ಟಿಪ್ಪು ಸುಲ್ತಾನ್ ಈ ನೆಲದ ಮಗ, ವೀರ ಹೋರಾಟಗಾರ
ಮೈಸೂರು

ಟಿಪ್ಪು ಸುಲ್ತಾನ್ ಈ ನೆಲದ ಮಗ, ವೀರ ಹೋರಾಟಗಾರ

August 27, 2020

ಬೆಂಗಳೂರು, ಆ.26-`ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ. ದಕ್ಷಿಣ ಭಾಗದಲ್ಲಿ ಸ್ವಾತಂ ತ್ರ್ಯದ ಕಹಳೆ ಊದಿದ ವೀರ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಅಡಗೂರು ಹೆಚ್.ವಿಶ್ವನಾಥ್ ಹೇಳುವ ಮೂಲಕ ಟಿಪ್ಪುವಿನ ಹೆಸ ರೇಳಿದರೆ ಕೆರಳಿ ಕೆಂಡವಾಗುವ ಬಿಜೆಪಿ ವಲಯದಲ್ಲಿ ಭಾರೀ ಇರಿಸು-ಮುರಿಸಿಗೆ ಕಾರಣರಾಗಿದ್ದಾರೆ.

ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಕುರಿತು ಇಂದು ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕಮಾಂಡರ್ ಇನ್ ಚೀಫ್. ಅದೇ ರೀತಿ ದಕ್ಷಿಣ ಭಾಗ ದಲ್ಲಿ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯದ ಕಹಳೆ ಊದಿದವರು. ಗಾಂಧೀಜಿ ಯಿಂದ ಟಿಪ್ಪು ಸುಲ್ತಾನ್ ತನಕ ವಿದ್ಯಾರ್ಥಿಗಳು ಎಲ್ಲರ ಚರಿತ್ರೆಯನ್ನು ಓದಬೇಕು ಎಂದು ಹೇಳಿದರು.

ಬಿಜೆಪಿಯವರು ಟಿಪ್ಪು ಸುಲ್ತಾನ್ ನನ್ನು ವಿರೋಧಿಸುತ್ತಾರಲ್ಲ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗೆಲ್ಲ ಹೇಳ ಬಾರದು, ಟಿಪ್ಪು ಸುಲ್ತಾನ್ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದ ವ್ಯಕ್ತಿಯಲ್ಲ. ಆತ ಈ ನೆಲದ ಮಗ, ವೀರ ಹೋರಾಟಗಾರ ಎಂದರು.

ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಆಗಲೇಬೇಕು. ರಾಯಣ್ಣ ಸ್ವಾತಂತ್ರ್ಯಕ್ಕೆ ಹೋರಾಡಿದ ಅಪ್ರತಿಮ ವೀರ. ಅವರ ತ್ಯಾಗ, ಬಲಿದಾನ ದಿಂದ ಸ್ವಾತಂತ್ರ್ಯ ಸಿಕ್ಕಿದೆ. ಅವರ ಪ್ರತಿಮೆ ಸ್ಥಾಪಿಸು ವುದು ಸರಕಾರದ ಕರ್ತವ್ಯ ಎಂದು ವಿಶ್ವನಾಥ್ ಹೇಳಿದರು.

ಸಚಿವನಾಗುವ ವಿಶ್ವಾಸ: ಸಚಿವ ಸ್ಥಾನಕ್ಕಾಗಿ ನಾನು ಮುಖ್ಯಮಂತ್ರಿ ಎದುರು ಯಾವ ಬೇಡಿಕೆಯನ್ನು ಇಟ್ಟಿಲ್ಲ. ಅವರೇ ತಿಳಿದು ಸಚಿವ ಸ್ಥಾನ ಕೊಡಬೇಕು. ನಾನು ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ.
1978ರಲ್ಲೇ ನಾನು ರಾಜಕೀಯ ಪ್ರವೇಶ ಮಾಡಿದವನು. ನನಗೆ ಸುದೀರ್ಘ ಆಡಳಿತದ ಅನುಭವ ಇದೆ. ಈ ಅನುಭವವನ್ನು ಸರಕಾರ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಸಿಎಂಗಳಿಗೆ ಮಾಡಲು ಕೆಲಸವಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂಬ ನಂಬಿಕೆಯಿದೆ. ಅದೇ ರೀತಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅನ್ನೋದು ಸೋನೆ ಮಳೆ ಇದ್ದಂತೆ ಬರುತ್ತೇ, ಹೋಗುತ್ತೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿಗೆ ಈಗ ಮಾಡಲು ಏನು ಕೆಲಸವಿಲ್ಲ. ಆದುದರಿಂದ, ಸರಕಾರದ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿರುತ್ತಾರೆ ಎಂದು ಅವರು ದೂರಿದರು.

‘ಮೈಸೂರು ಹುಲಿ’ ಖ್ಯಾತಿಯ ಟಿಪ್ಪು ನಿರ್ಮಾಣ ಮಾಡಿರುವ ದೇವಸ್ಥಾನ ಮತ್ತು ಕೋಟೆಗಳನ್ನು ನಾಶಮಾಡಲು ಆಗುತ್ತಾ? ಬ್ರಿಟೀಷರ ವಿರುದ್ಧ ಅವರು ಹೋರಾಡಿದ್ದನ್ನು ಸುಳ್ಳು ಎಂದು ಹೇಳಲಾಗುತ್ತದೆಯೇ? ಬಿಜೆಪಿ ನಾಯಕರು ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ, ಎಚ್.ವಿಶ್ವನಾಥ್ ಸತ್ಯವನ್ನು ಹೇಳಿದ್ದಾರೆ. ಹೀಗಾಗಿ ನಾನು ಅವರ ಹೇಳಿಕೆಯನ್ನು ಬೆಂಬಲಿಸುವೆ.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಬಿಜೆಪಿ ಸರಕಾರ ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಪಠ್ಯ ಪುಸ್ತಕದಿಂದ ತೆಗೆಯುವ ಕೆಲಸ ಮಾಡುತ್ತಿದೆ. ಆದರೆ, ಬಿಜೆಪಿ ಪಕ್ಷದ ನಾಯಕ ಎಚ್.ವಿಶ್ವನಾಥ್ ಟಿಪ್ಪು ಈ ದೇಶ ಹಾಗೂ ಈ ನೆಲದ ಮಣ್ಣಿನ ಮಗ ಎನ್ನುತ್ತಾರೆ. ಬ್ರಿಟೀಷರ ವಿರುದ್ಧ ಹೋರಾಡಿದ ಹೋರಾಟಗಾರ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಬಿಜೆಪಿ ನಾಯಕರೇ ಈಗಲಾದರೂ ಸತ್ಯ ಅರ್ಥವಾಯಿತೇ?
– ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಜಿ ಅಧ್ಯಕ್ಷ

ಟಿಪ್ಪು ಮೈಸೂರು ಮಹಾರಾಜರು ಮತ್ತು ಮದಕರಿ ನಾಯಕರನ್ನು ವಂಚಿಸಿದ ವ್ಯಕ್ತಿ. ವಿಶ್ವನಾಥ್ ಅವರು ವಾಸ್ತವ ಸಂಗತಿ ತಿಳಿದು ಮಾತನಾಡಬೇಕು. ಬೇರೆ ಪಕ್ಷದಿಂದ ಬಂದವರು ನಮ್ಮ ಪಕ್ಷದ ತತ್ವ ಸಿದ್ಧಾಂತವನ್ನು ಪಾಲಿಸಬೇಕು. ಅದ್ಯಾಕೆ ಅವರು ಹೀಗೆ ಮಾತನಾಡಿದರೋ ತಿಳಿಯುತ್ತಿಲ್ಲ. – ಶೋಭಾ ಕರಂದ್ಲಾಜೆ, ಸಂಸದೆ

ಟಿಪ್ಪು ಸುಲ್ತಾನ್ ಮತಾಂತರ ಹಾಗೂ ದೌರ್ಜನ್ಯ ನಡೆಸಿದಂತಹದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಶ್ವನಾಥ್ ಅವರು ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೋ ನನಗೆ ತಿಳಿಯದು. ಬಿಜೆಪಿಯ ನಿಲುವು ಸ್ಪಷ್ಟವಾಗಿದೆ.
-ಆರ್.ಅಶೋಕ್, ಕಂದಾಯ ಸಚಿವ

Translate »