ಕೊಡಗಲ್ಲಿ ಮಳೆ ಆರ್ಭಟ: ಇಂದು ಮುಖ್ಯಮಂತ್ರಿ ಭೇಟಿ
ಕೊಡಗು

ಕೊಡಗಲ್ಲಿ ಮಳೆ ಆರ್ಭಟ: ಇಂದು ಮುಖ್ಯಮಂತ್ರಿ ಭೇಟಿ

July 12, 2022

ಮಡಿಕೇರಿ,ಜು.11- ಕೊಡಗು ಜಿಲ್ಲೆಯಾದ್ಯಂತ ಮಳೆ ಯಿಂದ ವ್ಯಾಪಕ ಹಾನಿಯಾಗಿದ್ದು, ನಾಳೆ (ಮಂಗಳವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಹಾನಿಗೀಡಾದ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ.

ನಾಳೆ ಬೆಳಗ್ಗೆ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿ, ಅಲ್ಲಿಂದ ರಸ್ತೆ ಮೂಲಕ ಕೊಡಗಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.30ರವರೆಗೆ ಕೊಡಗಿನ ವಿವಿಧೆಡೆ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ, ಪರಿ ಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.
ಅಪಾರ ಹಾನಿ: ಸೋಮವಾರ ಮಳೆ ಆರ್ಭಟ ಕಡಿಮೆ ಇತ್ತಾದರೂ, ಅವಾಂತರಗಳು ತಪ್ಪಿಲ್ಲ. ಮರಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿರುವುದು, ಭೂ ಕುಸಿತ ಸೇರಿದಂತೆ ನಾನಾ ರೀತಿಯ ಹಾನಿ ಸಂಭವಿಸಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಸುರಿದ ಮಳೆಗೆ ಜಿಲ್ಲೆಯ ವಿವಿಧೆಡೆ 15 ಮನೆಗಳಿಗೆ ಹಾನಿಯಾಗಿದೆ. 1 ಭೂಕುಸಿತ ಪ್ರಕರಣ ದಾಖಲಾಗಿದ್ದು, ಮಳೆ ಕಾರಣ ದಿಂದ 98 ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ಚೆಸ್ಕಾಂ ಇಲಾಖೆಗೆ 9.80 ಲಕ್ಷ ರೂ. ನಷ್ಟವಾಗಿದೆ. ಜೂ.1ರಿಂದ ಜು.11ರ ವರೆಗೆ 84 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದ್ದು, 2 ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.

ಯಾವುದೇ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಎನ್‍ಡಿಆರ್‍ಎಫ್ ತಂಡ ಕೊಡಗಿನಲ್ಲೇ ಬೀಡುಬಿಟ್ಟಿದೆ. ಅಲ್ಲದೆ ಭೂ ಕಂಪನ ಸಂಭವಿಸಿರುವ ಪ್ರದೇಶಗಳು ಹಾಗೂ ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ನಡೆದಿದ್ದ ಭೂ ಕಂಪನ ಪ್ರದೇಶಗಳಿಗೆ ಎನ್‍ಡಿಆರ್‍ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಇಂದು ಕೂಡ ಎನ್‍ಡಿಆರ್‍ಎಫ್‍ನ 10ನೇ ಬೆಟಾಲಿಯನ್ ರಕ್ಷಣಾ ಸಿಬ್ಬಂದಿ, ಭಾರೀ ಮಳೆಯಾಗಿರುವ ಗಾಳಿಬೀಡು, ಮುಕ್ಕೋಡ್ಲು, ಸೂರ್ಲಬಿ ಹಾಗೂ ರಸ್ತೆ ಕುಸಿದಿರುವ ಮುಕ್ಕೋಡ್ಲು-ಆವಂಡಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಡಿಕೇರಿ ತಾಲೂಕು ವ್ಯಾಪ್ತಿಯ ಗಾಳಿಬೀಡುವಿನಲ್ಲಿ ಸೋಮವಾರ ಬೆಳಗೆ 7.45 ಗಂಟೆಗೆ ಕೊನೆಗೊಂಡಂತೆ 146.5 ಮಿ.ಮೀ. ಮಳೆಯಾಗಿದೆ. ಮುಕ್ಕೋಡ್ಲು-ಹೊದಕಾನ ಸಂಪರ್ಕ ಸೇತುವೆ ಹಾಗೂ ಭಗವತಿ ದೇವಾಲಯಕ್ಕೆ ತೆರಳುವ ತೂಗು ಸೇತುವೆ ಮುಳುಗಡೆಯಾಗುವ ಸ್ಥಿತಿಯಲ್ಲಿದೆ. ಹೊದಕಾನ ಸೇತುವೆಗೆ ಭಾರೀ ಪ್ರಮಾಣದ ಮರದ ದಿಮ್ಮಿಗಳು ಪ್ರವಾಹದಲ್ಲಿ ತೇಲಿ ಬಂದು ಬಡಿದಿರುವ ಪರಿಣಾಮ ಸೇತುವೆಗೆ ಭಾರೀ ಹಾನಿಯಾಗಿದೆ. ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿಕೆ ಯಾಗಿದ್ದು, ಪ್ರಸ್ತುತ ಸಂಗಮ ಪ್ರದೇಶ ಮುಳುಗಡೆಯಾಗಿದೆ. ಭಾಗಮಂಡಲ-ಅಯ್ಯಂಗೇರಿ ರಸ್ತೆಯಲ್ಲೂ ಪ್ರವಾಹದ ನೀರು ಇಳಿಕೆಯಾಗಿದೆ. ಸಂಪಾಜೆ ಅರೆಕಲ್ಲು, ತ್ಯಾಗತ್ತೂರು ಎಂಬಲ್ಲಿ ಭಾರೀ ಮರ ಬಿದ್ದು ವಿದುತ್ ಸಂಪರ್ಕ ಕಡಿತವಾಗಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗಿದೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರ್ಗಾಣೆ ಗ್ರಾಮದ 4 ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಗದ್ದೆಹಳ್ಳದ ಚೆಟ್ಟಳ್ಳಿ ರಸ್ತೆ ಮೇಲೆ ಮಳೆಯ ನೀರು ಹರಿಯುತ್ತಿದ್ದು ಪ್ರವಾಹದ ಭೀತಿ ಆವರಿಸಿದೆ. ನಾರ್ಗಾಣೆ ಗ್ರಾಮದ ನಬೀಸಾ, ಶಹೀದಾ, ಅಬೂಬಕರ್ ಮತ್ತಿತರರ ಮನೆಗಳಿಗೆ ನುಗ್ಗಿದ್ದು ಕೃಷಿ ಗದ್ದೆಗಳು ಜಲಾವೃತ್ತಗೊಂಡಿದೆ. ಏಕಾಏಕಿ ನೀರು ನುಗ್ಗಿರುವುದರಿಂದ ಮನೆಯಲ್ಲಿದ್ದ ಆಹಾರ ಧಾನ್ಯಗಳು, ಗೃಹಯೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯರುಗಳಾದ ಪಿ.ಆರ್.ಸುನಿಲ್ ಕುಮಾರ್, ರಫೀಕ್‍ಖಾನ್, ಪಿ.ಎಫ್.ಸಬಾಸ್ಟೀನ್, ಮಂಜುಳ ಹಾಗೂ ಗೀತಾ ಇವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತೀವ್ರ ನಿಗಾ ವಹಿಸಲು ಸೂಚಿಸಿದ್ದಾರೆ. ಪಂಚಾಯಿತಿಯಿಂದ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ.

ವಿರಾಜಪೇಟೆ ದಕ್ಕನಿ ಮೊಹಲ್ಲ ಎಂಬಲ್ಲಿ ಮನೆಯ ಹಿಂಭಾಗದಲ್ಲಿ ಅಲ್ಪ ಪ್ರಮಾಣದ ಭೂ ಕುಸಿತವಾಗಿದೆ. ಬಿರುನಾಣಿ ಬಕ್ಕೆರೆ ಎಂಬಲ್ಲಿ ನದಿ ಪ್ರವಾಹ ಮಟ್ಟದಲ್ಲಿ ಹರಿಯು ತ್ತಿದೆ. ಸೇತುವೆ ಈ ಸ್ಥಳದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಪ್ರವಾಹ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿರುವ 3 ಕುಟುಂಬಗಳಿಗೆ ಪಂಚಾಯಿತಿ ವತಿಯಿಂದ 15 ದಿನಗಳಿಗೆ ಸಾಕಾಗುವಷ್ಟು ಆಹಾರ, ಔಷಧಿ ಮತ್ತಿತ್ತರ ವಸ್ತುಗಳನ್ನು ನೀಡಲಾಗಿದೆ. ತೋಮರದ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಈ ಕೇಂದ್ರದಲ್ಲಿ 13 ಕುಟುಂಬಗಳ 43 ಮಂದಿ ಆಶ್ರಯ ಪಡೆದಿದ್ದು, ವಿರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ಆಹಾರ, ಔಷಧಿ ಸೇರಿದಂತೆ ದಿನಬಳಕೆ ವಸ್ತುಗಳನ್ನು ನೀಡಲು ದಾಸ್ತಾನು ಮಾಡಿಕೊಳ್ಳಲಾಗಿದೆ. ಕೊಯನಾಡು ಪ್ರವಾಹ ಸಂತ್ರಸ್ತರಿಗಾಗಿ ಕೊಯನಾಡುವಿನ ಗಣಪತಿ ದೇವಾಲಯದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಗಡಿ ಗ್ರಾಮವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇದೀಗ ಜಿಲ್ಲೆಯಲ್ಲಿ ಮತ್ತೆ ಬಿರುಸಿನ ಮಳೆ ಮುಂದುವರೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ರವರೆಗೆ “ಆರೆಂಜ್ ಅಲರ್ಟ್” ಘೋಷಣೆ ಮಾಡಲಾಗಿದೆ. ಕೊಡಗಿನ ಗಡಿಯಲ್ಲಿರುವ ಕರಿಕೆ, ಚೆಂಬು, ಪೆರಾಜೆ ಗ್ರಾಮಗಳಲ್ಲಿ ಸೋಮವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಮತ್ತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಅಲ್ಲಿನ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದರೆ ಇಂದು ಭೂಕಂಪನವಾಗಿರುವುದನ್ನು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಅಲ್ಲಗಳೆದಿದ್ದಾರೆ.

ಸರಣಿ ಕಂಪನಗಳಿಂದ ಗ್ರಾಮೀಣ ಭಾಗದ ಜನರು ಕಂಗಾಲಾಗಿದ್ದಾರೆ. ಚೆಂಬು ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ಬೆಳಗಿನ 8.30 ಗಂಟೆಗೆ ಕೊನೆಗೊಂಡಂತೆ 125.5 ಮಿ.ಮೀ ಮಳೆ ಸುರಿದಿದ್ದು, ಜೊತೆಯಲ್ಲೇ ಭೂ ಕಂಪಿಸಿರುವುದು ಗ್ರಾಮೀಣ ಜನರ ನಿದ್ದೆಗೆಡಿಸಿದೆ. ಭಾನುವಾರ ಬೆಳಗ್ಗೆ 6 ಗಂಟೆ 22 ನಿಮಿಷ 20 ಸೆಕೆಂಡ್‍ನಲ್ಲಿ ಚೆಂಬು, ಅರಂತೋಡು ಮತ್ತು ಸುತ್ತಲ ಪ್ರದೇಶಗಳಲ್ಲಿ ಕೆಲ ಕ್ಷಣ ಭೂಮಿ ಕಂಪಿಸಿತ್ತು. ರಿಕ್ಟರ್ ಮಾಪಕದಲ್ಲಿ ಕಂಪನದ ಪ್ರಮಾಣ 1.8ರಷ್ಟಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಕಳೆದ 21 ದಿನದಲ್ಲಿ ಕೊಡಗು ಮತ್ತು ಗಡಿ ಭಾಗದಲ್ಲಿ 9 ಬಾರಿ ಭೂಮಿ ಕಂಪಿಸಿದ್ದು, ಜನತೆಗೆ ತೀವ್ರ ಆತಂಕವನ್ನುಂಟುಮಾಡಿದೆ. ಈಗ ಸಂಭವಿಸಿರುವ ಭೂ ಕಂಪನಗಳಿಂದ ಆತಂಕ ಪಡಬೇಕಾಗಿಲ್ಲ ಎಂದು ಭೂ ವಿಜ್ಞಾನಿಗಳು ಅಭಯ ನೀಡುತ್ತಿದ್ದಾರೆ ಯಾದರೂ ಹಿಂದಿನ ದುರ್ಘಟನೆಗಳಿಂದಾಗಿ ಜನತೆ ಭಯ ಭೀತರಾಗಿದ್ದಾರೆ.

Translate »