯ ವಾಹನ ವ್ಯವಸ್ಥೆ ಮಾಡಿಕೊಂಡಿದ್ದೀರಿ. ನೀವೇ ಹಳ್ಳಿಗಳಿಗೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ. ನಾನು ಉತ್ತರ ಕರ್ನಾಟಕ ಪ್ರವಾಸ ಮಾಡಿದ್ದೇನೆ. ಅನೇಕ ಶಾಲೆಗಳಲ್ಲಿ ತಲೆಗೊಂದು ಮುಂಡಾಸು(ಪೇಟ), ಮನೆಗೊಂದು ಸಂಡಾಸು(ಶೌಚಾ ಲಯ) ಎಂದು ದಪ್ಪಕ್ಷರದಲ್ಲಿ ಬರೆದಿದ್ದಾರೆ. ನನ್ನ ಸಚಿವ ಸಂಪುಟದಲ್ಲೇ ಗ್ರಾಮಾಭಿವೃದ್ಧಿ ಸಚಿವರಾಗಿದ್ದ ಕೃಷ್ಣ ಭೈರೇಗೌಡರು ಬಹಿರ್ದೆಸೆ ಮುಕ್ತ ರಾಜ್ಯ ಎಂದು ಸರ್ಟಿಫಿಕೇಟ್ ತೋರಿಸಿದ್ದರು. ಆದರೆ ಕೋಲು, ಚೆಂಬು ಹಿಡಿದುಕೊಂಡು ರಸ್ತೆ ಬದಿ ಕುಳಿತುಕೊಳ್ಳುವ ದುಃಸ್ಥಿತಿ ಇಂದಿಗೂ ಇದೆ. ಅಲ್ಲಿನ ಮಹಿಳೆಯರು 170 ರೂ. ದಿನಗೂಲಿಗೆ ಹೋಗುತ್ತಾರೆ. ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಹಲವಾರು ಭಾಗ್ಯಗಳನ್ನು ಕೊಟ್ಟು ಉದ್ಧಾರ ಮಾಡಿದೆ ಎಂದವರು ಹೋಗಿ ನೋಡಬೇಕು ಎಂದರು. ಕಾಂಗ್ರೆಸ್‍ನವರು ಗ್ಯಾರಂಟಿ ಕಾರ್ಯಕ್ರಮ ಹೇಳುತ್ತಿದ್ದಾರೆ. ಇದಕ್ಕೆ 40 ಪರ್ಸಂಟೇಜ್ ಕಟ್ ಮಾಡಿ ಕಾರ್ಯಕ್ರಮಗಳಿಗೆ ಹಣ ಹೊಂದಿಸುತ್ತೇವೆ ಎಂದು ಸುರ್ಜೆವಾಲ ಹೇಳಿದ್ದಾರೆ. ನನ್ನ ಮಂತ್ರಿಮಂಡಲ ದಲ್ಲೇ ನೀರಾವರಿ ಇಲಾಖೆಯಲ್ಲಿ ಏನೆಲ್ಲಾ ನಡೆಯಿತು ಗೊತ್ತಿದೆ. ಇವರು ಪರ್ಸಂಟೇಜ್ ಕಡಿಮೆ ಮಾಡ್ತಾರಾ. ಕಾಂಗ್ರೆಸ್ ಅಧ್ಯಕ್ಷರು ಅಯ್ಯೋ ನನಗೊಂದು ಅವಕಾಶ ಕೊಡಿ, ಪೆನ್ನು-ಪೇಪರ್ ಕೊಡಿ ಎಂದು ಗೋಗರೆಯು ತ್ತಿದ್ದಾರೆ. ಜನ ಅವಕಾಶ ನೀಡಿದ್ದರಲ್ಲ ಏನು ಉದ್ಧಾರ ಮಾಡಿದ್ದೀರಿ. ದೇವೇಗೌಡರನ್ನು ರಾಮನಗರದಲ್ಲಿ ಗೆಲ್ಲಿಸಿದೆವು. ಅವರ ಮಗನನ್ನು ಗೆಲ್ಲಿಸಿ, 2 ಸಲ ಮುಖ್ಯಮಂತ್ರಿ ಮಾಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸುರೇಶ್ ಹೇಳಿದ್ದಾರೆ. ರಾಮನಗರದಲ್ಲಿ ದೇವೇಗೌಡರನ್ನು ಸೋಲಿಸಲು ಯಾವ ರೀತಿ ರಾಜಕೀಯ ಮಾಡಿದ್ದೀರಿ ಜನರಿಗೆ ಗೊತ್ತಿದೆ ಎಂದು ತಿಳಿಸಿದರು.

Translate »