ಮೈಸೂರು, ಜು. 22(ಆರ್‍ಕೆ)- ಕೊರೊನಾ ವೈರಸ್ ಸೋಂಕು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರಿನ ಎನ್.ಆರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಕೋವಿಡ್ ಕೇರ್ ಸೆಂಟರ್‍ಗಳನ್ನು ಸಜ್ಜುಗೊಳಿಸಲಾಗಿದೆ.
ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ನಗರ ಪಾಲಿಕೆ ಸದ ಸ್ಯರು, ಧಾರ್ಮಿಕ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉದಯಗಿರಿಯ ಫಾರೂಖಿಯಾ ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ರಾಜೀವ್‍ನಗ ರದ ಆಂಡುಲನ್ಸ್ ಪಬ್ಲಿಕ್ ಶಾಲೆ ಹಾಗೂ ಅಜೀಜ್ ಸೇಠ್ ನಗರದ ಬೀಡಿ ಕಾರ್ಮಿಕರ ಮಜ್ದೂರ್ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಸಜ್ಜುಗೊಳಿಲಾಗಿದೆ.
ಫಾರೂಖಿಯಾ ಶಿಕ್ಷಣ ಸಂಸ್ಥೆ ಕಾರ್ಯ ದರ್ಶಿ ತಾಜ್ ಮೊಹಮದ್ ಖಾನ್, ಆಂಡು ಲನ್ಸ್ ಪಬ್ಲಿಕ್ ಶಾಲೆ ಮುಖ್ಯಸ್ಥ ನಜೀರ್ ಹಾಗೂ ಬೀಡಿ ಕಾರ್ಮಿಕರ ಆಸ್ಪತ್ರೆ ಮುಖ್ಯ ಸ್ಥರು ತಮ್ಮ ಸಂಸ್ಥೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಸಹಮತ ನೀಡಿದ್ದಾರೆ ಎಂದು ಮಾಜಿ ಮೇಯರ್ ಅಯೂಬ್‍ಖಾನ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪ ಡಿಸಿರುವ ಉದಯಗಿರಿಯ ಫಾರೂಖಿಯಾ ಮಹಿಳಾ ಪಾಲಿಟೆಕ್ನಿಕ್ಸ್‍ಗೆ ಭೇಟಿ ನೀಡಿ ಸುಮಾರು 135 ಹಾಸಿಗೆಯ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ವೀಕ್ಷಿಸಿದ ಅವರು, ಎನ್.ಆರ್ ಕ್ಷೇತ್ರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದಲ್ಲದೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವ ಕಾರಣ ಸ್ಥಳೀಯ ಪಾಲಿಕೆ ಸದಸ್ಯರು, ಮೌಲ್ವಿಗಳು, ಸಂಘಟನೆಗಳ ಮುಖಂಡರು ಸೇರಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದಾಗ ಕೋವಿಡ್ ಕೇರ್ ಸೆಂಟರ್ ಮಾಡುವುದಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು ಎಂದು ತಿಳಿಸಿದರು.
ಅದರಂತೆ 3 ಕಡೆ ಕೋವಿಡ್ ಕೇರ್ ಸೆಂಟರ್ ಮಾಡುತ್ತಿದ್ದೇವೆ. 135 ಹಾಸಿಗೆ ಸಾಮಥ್ರ್ಯದ ಫಾರೂಖಿಯಾ ಕಾಲೇಜು ಸೆಂಟರ್ ಸಂಪೂರ್ಣ ಸಿದ್ಧವಾಗಿದ್ದು, ನಾಳೆ (ಜು.23)ಯಿಂದ ಕಾರ್ಯಾರಂಭವಾಗ ಲಿದೆ ಎಂದ ಅಯೂಬ್‍ಖಾನ್, ಜಿಲ್ಲಾಡಳಿ ತವು ಮಂಚ, ಹಾಸಿಗೆ, ದಿಂಬು, ಬೆಡ್ ಶೀಟ್‍ಗಳನ್ನು ಒದಗಿಸಿದೆ. ಪಾಲಿಕೆಯಿಂದ ಎಲೆಕ್ಟ್ರಿಕಲ್ ಕೆಲಸ ಮತ್ತು ಸ್ವಚ್ಛತೆ ಸೌಕರ್ಯ ಮಾಡಲಾಗಿದೆ. ಖಾಸಗಿ ಆಸ್ಪತ್ರೆ ಮುಖ್ಯಸ್ಥರು, ವೈದ್ಯರು, ನರ್ಸ್ ಹಾಗೂ ಸಿಬ್ಬಂದಿಗಳನ್ನು ಪೂರೈಸುವುದಾಗಿ ತಿಳಿಸಿದ್ದಾರೆ ಎಂದರು.
ಉಳಿದಂತೆ ರೋಗಿಗಳಿಗೆ ಆಹಾರ, ನೀರಿನ ಸೌಲಭ್ಯವನ್ನು ಸ್ಥಳೀಯ ಸಂಘ-ಸಂಸ್ಥೆಗಳು ಪೂರೈಸಲು ಮುಂದೆ ಬಂದಿವೆ. ಎಲ್ಲರ ಸಹಕಾರದಿಂದಾಗಿ ಎನ್.ಆರ್ ಕ್ಷೇತ್ರದಲ್ಲಿ 3 ಕೋವಿಡ್ ಕೇರ್ ಸೆಂಟರ್‍ಗಳನ್ನು ಸಿದ್ಧಪಡಿಸಿದ್ದು, ಒಟ್ಟಾರೆ 450 ಮಂದಿ ಸೋಂಕಿ ತರನ್ನು ದಾಖಲಿಸಿ ಚಿಕಿತ್ಸೆ ನೀಡಲು ಸೌಲಭ್ಯ ಕಲ್ಪಿಸಲಾಗಿದ್ದು, ಉಳಿದೆರಡು ಕೇಂದ್ರಗಳೂ ಅತೀ ಶೀಘ್ರ ಆರಂಭವಾಗಲಿವೆ ಎಂದರು. ನಗರ ಪಾಲಿಕೆ ವಕ್ರ್ಸ್ ಕಮಿಟಿ ಅಧ್ಯಕ್ಷ ಅಸ್ರತ್‍ಉಲ್ಲಾ ಖಾನ್, ಪಾಲಿಕೆ ಸದಸ್ಯ ಶೌಕತ್ ಪಾಷಾ, ಮುಖಂಡರಾದ ಸಾದಿಕ್, ತಾಜ್ ಮಹಮದ್ ಖಾನ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.