ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯಲು ಸಿಎಂ ಬೊಮ್ಮಾಯಿಗೆ ಪ್ರಧಾನಿ ಮೋದಿ ಟಿಪ್ಸ್
News

ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯಲು ಸಿಎಂ ಬೊಮ್ಮಾಯಿಗೆ ಪ್ರಧಾನಿ ಮೋದಿ ಟಿಪ್ಸ್

July 26, 2022

ಬೆಂಗಳೂರು, ಜು. 25 (ಕೆಎಂಶಿ)-ಕರ್ನಾ ಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಬಹಳ ಶ್ರಮ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಿವಿಮಾತು ಹೇಳಿದ್ದಾರೆ.

ದೆಹಲಿಯಲ್ಲಿಂದು ಬಿಜೆಪಿ ರಾಜ್ಯಗಳ ಮುಖ್ಯ ಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಗಳ ಜೊತೆ ಪಕ್ಷ ಸಂಘಟನೆ, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ, ಸರ್ಕಾರ ಮತ್ತು ಪಕ್ಷದಲ್ಲಿನ ಸಾಮರಸ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ದಕ್ಷಿಣ ಭಾರತ ದಲ್ಲಿ ಸದ್ಯಕ್ಕೆ ನಮಗಿರುವುದು ಕರ್ನಾಟಕ ಮಾತ್ರ. ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ನಾವು ವಿಸ್ತರಣೆ ಮಾಡಬೇಕಾದರೆ ನಾವು ಮತ್ತೆ ಅಧಿಕಾರವನ್ನು ಹಿಡಿಯಲೇಬೇಕು.
ಕನಾಟಕ ವಿಧಾನಸಭೆಗೆ ಇನ್ನು ಕೇವಲ 9-10 ತಿಂಗಳು ಮಾತ್ರ ಬಾಕಿ ಇದೆ. ಈ ಸಮಯದಲ್ಲಿ ಗೆಲುವಿನ ಗುರಿ ಮುಟ್ಟಲು ಏನೆಲ್ಲಾ ಮಾಡಬೇಕೆಂಬುದರ ಬಗ್ಗೆ ಮಾಹಿತಿ ಪಡೆದಿದ್ದಲ್ಲದೆ ಒಂದಷ್ಟು ಸಲಹೆಗಳನ್ನು ಮುಖ್ಯ ಮಂತ್ರಿಗಳಿಗೆ ಪ್ರಧಾನಿಯವರು ನೀಡಿದ್ದಾರೆ.

ಗೆಲುವಿನ ಗುರಿ ಮುಟ್ಟಲು ಸರ್ಕಾರದ ಕಾರ್ಯಕ್ರಮಗಳೇನು ಎಂದು ಪ್ರಶ್ನಿಸಿದ್ದಾರೆ. ನಮ್ಮಿಂದ ಯಾವುದಾದರೂ ಅಭಿವೃದ್ಧಿ ಕಾರ್ಯಗಳ ಚಾಲನೆಗೆ ನಿಶಾನೆ ದೊರೆತಿಲ್ಲವೇ ಎಂದೂ ಕೇಳಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಂಡ ಮುಖ್ಯಮಂತ್ರಿಗಳು ಕೆಲವು ನೀರಾವರಿ ಯೋಜನೆ ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಮುಖ ವಿಷಯ ಪ್ರಸ್ತಾಪಿ ಸಿರುವುದಲ್ಲದೆ, ಇವುಗಳಿಗೆ ತಕ್ಷಣ ಕೇಂದ್ರ ಅನುಮತಿ ನೀಡಿದರೆ ರಾಜ್ಯದ ಬಹು ಜನರ ಬೇಡಿಕೆಗಳ ಈಡೇರಿಸಿದಂತಾಗುತ್ತದೆ. ಇವು ಬಹಳ ವರ್ಷ ಗಳಿಂದ ನೆನೆಗುದಿಗೆ ಬಿದ್ದಿವೆ. ನಾವು ಕಾನೂನಾತ್ಮಕವಾಗಿ ಒಂದೆಡೆ ಹೋರಾಟ ನಡೆಸಿ, ಕೆಲವು ಗಳಲ್ಲಿ ಜಯ ಸಾಧಿಸಿದ್ದೇವೆ. ಮತ್ತೆ ಕೆಲವು ವಿಷಯಗಳಲ್ಲಿ ಕೇಂದ್ರದ ಅನುಮತಿ ಬೇಕಾಗಿದೆ ಎಂದಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನೀವು ನಮಗೆ ಎಷ್ಟು ಸಮಯ ಕೊಡುತ್ತೀರೋ ಅಷ್ಟು ನಮ್ಮದಲ್ಲದ ಮತಗಳನ್ನು ಪಡೆಯಲು ಸಾಧ್ಯ ಎಂದು ಬೊಮ್ಮಾಯಿ ಅವರು ವಿವರಿಸಿದ್ದಾರೆ ಎನ್ನಲಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆ ಯತ್ತ ನಾನು ಮತ್ತು ಗೃಹ ಸಚಿವ ಅಮಿತ್ ಷಾ ಹೆಚ್ಚಿನ ಸಮಯ ನೀಡುತ್ತೇವೆ. ನಿಮ್ಮಲ್ಲಿನ 30 ಜಿಲ್ಲೆಗಳಲ್ಲೂ ಕಾರ್ಯಕ್ರಮಗಳನ್ನು ರೂಪಿಸಿ, ನಾನು ಸರ್ಕಾರಿ ಕಾರ್ಯಕ್ರಮ ಹಾಗೂ ಪಕ್ಷದ ಬೃಹತ್ ಸಮಾವೇಶಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

ಅಮಿತ್ ಷಾ ಅವರು ಕರ್ನಾಟಕದಲ್ಲಿ ಎರಡು ಮೂರು ವಾರಗಳ ಕಾಲ ಬಿಡಾರ ಹೂಡಿ, ನಿಮ್ಮಲ್ಲಿನ ಪರಿಸ್ಥಿತಿ ಅವಲೋಕಿಸಿ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಎಲ್ಲಾ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಈಗಾಗಲೇ ಬಂದಿರುವ ಸಮೀಕ್ಷೆಗಳನ್ನು ಆಧಾರವಾಗಿಟ್ಟುಕೊಂಡು ನೀವು ಚುನಾವಣಾ ಕೆಲಸ ಆರಂಭಿಸಿ ಎಂದು ಪ್ರಧಾನಿ ಯವರು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ವಿರೋಧಿ ಕಾಂಗ್ರೆಸ್ ಪಕ್ಷ ಮತ್ತೆ ರಾಜ್ಯದಲ್ಲಿ ತಲೆ ಎತ್ತದಂತೆ ನೋಡಿಕೊಳ್ಳಬೇಕು. ಇದಕ್ಕೆ ತಕ್ಷಣದಿಂದಲೇ ಕಾರ್ಯಕ್ರಮ ರೂಪಿಸಿ, ತಾವು ಮತದಾರರನ್ನು ಸೆಳೆಯಲು ಏನೆಲ್ಲ ಮಾಡಬೇಕು, ಅದನ್ನು ಮಾಡುವ ಭರವಸೆಯಿತ್ತಿದ್ದಾರೆ. ರಾಜ್ಯವನ್ನು ಎ,ಬಿ ಮತ್ತು ಸಿ ಎಂದು ವರ್ಗೀಕರಿಸಿರುವ ಬಿಜೆಪಿ ವರಿಷ್ಠರಿಗೆ ಪಕ್ಷ ಸ್ವಯಂಬಲದ ಮೇಲೆ ಗೆಲ್ಲುವುದಿಲ್ಲ ಎಂಬ ಸೂಕ್ಷ್ಮ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷಕ್ಕಿಂತ ಸ್ವಲ್ಪ ಮುಂದಿದ್ದರೂ ಸರ್ಕಾರ ರಚಿಸಲು ಕೆಲ ಸ್ಥಾನಗಳ ಕೊರತೆಯಾಗಲಿದೆ ಎಂದು ಸರ್ವೇ ವರದಿಗಳು ಹೇಳಿದ್ದು, ಅದೇ ಕಾಲಕ್ಕೆ ಗೆದ್ದೇ ಗೆಲ್ಲುವ ಹಾಲಿ ಶಾಸಕರಲ್ಲಿ ಕಾಂಗ್ರೆಸ್ ಪಕ್ಷದವರೇ ಹೆಚ್ಚು ಎಂಬುದು ಬಿಜೆಪಿ ವರಿಷ್ಠರಿಗೆ ಸಿಕ್ಕಿರುವ ಮಾಹಿತಿ. ಇದೇ ರೀತಿ ಬಿ ಗುಂಪಿನಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿರುವವರ ಸಂಖ್ಯೆ ಬಿಜೆಪಿಯಲ್ಲಿ ಹೆಚ್ಚಿದ್ದು,ಸಿ ಗುಂಪಿನ ಪ್ರಕಾರ, ಸೋಲುವವರ ಸಂಖ್ಯೆ ಕಾಂಗ್ರೆಸ್‍ನಲ್ಲಿ ಜಾಸ್ತಿ ಎಂಬುದು ಪಕ್ಷದ ವರಿಷ್ಠರಿಗೆ ತಲುಪಿರುವ ಮಾಹಿತಿ. ಹೀಗಾಗಿ ಎ ಗುಂಪಿನಲ್ಲಿರುವ ಗೆದ್ದೇ ಗೆಲ್ಲುವ ಕಾಂಗ್ರೆಸ್ ಶಾಸಕರ ಸಂಖ್ಯೆ ಯನ್ನು ಕಡಿಮೆ ಮಾಡಬೇಕು,ಬಿ ಗುಂಪಿನಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿರುವ ಬಿಜೆಪಿಗೆ ಮತ್ತಷ್ಟು ಬಲ ನೀಡಬೇಕು ಮತ್ತು ಸೋಲುವುದು ಖಚಿತ ಎಂಬುದನ್ನು ಸೂಚಿಸುವ ಸಿ ಗುಂಪಿನಲ್ಲಿ ಕಾಂಗ್ರೆಸ್ ಪಕ್ಷದವರೇ ಹೆಚ್ಚಿರುವಂತೆ ನೋಡಿಕೊಳ್ಳಬೇಕು ಎಂಬುದು ವರಿಷ್ಠರ ಯೋಚನೆ. ಮುಂದಿನ ಚುನಾವಣೆಯಲ್ಲಿ ನಾವು ಇಪ್ಪತ್ತೈದರಿಂದ ಮೂವತ್ತು ಸೀಟುಗಳನ್ನು ಹೆಚ್ಚುವರಿಯಾಗಿ ಗೆಲ್ಲಿಸಿಕೊಡುತ್ತೇವೆ.ಆದರೆ ನೀವು ಕನಿಷ್ಠ ತೊಂಭತ್ತು ಕ್ಷೇತ್ರಗಳಲ್ಲಿ ಗೆಲುವು ಗಳಿಸಲು ಸನ್ನದ್ಧರಾಗಿರಬೇಕು ಎಂದು ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ತಿಳಿಸಿದ್ದಾರೆ. ವರಿಷ್ಠರ ಸೂಚನೆ ದಕ್ಕಿರುವ ಹಿನ್ನೆಲೆಯಲ್ಲಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಈ ತಿಂಗಳ 28ರಿಂದ ರಾಜ್ಯಾದ್ಯಂತ ಸಾಧನಾ ಸಮಾ ವೇಶಗಳನ್ನು ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ. 28 ರಂದು ದೊಡ್ಡಬಳ್ಳಾಪುರದಲ್ಲಿ ಮೊದಲ ಸಾಧನಾ ಸಮಾವೇಶ ನಡೆಯಲಿದ್ದು ತದ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಾಧನಾ ಸಮಾವೇಶ ನಡೆಸಲು ರಾಜ್ಯದ ನಾಯಕರು ನಿರ್ಧರಿಸಿದ್ದಾರೆ.

ಸಮಾವೇಶಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಕಡ್ಡಾಯವಾಗಿ ಭಾಗವಹಿಸಲಿದ್ದಾರೆ. ಸಮಾವೇಶದ ಸಂದರ್ಭದಲ್ಲಿ ವಿವಿಧ ಪಕ್ಷಗಳ ಸಾವಿರಾರು ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುವ ಕೆಲಸ ನಡೆಯುತ್ತಿದ್ದು, ಅದರೊಂದಿಗೆ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮಗಳು ನಡೆಯಲಿವೆ.

Translate »