ಮೈಸೂರಿನಲ್ಲಿ ಮಾ.26ರಂದು ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ
ಮೈಸೂರು

ಮೈಸೂರಿನಲ್ಲಿ ಮಾ.26ರಂದು ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭ

March 3, 2023

ಮೈಸೂರು, ಮಾ.2(ಎಂಕೆ)-ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಮಾ.26 ರಂದು ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರನ್ನು ಒಂದೆಡೆ ಸೇರಿಸುವ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ತೀರ್ಮಾನಿಸಲಾಯಿತು.
ಮೈಸೂರಿನ ಸೈಲೆಂಟ್ ಶೋರ್‍ನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸ್ಥಳೀಯ ಜೆಡಿಎಸ್ ಶಾಸಕರು, ಮುಖಂಡರು, ನಗರಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಪಂಚರತ್ನ ರಥಯಾತ್ರೆಯ ಸಮಾರೋಪ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಸಂಬಂಧ ಚರ್ಚೆ ನಡೆಸಲಾಯಿತು.

ಈ ವೇಳೆ ಮುಖಂಡರಿಂದ ಹಲವು ಸಲಹೆಗಳನ್ನು ಪಡೆದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ, ಈಗಾಗಲೇ 75 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಪೂರ್ಣಗೊಂಡಿದ್ದು, ಮೈಸೂರು ಹಾಗೂ ಮಂಡ್ಯದಲ್ಲಿ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಮಾ.26 ರಂದು ಮೈಸೂರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆಯಾ ಗಬೇಕು. ಕಾಂಗ್ರೆಸ್ ಹಾಗೂ ಬಿಜೆಪಿ ಹಿಂದೆಂದೂ ಮಾಡಿರ ದಂತಹ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಬೃಹತ್ ಸಮಾವೇಶ ಇದಾಗಬೇಕು. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬು ದನ್ನು ಸಾಬೀತು ಮಾಡಬೇಕಿದೆ. ಆದ್ದರಿಂದ ಪ್ರತಿಯೊಬ್ಬರು ಜವಾಬ್ದಾರಿ ಅರಿತು ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದರು.

ರಥಯಾತ್ರೆ ನಡೆದ 75 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೆರಡು ಕ್ಷೇತ್ರಗಳನ್ನು ಬಿಟ್ಟರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿಯೂ ಜೆಡಿಎಸ್‍ಗೆ ಸ್ಪಷ್ಟ ಜಯ ಸಿಗಲಿದೆ. 120 ಸ್ಥಾನಗಳನ್ನು ಗೆಲ್ಲುವ ಗುರಿ ಸಾಧನೆಯಾಗಬೇಕಾದರೆ ಜವಾಬ್ದಾರಿ ಪಡೆದವರು ಯಾವುದೇ ಕಾರಣಕ್ಕೂ ಮೈಮರೆಯಬಾರದು. ಚುನಾವಣೆಗೆ ಎಲ್ಲಾ ರೀತಿಯಲ್ಲೂ ಸಜ್ಜಾಗಬೇಕು ಎಂದರಲ್ಲದೆ ಪಂಚರತ್ನ ಯಾತ್ರೆ ಮುಗಿದ ನಂತರ ಇನ್ನೆರಡು ಮಹತ್ತರ ಯೋಜನೆ ಗಳನ್ನು ಘೋಷಣೆ ಮಾಡುವ ಆಲೋಚನೆ ಇದೆ. ಮುಖ್ಯವಾಗಿ ನಿರುದ್ಯೋಗಿಗಳಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗು ವುದು. ಒಟ್ಟಾರೆ ಜೆಡಿಎಸ್‍ನಿಂದ ಯಾರಿಗೆ ಟಿಕೆಟ್ ಸಿಕ್ಕರೂ ಜಯ ಗಳಿಸುವಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾ ಣವಾಗಬೇಕು ಎಂದು ನುಡಿದರು.

ರೋಡ್ ಶೋ: ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಪಂಚರತ್ನ ರಥಯಾತ್ರೆ ಸಮಾರೋಪ ರೆಕಾರ್ಡ್ ಆಗ ಬೇಕು. ಈ ನಿಟ್ಟಿನಲ್ಲಿ ರಾಮನಗರದಿಂದ ಮೈಸೂರಿನವರೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ರೋಡ್ ಶೋ ನಡೆಯಬೇಕು. ರೋಡ್ ಶೋ ವೇಳೆ ಮಾರ್ಗದುದ್ದಕ್ಕೂ ಎರಡೂ ಬದಿಯಲ್ಲಿ ಪಕ್ಷದ ಬೆಂಬಲಿಗರು, ಮತದಾರರು ಇರಬೇಕು. ಹಾಗೆಯೇ ಹೆಚ್.ಡಿ.ದೇವೇಗೌಡರ ರಾಜಕೀಯ ಜೀವನದಲ್ಲಿ ಈ ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿ ಸಲು ಎಲ್ಲಾ ಕಡೆಯೂ ಕೆಂಪು ಬಣ್ಣದ ಗುಲಾಬಿ ಹೂ ಬಳಸಬೇಕು ಎಂದ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಥವಾ ಹಳ್ಳಿಗಳಿಗೆ ಹೊಂದಿಕೊಂಡಂತಿರುವ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ರೋಡ್ ಶೋ ನಡೆಸುವುದರ ಬಗ್ಗೆ ನಿರ್ಧರಿಸಬೇಕಿದೆ ಎಂದು ಸಲಹೆ ನೀಡಿದರು.

ಇದಕ್ಕೆ ದನಿಗೂಡಿದ ಮಾಜಿ ಸಿಎಂ ಹೆಚ್‍ಡಿಕೆ, ಮೈಸೂರಿ ನಲ್ಲಿ ಪಂಚರತ್ನ ರಥಯಾತ್ರೆ ಸಂಜೆ ವೇಳೆ ಆಯೋಜಿ ಸುವುದರಿಂದ ರೋಡ್ ಶೋ ಅನುಕೂಲವಾಗಲಿದೆ. ದೇಶದ ಲ್ಲಿಯೇ ಈ ರೀತಿಯ ಕಾರ್ಯಕ್ರಮ ನಡೆದಿರದಂತೆ ರೂಪಿಸಿ. ಪ್ರಧಾನಿ ಮೋದಿಯವರು ನಡೆಸಿದ 10 ಕಿಲೋ ಮೀಟರ್ ರೋಡ್ ಶೋನಲ್ಲಿ ಜನರೇ ಇರಲಿಲ್ಲ. ಸಿಟಿಯಲ್ಲಿ ಮಾತ್ರ ಜನ ಸೇರಿದ್ದರೆ ಹೊರತು ಉಳಿದ ಕಡೆಯೆಲ್ಲಾ ಪೊಲೀಸರೇ ಕಾಣುತ್ತಿದ್ದರು. ಆದರೆ ಪಂಚರತ್ನ ಯಾತ್ರೆ ಹೋದ ಕಡೆಯೆಲ್ಲಾ ಜನಸಂದಣಿ ಆಗುತ್ತಿದೆ. ಆದ್ದರಿಂದ ವ್ಯವಸ್ಥಿತವಾಗಿ ರೋಡ್ ಶೋ ಆಯೋಜಿಸಬೇಕು ಎಂದು ತಿಳಿಸಿದರು.

ಮನೆಯೊಳಗೆ ಸೇರಿಕೊಳ್ತ್ತಾರೆ!: ನಾನು ಮೈಸೂರಿಗೆ ಬಂದಾಗ ಮಾತ್ರ ಎಲ್ಲೆಲ್ಲಿಯೋ ಇದ್ದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಕುಮಾರಣ್ಣಗೆ ಜೈ ಎಂದು ಬರುತ್ತೀರಿ. ಇಲ್ಲಿಂದ ಹೋದ ಕೂಡಲೇ ಮತ್ತೆ ಮನೆಯೊಳಗೆ ಸೇರಿಕೊಳ್ತಿರಿ ಎಂದು ಬೇಸರ ವ್ಯಕ್ತಪಡಿಸಿದ ಹೆಚ್‍ಡಿಕೆ, ಮೈಸೂರು ನಗರದಲ್ಲಿ ಜೆಡಿಎಸ್ ಬಲಪಡಿಸುವುದು ಮುಖ್ಯವಾಗಿದೆ. ಕನಿಷ್ಠ ಎರಡು ಸ್ಥಾನಗಳಲ್ಲಾದರೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ನಾಯಕರು ಸಕ್ರಿಯವಾಗಬೇಕಿದೆ ಎಂದು ತಿಳಿಸಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ, ಕೆ.ಮಹದೇವ್, ಅಶ್ವಿನ್‍ಕುಮಾರ್ ಸೇರಿದಂತೆ ಸ್ಥಳಿಯ ಮುಖಂಡರು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

Translate »