ಕಾರುಗಳ ಮುಖಾಮುಖಿ ಡಿಕ್ಕಿ ಮಾವ, ಅಳಿಯ ಸಾವು
ಮೈಸೂರು

ಕಾರುಗಳ ಮುಖಾಮುಖಿ ಡಿಕ್ಕಿ ಮಾವ, ಅಳಿಯ ಸಾವು

July 12, 2022

ಮೈಸೂರು, ಜು.11 (ಆರ್‍ಕೆ)- ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿ ರುವ ಘಟನೆ ಹುಣಸೂರು ರಸ್ತೆಯ ಹೊಸಲು ಮಾರಮ್ಮ ದೇವಸ್ಥಾನದ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕು, ಬೈಲುಕುಪ್ಪೆ ನಿವಾಸಿಗಳಾದ ಮಾವ ಮೋಹನ್(60) ಹಾಗೂ ಅಳಿಯ ವಿನೋದ್‍ಕುಮಾರ್ ಸಾವನ್ನಪ್ಪಿದವರು. ಘಟನೆಯಲ್ಲಿ ಗಾಯಗೊಂಡಿರುವ ಅವರ ಮೂವರು ಸಂಬಂಧಿಕರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಸೂರಿನಿಂದ ಮಾರುತಿ ಆಲ್ಟೋ ಕಾರಿನಲ್ಲಿ ಹುಣಸೂರು ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಟೊಯೋಟಾ ಇನ್ನೋವಾ ಕಾರು, ಹೊಸಲು ಮಾರಮ್ಮ ದೇವಸ್ಥಾನದ ಆರ್ಚ್ ಸಮೀಪ ಹುಣಸೂರು ರಸ್ತೆ-ಕೆಆರ್ ನಗರ ರಸ್ತೆ ತಿರುವಿನ ಜಂಕ್ಷನ್ ಬಳಿ ಇಂದು ಮಧ್ಯಾಹ್ನ 1.15 ಗಂಟೆ ವೇಳೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಲ್ಟೋ ಕಾರಿನ ಮುಂಭಾಗ ಕುಳಿತಿದ್ದ ಮೋಹನ್ ಹಾಗೂ ಚಾಲನೆ ಮಾಡುತ್ತಿದ್ದ ವಿನೋದ್‍ಕುಮಾರ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಘಟನೆಯಿಂದ ಗಾಯಗಳಾಗಿ ನರಳುತ್ತಿದ್ದ ಮೂವರನ್ನು ಸಾರ್ವಜನಿಕರೇ ಮೈಸೂರಿನ ಕೆಆರ್ ಆಸ್ಪತ್ರೆಗೆ ಕರೆತಂದು ದಾಖಲಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಿಳಿಕೆರೆ ಠಾಣೆ ಇನ್ಸ್‍ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಇಂದು ಸಂಜೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹವನ್ನು ವಾರಸುದಾರರಿಗೆ ಒಪ್ಪಿಸಿದರು. ಇನ್ನೋವಾ ಕಾರಿನಲ್ಲಿದ್ದ ಐವರು ಸಣ್ಣಪುಟ್ಟ ಗಾಯಗಳಿದಂದ ಪಾರಾಗಿದ್ದಾರೆ. ಎರಡೂ ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Translate »