ಹಣ ತೆಗೆದುಕೊಂಡವರಿಗೆ  ದಂಧೆ ಗೊತ್ತಿರಬಹುದು: ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಿರುಗೇಟು
ಮೈಸೂರು

ಹಣ ತೆಗೆದುಕೊಂಡವರಿಗೆ  ದಂಧೆ ಗೊತ್ತಿರಬಹುದು: ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಿರುಗೇಟು

June 6, 2020

ಮೈಸೂರು, ಜೂ.5(ಎಂಟಿವೈ)-ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿರುವುದು ನನಗೆ ಗೊತ್ತಿಲ್ಲ. ಹಣ ತೆಗೆದುಕೊಂಡವರಿಗೆ ದಂಧೆ ಗೊತ್ತಿರುತ್ತದೆ. ಆದ್ದರಿಂದ ಅವರು ಹೇಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶಾಸಕ ಸಾ.ರಾ.ಮಹೇಶ್‍ಗೆ ತಿರುಗೇಟು ನೀಡಿದರು. ಮೈಸೂರಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಶಾಸಕ ಸಾ.ರಾ.ಮಹೇಶ್ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ನಾನು ಜಿಲ್ಲೆಯ ಜವಾಬ್ದಾರಿ ತೆಗೆದು ಕೊಂಡ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಡೆ ಗಮನ ಹರಿಸುತ್ತಿ ದ್ದೇನೆಯೇ ಹೊರತು, ಅಧಿಕಾರಿಗಳ ವರ್ಗಾವಣೆಗೆ ಅಷ್ಟೇನೂ ಮಹತ್ವ ಕೊಟ್ಟಿಲ್ಲ. ಅಬಕಾರಿ ಡಿಸಿ ವಿರುದ್ಧ ದೂರು ಬಂದ ಕಾರಣ ಅವರ ವರ್ಗಾವಣೆ ಆಗಿದೆ. ಈ ವರ್ಗಾವಣೆಯು ನನ್ನ ಗಮನಕ್ಕೆ ತಂದೇ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತವಾಗಿ ನನ್ನನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಾರೆ. ಜಿಲ್ಲೆಯಲ್ಲಿ ಅಧಿಕೃತ-ಅನಧಿಕೃತ ಉಸ್ತುವಾರಿ ಸಚಿವರು ಎಂಬುದೇನಿಲ್ಲ, ಇರುವುದು ನಾನೊಬ್ಬನೇ ಉಸ್ತುವಾರಿ ಸಚಿವ ಎಂದರು. ಎ.ಎಚ್.ವಿಶ್ವನಾಥ್ ಅವರು ಹಸ್ತಕ್ಷೇಪವಾಗಲೀ, ಜಿಲ್ಲಾಡಳಿತ ವಿಚಾರದಲ್ಲಿ ಮೂಗು ತೂರಿಸುವುದನ್ನಾಗಲೀ ಮಾಡಿಲ್ಲ. ಅವರು ವಿಧಾನಪರಿಷತ್ ಸದಸ್ಯರಾಗಲು ಓಡಾಡುತ್ತಿದ್ದಾರೆ. ಕೊರೊನಾ ಹಿನ್ನೆಲೆ ಅಧಿಕಾರಿಗಳ ವರ್ಗಾವಣೆ ಮಾಡಿಲ್ಲ. ರಾಜಕಾರಣಕ್ಕಾಗಿ ಮಾಡುವ ಆರೋಪಕ್ಕೆ ಅಷ್ಟು ಮಹತ್ವ ಕೊಡದೆ ಜಿಲ್ಲೆಯ ಅಭಿವೃದ್ಧಿಗೆ ಗಮನ ಕೊಡೋಣ ಎಂದರು.

Translate »