ಮೈಸೂರು, ಕೊಡಗಲ್ಲಿ ಗುಡುಗು ಸಹಿತ ಮಳೆ
ಮೈಸೂರು

ಮೈಸೂರು, ಕೊಡಗಲ್ಲಿ ಗುಡುಗು ಸಹಿತ ಮಳೆ

April 6, 2020

ಮೈಸೂರು/ಮಡಿಕೇರಿ,ಏ.5-ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಮೈಸೂರು, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ಮೈಸೂರಲ್ಲಿ ಸರಿರಾತ್ರಿ ಮಳೆ ಸುರಿದರೆ, ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಧ್ಯಾಹ್ನ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾರೀ ಮಳೆ ಸುರಿದು, ತಂಪೆರೆಯಿತು.

ಸರಿರಾತ್ರಿ ಸುಮಾರು 12.20ರಲ್ಲಿ ಮೈಸೂರಲ್ಲಿ ಆರಂಭವಾದ ಗುಡುಗು ಸಹಿತ ಮಳೆ ಪತ್ರಿಕೆ ಅಚ್ಚಿಗೆ ಹೋಗುವ ಸಮಯದಲ್ಲೂ ಸುರಿಯುತ್ತಿತ್ತು. ಕೊಡಗು ಜಿಲ್ಲೆಯಲ್ಲಿ ಗುಡುಗು, ಸಿಡಿಲಿನೊಂದಿಗೆ ಗಾಳಿ ಮಳೆಯಾಗಿದ್ದು, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ವಿವಿಧೆಡೆ ಮಳೆ ಸುರಿದಿದೆ. ಸುಡುಬಿಸಿಲ ಬೇಗೆಗೆ ತಂಪೆರೆದ ವಾತಾವರಣ ಮೂಡಿದ್ದು, ಕರ್ತವ್ಯ ನಿರತ ಸಂಚಾರಿ ಪೆÇಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ದಿಢೀರ್ ಮಳೆಯಿಂದ ರಕ್ಷಣೆ ಪಡೆಯಲು ಮುಚ್ಚಿದ್ದ ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆದರು.

ಮಡಿಕೇರಿ ನಗರದಲ್ಲಿ ಹೆಚ್ಚು ಮಳೆಯಾಗಿದ್ದು, ಗಾಳಿಬೀಡು, ವಣಚಲು, ಸಂಪಾಜೆ, ಕಲ್ಲುಗುಂಡಿ, ಮಕ್ಕಂದೂರು ವ್ಯಾಪ್ತಿಯಲ್ಲಿ ಆಲಿಕಲ್ಲುಗಳು ಬಿದ್ದಿವೆ. ಈ ವಾರ ಮಳೆ ಸುರಿಯುವ ಬಗ್ಗೆ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾ ಗದ ತಜ್ಞರು ಮಾಹಿತಿಯನ್ನೂ ನೀಡಿದ್ದರು.

ರಸ್ತೆಗೆ ಬಿದ್ದ ಮರ: ಕಾಟಕೇರಿ, ಮದೆನಾಡು, ಜೋಡುಪಾಲ ವ್ಯಾಪ್ತಿಯಲ್ಲಿ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಜೋಡು ಪಾಲ ಮುಖ್ಯ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಪರ್ಕಕ್ಕೆ ಕೆಲಕಾಲ ಅಡ್ಡಿಯಾಯಿತು. ಮರ ವಿದ್ಯುತ್ ಕಂಬದ ಮೇಲೆ ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾದ ಹಿನ್ನೆಲೆ ಚೆಸ್ಕಾಂ ಸಿಬ್ಬಂದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವು ಗೊಳಿಸಿದರು. ಹೆದ್ದಾರಿ ಉದ್ದಕ್ಕೂ ಮರದ ಸಣ್ಣ ಕೊಂಬೆಗಳು, ಒಣಗಿದ ಎಲೆಗಳು ಬಿದ್ದದ್ದು ಕಂಡು ಬಂತು.

ಚಿಕ್ಕಮಗಳೂರು: ರಣಬಿಸಿಲಿನ ತಾಪದಿಂದ ಬಸವಳಿದಿದ್ದ ಜಿಲ್ಲೆಯ ಮಲೆನಾಡು ಭಾಗದ ಜನರಿಗೆ ಭಾನುವಾರ ಸಂಜೆ ಸುರಿದ ಸಾಧಾರಣ ಮಳೆ ತಂಪಿನ ಸಿಂಚನ ಮೂಡಿಸಿತು. ಗುಡುಗು, ಸಿಡಿಲು, ಗಾಳಿ ಸಹಿತ ಸುರಿದ ಮಳೆ ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲಿ ಭಾರೀ ಮಳೆಯಾಗುವ ಮನ್ಸೂಚನೆ ನೀಡಿದೆ. ಇಡೀ ಜಿಲ್ಲೆಯಲ್ಲಿ ರಣಬಿಸಿಲಿತ್ತು. ಮನೆಯೊಳಗೆ ಬಂಧಿಯಾಗಿರುವ ಸಾರ್ವಜನಿಕರು ಬಿಸಿಲ ಬೇಗೆಗೆ ತತ್ತರಿಸಿದ್ದರು. ಆದರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಂಜೆ ವೇಳೆ ಧಾರಾಕಾರ ಮಳೆಯಾಗಿದೆ.

Translate »