ಜಂಬೂ ಸವಾರಿಯಲ್ಲಿ ಭಾಗವಹಿಸಲು  ಕಲಾತಂಡಗಳಿಂದ ಅರ್ಜಿ ಆಹ್ವಾನ
ಮೈಸೂರು

ಜಂಬೂ ಸವಾರಿಯಲ್ಲಿ ಭಾಗವಹಿಸಲು ಕಲಾತಂಡಗಳಿಂದ ಅರ್ಜಿ ಆಹ್ವಾನ

August 20, 2022

ಮೈಸೂರು, ಆ.19(ಎಸ್‍ಬಿಡಿ)-ಮೈಸೂರು ದಸರಾ ಮಹೋ ತ್ಸವದ ಅತ್ಯಾಕರ್ಷಕ ಜಂಬೂ ಸವಾರಿಯಲ್ಲಿ ಭಾಗವಹಿಸಲು ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಬಾರಿ ಅತ್ಯಂತ ವೈಭವದಿಂದ ದಸರಾ ಮಹೋತ್ಸವ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಚಟುವಟಿಕೆ ಗಳು ಗರಿಗೆದರಿವೆ. ಮುಖ್ಯವಾಗಿ ನವರಾತ್ರಿ ನಂತರ ವಿಜಯ ದಶಮಿ ಯಂದು ನೆರವೇರುವ ಜಂಬೂಸವಾರಿ ಮೆರುಗು ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಿದ್ದು, ತಜ್ಞ ಸಮಿತಿ ಮೂಲಕ ಆಯ್ಕೆ ಮಾಡಿ ಅಂತಿಮ ಪಟ್ಟಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ.

ಸೆ.10ರ ಗಡುವು: ನವರಾತ್ರಿ ಉತ್ಸವ ಸೆ.26ರಂದು ಚಾಲನೆ ಪಡೆಯಲಿದ್ದು, ಅ.5ಕ್ಕೆ ಜಂಬೂಸವಾರಿ ನೆರವೇರಲಿದೆ. ಅದರಲ್ಲಿ ಭಾಗವಹಿಸಲು ಇಚ್ಛಿಸುವ ಎಲ್ಲಾ ಜಿಲ್ಲೆಗಳ ಸಾಂಸ್ಕøತಿಕ ಹಾಗೂ ಜಾನಪದ ಕಲಾತಂಡಗಳು ಸೆ.10ರೊಳಗೆ ಅರ್ಜಿ ಸಲ್ಲಿಸಬೇಕಿದೆ. ತಂಡದ ಉತ್ತಮ ಗುಣಮಟ್ಟದ ಫೋಟೋ, ಸದಸ್ಯರ ವಿವರ, ಅಂಚೆ ವಿಳಾಸ, ಮುಖ್ಯಸ್ಥರ ಮೊಬೈಲ್ ಸಂಖ್ಯೆಯನ್ನೊಳಗೊಂಡ ಅರ್ಜಿಯನ್ನು `ಉಪ ವಿಶೇಷಾಧಿಕಾರಿಗಳು, ದಸರಾ ಮೆರವಣಿಗೆ ಉಪಸಮಿತಿ ಹಾಗೂ ಪೊಲೀಸ್ ಆಯುಕ್ತರು, ಮೈಸೂರು ನಗರ’ ಅಥವಾ `ಸಹ ಸಂಚಾಲಕರು, ದಸರಾ ಮೆರವಣಿಗೆ ಉಪ ಸಮಿತಿ ಮತ್ತು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು’ ಈ ವಿಳಾಸಕ್ಕೆ ತಲುಪಿಸಬೇಕಿದೆ.

ತಜ್ಞರು ಆಯ್ಕೆ: ಅಗತ್ಯ ಲಗತ್ತುಗಳೊಂದಿಗೆ ಅರ್ಜಿ ಸಲ್ಲಿಸುವ ಕಲಾತಂಡಗಳಗಳಲ್ಲಿ ನಿಗದಿತ ಸಂಖ್ಯೆಯ ತಂಡಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ. ಕಲಾತಂಡಗಳು ಪ್ರಸ್ತುತಪಡಿಸುವ ಕಲಾಪ್ರಕಾರ, ಅದರ ವಿಶೇಷತೆ, ಕಲಾವಿದರ ಪೋಷಾಕು ಮತ್ತಿತರ ಅಂಶಗಳ ಆಧಾರದಲ್ಲಿ ತಜ್ಞರ ಸಮಿತಿ ಆಯ್ಕೆ ಮಾಡಲಿದೆ. ಹೀಗೆ ಆಯ್ಕೆಯಾಗುವ ಕಲಾತಂಡಗಳಿಗೆ ಜಂಬೂಸವಾರಿ ಮೆರವಣಿಗೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ದಸರಾ ಮೆರವಣಿಗೆ ಹಾಗೂ ಪಂಜಿನ ಕವಾಯತು ಉಪಸಮಿತಿಯ ಉಪ ವಿಶೇಷಾಧಿಕಾರಿಯಾದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ವಿಶೇಷತೆಗೆ ಆದ್ಯತೆ: ನಾಡದೇವತೆ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿ ಪ್ರತಿಷ್ಠಾಪಿತ ಚಿನ್ನದ ಅಂಬಾರಿಯನ್ನು ಗಜರಾಜ ಹೊತ್ತು ಸಾಗುವುದನ್ನು ಕಣ್ತುಂಬಿಕೊಂಡು ಧನ್ಯರಾಗುವ ಜನ, ಇದರೊಂದಿಗಿನ ವೈಭವದ ಮೆರವಣಿಗೆಯನ್ನೂ ಆಸ್ವಾದಿಸುತ್ತಾರೆ. ಗಜಪಡೆಯ ಜೊತೆ ವಿವಿಧ ಕಲಾತಂಡಗಳು ಅರಮನೆಯಿಂದ ಬನ್ನಿಮಂಟಪದವರೆಗೂ ಮೆರವಣಿಗೆಯಲ್ಲಿ ತೆರಳುತ್ತವೆ. ಕಂಸಾಳೆ, ವೀರಗಾಸೆ, ಮರಗೋಲು, ಡೊಳ್ಳು ಕುಣಿತ ಇನ್ನಿತರ ಕಲಾ ಪ್ರಕಾರಗಳ ಪ್ರದರ್ಶನ ಸಹಜ. ಈ ಸಾಂಪ್ರದಾಯಿಕ ಕಲಾತಂಡಗಳು ಮತ್ತಷ್ಟು ಆಕರ್ಷಣೀಯ ಪ್ರದರ್ಶನ ನೀಡಲು ಸಜ್ಜಾಗಿವೆ ಎನ್ನಲಾಗಿದೆ. ಒಟ್ಟಾರೆ ಈ ಬಾರಿ ಜಂಬೂಸವಾರಿಯಲ್ಲಿ ಹೊಸತನದೊಂದಿಗೆ ಸಾಂಪ್ರದಾಯಿಕ ಕಲೆ ಆಸ್ವಾದನೆಗೆ ಜನ ಕಾತುರರಾಗಿದ್ದಾರೆ.

Translate »