ಹೈದರಾಬಾದ್‌ನ ಮೂವರು ಪ್ರವಾಸಿಗರು ಕೊಡಗಿನ ಕೋಟೆ ಅಬ್ಬಿ ಜಲಪಾತದಲ್ಲಿ ನೀರು ಪಾಲು
ಮೈಸೂರು

ಹೈದರಾಬಾದ್‌ನ ಮೂವರು ಪ್ರವಾಸಿಗರು ಕೊಡಗಿನ ಕೋಟೆ ಅಬ್ಬಿ ಜಲಪಾತದಲ್ಲಿ ನೀರು ಪಾಲು

May 30, 2022

ಮಡಿಕೇರಿ, ಮೇ ೨೯(ಪಿ.ಎಸ್)- ಕೊಡಗಿಗೆ ಪ್ರವಾಸ ಬಂದಿದ್ದ ಹೈದರಾಬಾದ್ ಮೂಲದ ಮೂವರು ಮುಕ್ಕೋಡ್ಲು ಸಮೀಪದ ಕೋಟೆ ಅಬ್ಬಿ ಜಲಪಾತದಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನು ವಾರ ಮಧ್ಯಾಹ್ನ ನಡೆದಿದೆ.

ಹೈದರಾಬಾದ್ ಮೂಲದ ಶ್ಯಾಮ (೩೬), ಶಾಹೀಂದ್ರ(೧೬) ಮತ್ತು ಶ್ರೀಹರ್ಷ(೧೮) ಮೃತ ಪಟ್ಟವರಾಗಿ ದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ: ಹೈದರಾಬಾದ್ ಮೂಲದ ೧೩ ಮಂದಿ ಶನಿವಾರ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದು, ಕುಶಾಲನಗರದ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಭಾನು ವಾರ ಮಾಂದಲ್‌ಪಟ್ಟಿಗೆ ತೆರಳಿದ್ದ ಈ ಪ್ರವಾಸಿಗರ ತಂಡ, ಬಳಿಕ ಮುಕ್ಕೋಡ್ಲು ಬಳಿಯ ಕೋಟೆ ಅಬ್ಬಿ ಜಲಪಾತ ನೋಡಲು ತೆರಳಿದ್ದಾರೆ. ಈ ವೇಳೆ ಕೆಲವರು ಅಲ್ಲಿನ ಜಲಪಾತದ ಕಲ್ಲುಗಳ ಮೇಲೆ ಕುಳಿತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಓರ್ವ ಕಾಲುಜಾರಿ ನೀರಿಗೆ ಬಿದ್ದಿದ್ದು, ರಕ್ಷಣೆಗಾಗಿ ಕೂಗಿದ್ದಾನೆ. ಆತನನ್ನು ರಕ್ಷಿಸಲು ಮತ್ತಿಬ್ಬರು ನೀರಿಗಿಳಿದಾಗ ಅವರೂ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ೩ ಮಂದಿಯ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳ ಮಹಜರು ನಡೆಸಿ ಮೃತದೇಹಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು. ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಚೀರ ಅಯ್ಯಪ್ಪ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ. ಅಯ್ಯಪ್ಪ, ಈ ಮೂರು ಮಂದಿಗೂ ಈಜು ಬಾರದ ಹಿನ್ನೆಲೆಯಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಹಸ್ತಾಂತರ ಮಾಡುವುದಾಗಿ ಮಾಹಿತಿ ನೀಡಿದರು.

Translate »