ಕೆಆರ್‍ಎಸ್‍ನಿಂದ 72 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ತುಂಬಿ ಹರಿಯುತ್ತಿರುವ ಕಾವೇರಿ ನದಿ, ವೆಲ್ಲೆಸ್ಲಿ ಸೇತುವೆ ಪ್ರವೇಶ ನಿರ್ಬಂಧ
ಮೈಸೂರು

ಕೆಆರ್‍ಎಸ್‍ನಿಂದ 72 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ತುಂಬಿ ಹರಿಯುತ್ತಿರುವ ಕಾವೇರಿ ನದಿ, ವೆಲ್ಲೆಸ್ಲಿ ಸೇತುವೆ ಪ್ರವೇಶ ನಿರ್ಬಂಧ

July 12, 2022

ಮೈಸೂರು, ಜು.11(ಆರ್‍ಕೆ)-ಒಳಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಕೆಆರ್‍ಎಸ್ ಅಣೆಕಟ್ಟೆಯಿಂದ ಅಧಿಕ ಪ್ರಮಾಣದ ನೀರನ್ನು ಹೊರ ಬಿಡಲಾಗು ತ್ತಿದ್ದು, ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.

ಇಂದು ಸಂಜೆ 6 ಗಂಟೆ ವೇಳೆಗೆ 72,112 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಅಣೆಕಟ್ಟೆಯ ಸುರಕ್ಷತೆ ದೃಷ್ಟಿ ಯಿಂದ 72,612 ಕ್ಯೂಸೆಕ್ ನೀರನ್ನು ಜಲಾಶಯದಿಂದ ಗೇಟ್‍ಗಳ ಮೂಲಕ ಕಾವೇರಿ ನದಿಗೆ ಬಿಡಲಾಗುತ್ತಿದ್ದು, ಪರಿಣಾಮ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಹಳೇ ಸೇತುವೆ ಬಳಿಗೆ ಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ಮಾಡಿದ್ದಾರೆ.

ಮೈದುಂಬಿ ಹರಿಯುತ್ತಿರುವ ಕಾವೇರಿಯ ಸೌಂದರ್ಯ ಕಣ್ತುಂಬಿಕೊಳ್ಳಲು ಮಳೆ ನಡುವೆಯೂ ಶ್ರೀರಂಗಪಟ್ಟಣ, ಪಶ್ಚಿಮ ವಾಹಿನಿ, ಗಂಜಾಂ ಬಳಿಯ ನಿಮಿಷಾಂಭ ದೇವಸ್ಥಾನ, ರಂಗನತಿಟ್ಟು ಪಕ್ಷಿಧಾಮದ ಬಳಿ ಜನರು ಹಾಗೂ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ರಾತ್ರಿಯಾಗುತ್ತಿದ್ದಂತೆಯೇ ಕೆಆರ್‍ಎಸ್ ಅಣೆಕಟ್ಟೆಯ ನೀರು ಹೊರಬಿಡುತ್ತಿರುವ ಸ್ಥಳಕ್ಕೆ ವಿಶೇಷ ವಿದ್ಯುದ್ದೀಪಾಲಂಕಾರ ಮಾಡಿರುವುದರಿಂದ ವರ್ಣರಂಜಿತ ದೃಶ್ಯವನ್ನು ಸಾವಿರಾರು ಮಂದಿ ವೀಕ್ಷಿಸುತ್ತಿದ್ದಾರೆ. ಪ್ರತೀದಿನ ಸಂಜೆ 6.55ರಿಂದ ರಾತ್ರಿ 8 ಗಂಟೆವರೆಗೆ, ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ಸಂಜೆ 6.55ರಿಂದ ರಾತ್ರಿ 9 ಗಂಟೆವರೆಗೆ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆ ಇದ್ದ ದಿನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲೂ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ತಿಳಿಸಿದ್ದಾರೆ.

Translate »