ವಿಕಲಚೇತನರು, ಹಿರಿಯ ನಾಗರಿಕರಿಗೆ ಮೂಲ ಆಧಾರ ಕೇಂದ್ರದ ಮಹತ್ವದ ಯೋಜನೆಗೆ ಚಾಮರಾಜನಗರ ಆಯ್ಕೆ
ಚಾಮರಾಜನಗರ

ವಿಕಲಚೇತನರು, ಹಿರಿಯ ನಾಗರಿಕರಿಗೆ ಮೂಲ ಆಧಾರ ಕೇಂದ್ರದ ಮಹತ್ವದ ಯೋಜನೆಗೆ ಚಾಮರಾಜನಗರ ಆಯ್ಕೆ

July 12, 2022

ಚಾಮರಾಜನಗರ, ಜು.11-ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅವಶ್ಯ ಹಾಗೂ ಆಧಾರ ವಾಗಿ 36 ಬಗೆಯ ಆಧುನಿಕ ಸಾಧನ-ಸಲಕರಣೆ ವಿತರಿಸಲು ಕೇಂದ್ರ ಸರ್ಕಾರ ದೇಶದ 36 ಲೋಕ ಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ರಾಜ್ಯದ ಏಕೈಕ ಕ್ಷೇತ್ರವಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಇದಕ್ಕೆ ಆಯ್ಕೆಯಾಗಿದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ಜಿಲ್ಲೆಯ ವಿಕಲಚೇತನರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ- ಸಲಕರಣೆಗಳನ್ನು ಉಚಿತವಾಗಿ ವಿತರಿಸುವ ಸಲುವಾಗಿ ಜು.19ರಿಂದ 22ರವರೆಗೆ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಜನತೆ ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾನವಿ ಮಾಡಿದರು.

ಜು.19ರಂದು ಹನೂರು ಪಟ್ಟಣದ ಬಿಆರ್‍ಸಿ ಸೆಂಟರ್, ಜು.20ರಂದು ಕೊಳ್ಳೇಗಾಲ ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ, ಜು.20ರಂದು ಗುಂಡ್ಲುಪೇಟೆ ಪಟ್ಟಣದ ಶಿಕ್ಷಕರ ಭವನ, ಜು.22ರಂದು ಚಾಮರಾಜನಗರ ಪಟ್ಟಣದ ಪೇಟೆ ಪ್ರೈಮರಿ ಶಾಲೆಯಲ್ಲಿ ಶಿಬಿರ ಏರ್ಪಡಿಸಲಾಗಿದೆ. ಆ ದಿನಗಳಂದು ಬೆಳಗ್ಗೆ 9 ಗಂಟೆಯಿಂದಲೇ ತಪಾಸಣೆ ಆರಂಭಿಸಲಾಗುತ್ತದೆ. ಒಂದೇ ದಿನದಲ್ಲಿ ತಪಾಸಣೆ ಪೂರ್ಣಗೊಳ್ಳದಿದ್ದಲ್ಲಿ ಮತ್ತೊಂದು ದಿನಕ್ಕೂ ವಿಸ್ತರಿಸಲಾಗುತ್ತದೆ ಎಂದರು.

ವಿಕಲಚೇತನರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಮನಗಂಡಿರುವ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ನೇತೃತ್ವದಲ್ಲಿ ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಕೃತಕ ಅಂಗ ತಯಾರಿಕಾ ಕಾರ್ಪೊರೇಷನ್, ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಆರೋಗ್ಯ ಇಲಾಖೆಗಳು ಸಹಕಾರ ನೀಡಲಿವೆ. ಜಿಲ್ಲಾ ಕೇಂದ್ರದಲ್ಲಿ ಈ ಹಿಂದೆಯೂ ಸಹ ಇಂತಹ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಆಯಾ ತಹಸೀಲ್ದಾರರು, ತಾಪಂ ಇಓಗಳು, ಸಿಡಿಓಗಳು ಹಾಗೂ ಪಿಡಿಓಗಳು ವೈಯಕ್ತಿಕ ಅಸಕ್ತಿ ವಹಿಸಿ ಆಯಾ ಭಾಗದ ಪ್ರತಿಯೊಬ್ಬ ವಿಕಲಚೇತನರನ್ನು ಗುರುತಿಸಿ ಅವರಿಗೆ ಯಾವುದೇ ತೊಂದರೆಯಾಗದಂತೆ ಪ್ರಯಾಣ, ಆತಿಥ್ಯ ಸೇರಿದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಿ ತಪಾಸಣಾ ಶಿಬಿರಗಳಿಗೆ ಕರೆತರಲಿದ್ದಾರೆ. ಜಿಲ್ಲೆಯ ಯಾವುದೇ ವಿಕಲಚೇತನರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಶಿಬಿರದಿಂದ ವಂಚಿತರಾಗದಂತೆ ಜವಾಬ್ದಾರಿಯುತವಾಗಿ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಶಿಬಿರಗಳಲ್ಲಿ ಅಂಗವಿಕಲತೆಯ ಪ್ರಮಾಣ ಪತ್ರ ಹಾಗೂ ಹಿರಿಯ ನಾಗರಿಕರಿಗೆ ಅಗತ್ಯ ದಾಖಲೆ ಆಧಾರದ ಮೇಲೆ ಸಲಕರಣೆಗಳನ್ನು ವಿತರಿಸಲಾಗುತ್ತದೆ. ಮಾಹಿತಿ ಸಂಗ್ರಹಣೆ ಹಾಗೂ ಅಗತ್ಯ ಕ್ರಮಗಳಿಗಾಗಿ ತಪಾಸಣಾ ಶಿಬಿರಗಳಿಗೆ ಕೇಂದ್ರದಿಂದ 4 ಅಧಿಕಾರಿಗಳನ್ನೊಳಗೊಂಡ ತಂಡ ಆಗಮಿಸಲಿದೆ ಎಂದು ಮಾಹಿತಿ ನೀಡಿದರು.

ಸಚಿವ ವಿ.ಸೋಮಣ್ಣ ಮಾತನಾಡಿ, ಕಾರ್ಯಕ್ರಮದ ಯಶಸ್ವಿ ಸಂಘಟನೆಗಾಗಿ ಡಿಸಿ, ಜಿಪಂ ಇಓ, ಡಿಹೆಚ್‍ಓ, ತಹಸೀಲ್ದಾರರು, ತಾಪಂ ಇಓಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು. ಶಾಸಕರಾದ ಎನ್.ಮಹೇಶ್ ಮಾತನಾಡಿ, ಜಿಲ್ಲೆಯಲ್ಲಿ 20464 ಅಂಗವಿಕಲರನ್ನು ಈಗಾಗಲೇ ಗುರುತಿಸಲಾಗಿದ್ದು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಎಲ್ಲಾ ವಿಕಲಚೇತನರಿಗೂ ಸೌಲಭ್ಯ ನೀಡುವ ನಿಟ್ಟಿನಲ್ಲಿ ತಪಾಸಣಾ ಶಿಬಿರಗಳ ಯಶಸ್ಸಿಗೆ ಶ್ರಮಿಸಲಾಗುವುದು ಎಂದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್.ನಿರಂಜನಕುಮಾರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಪಂ ಸಿಇಓ ಕೆ.ಎಂ.ಗಾಯತ್ರಿ, ಎಡಿಸಿ ಎಸ್.ಕಾತ್ಯಾಯಿನಿದೇವಿ, ಎಎಸ್ಪಿ ಕೆ.ಎಸ್.ಸುಂದರರಾಜು, ಎಸಿ ಗೀತಾ ಹುಡೇದ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ ಪತ್ರಿಕಾಗೋಷ್ಠಿಯಲ್ಲಿದ್ದರು.

Translate »