ಕಾಂಗ್ರೆಸ್‍ನಲ್ಲಿ ಈಗ ಟಿಕೆಟ್ ರಾಜಕೀಯ ಜೋರು! ನಮಗೊಂದು ನಮ್ಮವರಿಗೊಂದು…!!
News

ಕಾಂಗ್ರೆಸ್‍ನಲ್ಲಿ ಈಗ ಟಿಕೆಟ್ ರಾಜಕೀಯ ಜೋರು! ನಮಗೊಂದು ನಮ್ಮವರಿಗೊಂದು…!!

July 12, 2022

ಬೆಂಗಳೂರು, ಜು. 11(ಕೆಎಂಶಿ)-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಗೊಂದು, ತಮ್ಮ ಕುಟುಂಬದವರಿ ಗೊಂದು ಟಿಕೆಟ್ ನೀಡು ವಂತೆ ರಾಜ್ಯ ಕಾಂಗ್ರೆಸ್ ಮುಖಂಡರು ಪಕ್ಷದ ನಾಯಕರಲ್ಲಿ ಬೇಡಿಕೆ ಇಟ್ಟಿದ್ದಾರೆ. ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಡಾ.ಹೆಚ್.ಸಿ.ಮಹ ದೇವಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ 40ಕ್ಕೂ ಹೆಚ್ಚು ಮುಖಂಡರು ತಮಗಲ್ಲದೆ, ತಮ್ಮ ಮಗನಿಗೆ ಇಲ್ಲವೇ ಸೊಸೆಗೆ ಟಿಕೆಟ್ ನೀಡಿ ಎಂದಿದ್ದಾರೆ.

ಬಿಜೆಪಿ ಇಲ್ಲವೇ ಜೆಡಿಎಸ್ ಸತತವಾಗಿ ಗೆಲ್ಲುತ್ತಿ ರುವ ಕ್ಷೇತ್ರಗಳಲ್ಲಿ ತಮ್ಮ ಕುಟುಂಬ ವರ್ಗದವ ರನ್ನು ಕಣಕ್ಕಿಳಿಸಿದರೆ ಆ ಕ್ಷೇತ್ರ ಕಾಂಗ್ರೆಸ್‍ದಾಗು ತ್ತದೆ. ನಮ್ಮದಲ್ಲದ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಪಕ್ಷದ ಚಿಹ್ನೆಯ ಜೊತೆಗೆ ನಮ್ಮ ಕುಟುಂಬದ ವರ್ಚಸ್ಸು ಮತ್ತು ಸಂಪರ್ಕ ವನ್ನು ಬಳಸಿಕೊಂಡು ಗೆಲುವು ತಂದು ಕೊಡುತ್ತೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ್ ಬಳಿ ಬೇಡಿಕೆ ಇಟ್ಟಿ ದ್ದಾರೆ. ಅಧಿಕಾರಕ್ಕೆ ಬರುವ ಕನಸಿನಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‍ಗಾಗಿ ಲಾಬಿ ಆರಂಭವಾಗಿದೆ. ಇದರ ಮಧ್ಯೆಯೇ ಪಕ್ಷದ ಮುಖಂಡರು ತಮ್ಮ ಕುಟುಂಬದವರು ಮತ್ತು ಅನುಯಾಯಿಗಳಿಗೆ ತಮ್ಮ ಕ್ಷೇತ್ರ ವನ್ನು ಗಟ್ಟಿ ಮಾಡಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ಈಗಾಗಲೇ ಪ್ರಸಕ್ತ ವಿಧಾನ ಸಭೆಯಲ್ಲಿ 4 ಮಂದಿ ಒಂದೇ ಕುಟುಂಬಕ್ಕೆ ಸೇರಿದವರು ಇಬ್ಬರು ಮೂವರು ಸದಸ್ಯ ರಾಗಿದ್ದಾರೆ. ಟಿಕೆಟ್ ಕೇಳುವ ಪ್ರಮುಖ ರಲ್ಲಿ ಮಾಜಿ ಸಚಿವರಾದ ಹೆಚ್.ಸಿ.ಮಹ ದೇವಪ್ಪ,ಸತೀಶ್ ಜಾರಕಿಹೊಳಿ, ಆರ್.ವಿ. ದೇಶಪಾಂಡೆ, ಟಿ.ಬಿ.ಜಯಚಂದ್ರ ಸೇರಿ ದಂತೆ ಹಲವು ನಾಯಕರು ಹೀಗೆ ದುಂಬಾಲು ಬಿದ್ದವರಲ್ಲಿ ಪ್ರಮುಖರು. ಶಾಮನೂರು ಶಿವಶಂಕರಪ್ಪ ಅವರು ತಮ್ಮ ಕ್ಷೇತ್ರವನ್ನು ಮಗನಿಗೆ ಕೊಡುವುದರೊಂದಿಗೆ ತಮ್ಮ ಸೊಸೆಗೂ ಪಕ್ಷದ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಮಾಜಿ ಸಚಿವ ಮಹದೇವಪ್ಪ ಅವರು ಏಕ ಕಾಲಕ್ಕೆ ಟಿ.ನರಸೀಪುರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡ ಬೇಕು ಎಂದು ಕೇಳಿದ್ದಾರೆ. ಒಂದರಲ್ಲಿ ತಾವು, ಮತ್ತೊಂದರಲ್ಲಿ ಪುತ್ರ ಸುನೀಲ್ ಬೋಸ್ ಸ್ಪರ್ಧಿ ಸುವುದಾಗಿ ಹೇಳಿದ್ದಾರೆ. ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ತಾವು ಸ್ಪರ್ಧಿಸುತ್ತಿರುವ ಯಮಕನಮರಡಿ ಕ್ಷೇತ್ರವನ್ನು ತಮ್ಮ ಪುತ್ರಿ ಪ್ರಿಯಾಂಕಾ ಅವರಿಗೆ ಬಿಟ್ಟುಕೊಟ್ಟು ತಾವು ಸವದತ್ತಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ನಾನು ಯಮಕನ ಮರಡಿ ಕ್ಷೇತ್ರದಲ್ಲಿ ಗೆಲ್ಲುವುದು ಸಹಜ. ಆದರೆ ಸವದತ್ತಿ ಕ್ಷೇತ್ರದಲ್ಲಿ ಪಕ್ಷ ಗೆಲ್ಲಬೇಕು ಎಂದರೆ ನಾನೇ ಹೋಗಿ ಸ್ಪರ್ಧಿಸಬೇಕು. ಸವದತ್ತಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿ.ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮಗಳಿಗೆ ಟಿಕೆಟ್ ಕೊಡಿ ಎಂದು ಜಾರಕಿಹೊಳಿ ವರಿಷ್ಠರಿಗೆ ಪಟ್ಟು ಹಿಡಿದಿದ್ದಾರೆ. ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ತಮಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ನನ್ನ ಪುತ್ರ ಪ್ರಶಾಂತ್ ದೇಶಪಾಂಡೆಗೆ ಯಲ್ಲಾಪುರದ ಟಿಕೆಟ್ ನೀಡುವಂತೆ ನಾಯಕರಲ್ಲಿ ಮನವಿ ಮಾಡಿದ್ದಾರೆ.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ತಮಗೆ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಟಿಕೆಟ್ ನೀಡುವುದರ ಜತೆಗೆ, ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ತಮ್ಮ ಪುತ್ರ ಸಂತೋಷ್ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ವಯಸ್ಸಿನ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸ ದಂತೆ ಪಕ್ಷ ಅವರಿಗೆ ಸಲಹೆ ನೀಡಿದೆ. ಆದರೆ ತಾವು ಬಿಟ್ಟು ಕೊಡುವ ಕ್ಷೇತ್ರದಲ್ಲಿ ತಮ್ಮ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ,ಇದರೊಂದಿಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸೊಸೆಗೆ ಟಿಕೆಟ್ ನೀಡುವಂತೆ ಹಟ ಹಿಡಿದಿದ್ದಾರೆ. ಈ ಮಧ್ಯೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಥಣಿ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಲಾಬಿ ಮಾಡುತ್ತಿದ್ದಾರೆ.

ಮೂಡಿಗೆರೆ ಕ್ಷೇತ್ರದಲ್ಲಿ ತಮ್ಮ ಬದಲಿಗೆ ಪುತ್ರಿ ನಯನಾ ಅವರಿಗೆ ಟಿಕೆಟ್ ನೀಡುವಂತೆ ವರಿಷ್ಠರನ್ನು ಹಿರಿಯ ನಾಯಕಿ ಶ್ರೀಮತಿ ಮೋಟಮ್ಮ ಕೋರಿದ್ದಾರೆ.
ಹೀಗೆ ಕಾಂಗ್ರೆಸ್‍ನಲ್ಲಿ ದೊಡ್ಡ ಪಟ್ಟಿಯೇ ಬೆಳೆದಿದೆ. ಹಲವು ನಾಯಕರು ತಮ್ಮ ಜತೆಗೆ ತಮ್ಮ ಮಗ ಇಲ್ಲವೇ ಮಗಳಿಗೆ ಅಥವಾ ಸೊಸೆಗೆ ಟಿಕೆಟ್ ನೀಡಬೇಕು ಎಂದೋ, ತಮ್ಮ ಬದಲಿಗೆ ತಮ್ಮ ಮಕ್ಕಳಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದು, ಆ ಮೂಲಕ ಟಿಕೆಟ್ ರಾಜಕೀಯ ದಿನ ದಿನಕ್ಕೂ ಬಿರುಸು ಪಡೆಯುತ್ತಿದೆ.

Translate »