ಬಿಳಿಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಮೂವರು ಕಾರ್ಮಿಕರ ಸಾವು
ಚಾಮರಾಜನಗರ

ಬಿಳಿಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಮೂವರು ಕಾರ್ಮಿಕರ ಸಾವು

December 27, 2022

ಚಾಮರಾಜನಗರ, ಡಿ.26(ಎಸ್‍ಎಸ್)- ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಬಿಳಿಕಲ್ಲು ಕ್ವಾರಿ ಕುಸಿದು ಮೂವರು ಸಾವನ್ನಪ್ಪಿದ್ದ ಘಟನೆ ಈ ಭಾಗದ ಜನರ ಮನಸ್ಸಿ ನಿಂದ ಮಾಸುವ ಮುನ್ನವೇ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ಬಳಿ ಇಂತಹುದೇ ದುರಂತವೊಂದು ಸಂಭವಿಸಿ, ಮೂವರು ದುರಂತ ಸಾವಿಗೀಡಾಗಿದ್ದಾರೆ.

ಬಿಳಿಕಲ್ಲು ಕ್ವಾರಿಯ ಕಲ್ಲುಗುಡ್ಡ ಕುಸಿದು ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆ ಗ್ರಾಮದ ಮಹದೇವಶೆಟ್ಟಿ ಅವರ ಪುತ್ರ ಶಿವರಾಜು(29), ಮಾದಶೆಟ್ಟಿಯವರ ಪುತ್ರ ಕುಮಾರ(35) ಹಾಗೂ ಕುಳ್ಳಮಾದಶೆಟ್ಟಿಯವರ ಪುತ್ರ ಸಿದ್ದರಾಜು (31) ಮೃತ ಕಾರ್ಮಿಕರು. ಈ ಪೈಕಿ ಕುಮಾರ್ ಮತ್ತು ಸಿದ್ದರಾಜು ಅವರಿಗೆ ವಿವಾಹವಾಗಿದ್ದರೆ, ಶಿವರಾಜು ಅವಿವಾಹಿತ.

ಘಟನೆಯ ವಿವರ: ಚಾಮರಾಜನಗರ ತಾಲೂಕಿನ ಬಿಸಲ ವಾಡಿ ಗ್ರಾಮಕ್ಕೆ ಸೇರಿದ ಸರ್ವೇ ನಂ.172ರಲ್ಲಿ 3 ಎಕರೆ ಜಾಗದಲ್ಲಿ ರೇಣುಕಾದೇವಿ ಎಂಬುವರು ಬಿಳಿಕಲ್ಲು ಕ್ವಾರಿ ನಡೆಸುತ್ತಿದ್ದರು. ಕ್ವಾರಿಯಲ್ಲಿ ಎಂದಿನಂತೆ ಸೋಮವಾರ 10ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಪೈಕಿ ಕಾರ್ಮಿಕನೋರ್ವ ಹಗ್ಗದ ಸಹಾಯದಿಂದ ಕಂಪ್ರೆಸರ್ ಬಳಸಿ ಕ್ವಾರಿಯ ಮಧ್ಯಭಾಗದಲ್ಲಿ ಕುಳಿ ತೆಗೆಯುತ್ತಿದ್ದ. ಇನ್ನುಳಿದ ಕಾರ್ಮಿಕರು ಕೆಳಭಾಗದಲ್ಲಿ ನಿಂತು ಕುಳಿ ತೆಗೆಯುತ್ತಿದ್ದವನಿಗೆ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಉಂಟಾದ ಕಂಪನದಿಂದ ಕ್ವಾರಿಯ ಮೇಲ್ಭಾಗದ ಕಲ್ಲು ಸಡಿಲಗೊಂಡು ಕುಸಿದಿದೆ. ಈ ಸಂದರ್ಭ ದಲ್ಲಿ ಕಲ್ಲು ಕುಳಿ ತೋಡುತ್ತಿದ್ದ ಕಾರ್ಮಿಕನ ಮೇಲೆ ಮತ್ತು ಕೆಳಗಡೆ ನಿಂತಿದ್ದ ಇನ್ನಿಬ್ಬರು ಕಾರ್ಮಿಕರ ಮೇಲೆ ಕಲ್ಲಿನ ಭಾರೀ ಗಾತ್ರದ ತುಂಡುಗಳು ಬಿದ್ದಿವೆ. ಇದರಿಂದ ಕುಮಾರ್ ಹಾಗೂ ಶಿವರಾಜು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಚಿಂತಾಜನಕ ಸ್ಥಿತಿಯಲ್ಲಿದ್ದ ಸಿದ್ದರಾಜು ಅವ ರನ್ನು ಸ್ಥಳೀಯರು ಹಾಗೂ ಪೊಲೀಸರು ಕ್ವಾರಿಯಿಂದ ಮೇಲಕ್ಕೆ ತಂದು ಆಂಬುಲೆನ್ಸ್ ಮೂಲಕ ನಗರದ ಜಿಲ್ಲಾಸ್ಪತ್ರೆಗೆ ಕರೆ ದೊಯ್ಯುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.

ಗ್ರಾಮಸ್ಥರ ಆರೋಪ: ಬಿಸಲವಾಡಿ ಗ್ರಾಮದ ಬಳಿ ಬಿಳಿಕಲ್ಲು ಕ್ವಾರಿ ನಡೆಸಲು 3 ಎಕರೆ ಜಾಗಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಆದರೆ, ಪಾಲಿಸ ಬೇಕಾದ ಸುರಕ್ಷ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸುಮಾರು 20ಕ್ಕೂ ಹೆಚ್ಚು ಅಡಿ ಆಳ ತೋಡಲಾಗಿದೆ. ಮೂರು ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಕ್ವಾರಿಯನ್ನು ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರು ದೂರಿದ್ದಾರೆ. ಗ್ರಾಮದ ಸುತ್ತಮುತ್ತ ಅಕ್ರಮ ಹಾಗೂ ನಿಯಮಗಳನ್ನು ಪಾಲಿಸದೇ ನಡೆಯುತ್ತಿರುವ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಭೇಟಿ: ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಗ್ರಾಮಾಂತರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ, ಎಸ್‍ಐ ರಾಜೇಂದ್ರ, ತಹಸಿಲ್ದಾರ್ ಬಸವರಾಜು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ನಂಜುಂಡಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮಸ್ಥರಿಂದ ಪ್ರತಿಭಟನೆ: ನಗರದ ಹೊರವಲಯದ ಯಡಬೆಟ್ಟದ ಸಿಮ್ಸ್ ಬೋಧನಾ ಆಸ್ಪತ್ರೆಯ ಶವಾಗಾರದಲ್ಲಿ ಮೂವರು ನೌಕರರ ಮೃತದೇಹಗಳನ್ನು ಇಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಮಿಕರ ಕುಟುಂಬದವರು, ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜಮಾಯಿಸಿದರು. ಮೃತಪಟ್ಟವರ ಕುಟುಂಬಗಳಿಗೆ ಗಣಿ ಮಾಲೀಕರು ಪರಿಹಾರ ನೀಡಬೇಕು ಎಂದು ಪ್ರತಿಭಟನೆ ನಡೆಸಿದರು. ಪೆÇಲೀಸರು ಮಧ್ಯಪ್ರವೇಶಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.

Translate »