ಮಾಜಿ ಸಿಎಂ ಬಿಎಸ್‍ವೈಗೆ ಡಬಲ್ ಧಮಾಕಾ
News

ಮಾಜಿ ಸಿಎಂ ಬಿಎಸ್‍ವೈಗೆ ಡಬಲ್ ಧಮಾಕಾ

August 18, 2022

ಬೆಂಗಳೂರು, ಆ.17(ಕೆಎಂಶಿ)-ಮುಂಬರುವ ವಿಧಾನ ಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿ ಬಿಜೆಪಿ ನೇಮಕ ಮಾಡಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧ್ಯಕ್ಷತೆಯ ಮಂಡಳಿಯಲ್ಲಿ ಪ್ರಧಾನಿ ನರೇಂದ್ರಮೋದಿ, ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹನ್ನೊಂದು ಮಂದಿ ಇದ್ದಾರೆ. ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿರುವ ಯಡಿ ಯೂರಪ್ಪ ಇದೇ ಸಂದರ್ಭದಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿಯೂ ನೇಮಕ ಗೊಂಡಿದ್ದಾರೆ. ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ನಂತರ ಯಡಿಯೂರಪ್ಪ ಅವರಿಗೆ ಉನ್ನತ ಹುದ್ದೆ ನೀಡಿ, ರಾಜ್ಯದಲ್ಲಿ ವೀರಶೈವ ಮತಗಳನ್ನು ಹಿಡಿದಿಟ್ಟು ಕೊಳ್ಳುವ ಕೆಲಸ ಮಾಡಿದೆ. ಚುನಾವಣೆಯಲ್ಲಿ ಅಭ್ಯರ್ಥಿ ಗಳ ಆಯ್ಕೆ, ಪಕ್ಷದ ಸರ್ಕಾರ ರಚನೆ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಈ ಮಂಡಳಿಯೇ ತೆಗೆದುಕೊಳ್ಳುತ್ತಿದೆ. ಅಂತಹ ಮಂಡಳಿಯಲ್ಲಿ ಕರ್ನಾಟಕಕ್ಕೆ ಎರಡು ಸ್ಥಾನ ದೊರೆತಿದೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಕೂಡಾ ಸಂಸದೀಯ ಮತ್ತು ಚುನಾವಣಾ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ.

ದಿವಂಗತ ಅನಂತಕುಮಾರ್ ಈ ಮೊದಲು ಎರಡು ಉನ್ನತ ಮಟ್ಟದ ಸಮಿತಿಯಲ್ಲೂ ಸದಸ್ಯರಾಗಿದ್ದರು. ಆನಂತರ ಯಡಿಯೂರಪ್ಪ ಮತ್ತು ಸಂತೋಷ್ ಅವರಿಗೆ ಈ ಸ್ಥಾನ ದೊರೆತಿದೆ. ಇತ್ತೀಚೆಗೆ ಕರ್ನಾಟಕಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರ ಜತೆ ಸುಧೀರ್ಘ ಚರ್ಚೆ ನಡೆಸಿ ಹಿಂತಿರುಗಿದ ನಂತರ ಈ ನೇಮಕಾತಿ ನಡೆದಿದ್ದು, ಇದು ಯಡಿಯೂರಪ್ಪ ಅವರನ್ನು ಪಕ್ಷ ನಿರ್ಲಕ್ಷಿಸುವುದಿಲ್ಲ ಎಂಬ ವರಿಷ್ಟರ ಸಂದೇಶದಂತಿದೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಯಡಿಯೂರಪ್ಪ ಅವರು ಬೇರೆ ಯಾವ ಸ್ಥಾನಗಳನ್ನೂ ಪಡೆಯಲು ನಿರಾಸಕ್ತಿ ತೋರಿಸಿದ್ದರಿಂದ ಅವರಿಗೆ ರಾಜ್ಯಪಾಲ ಹುದ್ದೆ ನೀಡುವ ವರಿಷ್ಟರ ಯೋಚನೆ ಹಾಗೇ ಕರಗಿತ್ತು. ಆದರೆ ಇದೀಗ ಯಡಿಯೂರಪ್ಪ ಅವರ ಬಲ ಕರ್ನಾಟಕದಲ್ಲಿ ಪಕ್ಷಕ್ಕೆ ಅಗತ್ಯ ಎಂಬುದನ್ನು ಮನಗಂಡಿರುವ ವರಿಷ್ಟರು ಯಡಿಯೂರಪ್ಪ ಅವರನ್ನು ಕೇಂದ್ರ ಸಂಸದೀಯ ಮಂಡಳಿಗೆ ನೇಮಕ ಮಾಡುವ ಮೂಲಕ ಸಮಾಧಾನಪಟ್ಟು ಕೊಂಡಿದ್ದಾರೆ. ಉನ್ನತ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸಲು ಪಕ್ಷ ಮತ್ತು ಸರ್ಕಾರಕ್ಕೆ ತುರ್ತು ಸರ್ಜರಿಯ ಅಗತ್ಯವಿದೆ ಎಂದು ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿವರಿಸಿದ್ದರು. ಯಡಿಯೂರಪ್ಪ ಅವರಿಗೆ ಗೌರವದ ಸ್ಥಾನ ನೀಡಿರುವ ವರಿಷ್ಟರು ಕರ್ನಾಟಕದಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಸರ್ಜರಿ ಮಾಡಲು ತಯಾರಿ ನಡೆಸಿದ್ದಾರೆ ಎಂಬುದು ಇದೇ ಮೂಲಗಳ ಹೇಳಿಕೆ. ಕೇಂದ್ರ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನ ದೊರೆತ ನಂತರ ರಾಜ್ಯ ಬಿಜೆಪಿ ಮತ್ತು ಸರ್ಕಾರದಲ್ಲೂ ಬದಲಾವಣೆಯಾಗುವ ಸಾದ್ಯತೆ ಇದೆ.

Translate »